ಐಫೋನ್ 15 ಲಾಂಚ್ ಬೆನ್ನಲ್ಲೇ iOS 17 ಮತ್ತು iPadOS 17 ಲಾಂಚ್ ಡೇಟ್ ಬಹಿರಂಗ!
ಟೆಕ್ ದಿಗ್ಗಜ ಆಪಲ್ ಕಂಪೆನಿ ತಡ ರಾತ್ರಿ ನಡೆದ ಆಪಲ್ ವಂಡರ್ ಲಸ್ಟ್ ಈವೆಂಟ್‌ನಲ್ಲಿ ಐಫೋನ್ 15 ಸರಣಿಯನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಆಪಲ್ ವಾಚ್ ಸೀರಿಸ್ 9 ಅನ್ನು ಕೂಡ ಅನಾವರಣಗೊಳಿಸಿದೆ. ಅಲ್ಲದೆ ಐಒಎಸ್ 17, ಐಪ್ಯಾಡ್ 17, ಮ್ಯಾಕ್ ಸೊನೊಮಾ, ವಾಚ್OS 10 ಮತ್ತು tvOS 17 ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ.
ಹೌದು, ಟೆಕ್ ದೈತ್ಯ ಆಪಲ್ ಕಂಪೆನಿ ತನ್ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ಗಳ (OS) ಬಿಡುಗಡೆ ದಿನಾಂಕಗಳನ್ನು ದೃಢಪಡಿಸಿದೆ. ಇದರಲ್ಲಿ iOS 17 ಆಪರೇಟಿಂಗ್ ಸಿಸ್ಟಂ ಕೂಡ ಒಂದಾಗಿದೆ. ಹಾಗಂತ ಈ ಹೊಸ OS ಅಪ್ಡೇಟ್ ಲಭ್ಯವಿರುವ ಎಲ್ಲಾ ಐಫೋನ್ ಮಾದರಿಗಳಿಗೆ ಹೊರತರುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ iOS 17 ಮತ್ತು iPadOS 17 ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

iOS 17 ಮತ್ತು iPadOS 17 ಫೀಚರ್ಸ್ ಹೇಗಿದೆ?
ಆಪಲ್ ಕಂಪೆನಿ ಹೊಸ iOS 17 ಸಾಫ್ಟ್‌ವೇರ್ ಅಪ್‌ಡೇಟ್ ಕಸ್ಟಮೈಸ್ ಮಾಡಿದ ಕಾಂಟ್ಯಾಕ್ಟ್ ಪೋಸ್ಟರ್‌ಗಳನ್ನು ಪರಿಚಯಿಸುತ್ತದೆ. ಇದು ಒಳಬರುವ ಕರೆಯಲ್ಲಿ ಸಂಪರ್ಕವು ಹೇಗೆ ಕಾಣಿಸಿಕೊಳ್ಳಬೇಕೆಂದು ಬಳಕೆದಾರರು ಬಯಸುತ್ತಾರೆ ಹಾಗೆ ಸೆಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಥರ್ಡ್-ಪಾರ್ಟಿ ಕರೆ ಮಾಡುವ ಅಪ್ಲಿಕೇಶನ್‌ಗಳಿಗೂ ಲಭ್ಯವಿರುತ್ತವೆ. ಇದೀಗ ಬಳಕೆದಾರರು ಲೈವ್ ವಾಯ್ಸ್‌ಮೇಲ್‌ನ ರಿಯಲ್-ಟೈಂ ಪ್ರತಿಲೇಖನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಸದ್ಯ iOS 17 ಅನ್ನು ಸೆಪ್ಟೆಂಬರ್ 18 ರಿಂದ ಲಭ್ಯವಾಗಲಿದೆ ಎನ್ನಲಾಗಿದೆ.
ಇದಲ್ಲದೆ iOS 17 ಆಪರೇಟಿಂಗ್ ಸಿಸ್ಟಂ ಫೇಸ್‌ಟೈಮ್ ಮತ್ತು ಸಂದೇಶಗಳು ಸೇರಿದಂತೆ ಸಂವಹನ ಅಪ್ಲಿಕೇಶನ್‌ಗಳಿಗೆ ಕೆಲವು ನವೀಕರಣಗಳನ್ನು ತಂದಿದೆ. ಇದೀಗ ಫೇಸ್ ಟೈಂ ರಿಸೀವರ್ ಆಡಿಯೋ ಅಥವಾ ವೀಡಿಯೊ ಕರೆಯನ್ನು ತೆಗೆದುಕೊಳ್ಳದಿದ್ದರೆ ಸಂದೇಶಗಳನ್ನು ರೆಕಾರ್ಡ್ ಮಾಡುವ ಮತ್ತು ಕಳುಹಿಸುವ ಸಾಮರ್ಥ್ಯವನ್ನು ಸಹ ಬೆಂಬಲಿಸಲಿದೆ. ಇದಲ್ಲದೆ, ಬಳಕೆದಾರರು ಆಪಲ್‌ಟಿವಿ ಮೂಲಕ ಫೇಸ್‌ಟೈಂ ಕಾಲ್ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ. ಜೊತೆಗೆ ಕರೆಯನ್ನು ಟಿವಿಗೆ ಬದಲಾಯಿಸುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಏರ್‌ಡ್ರಾಪ್, ನೇಮ್‌ಡ್ರಾಪ್, ಆಟೋಕರೆಕ್ಟ್, ಡಿಕ್ಟೇಶನ್, ಪ್ರೈವೆಸಿ ಅಪ್ಡೇಟ್ಸ್, ಏರ್‌ಪ್ಲೇ, ಆಪಲ್ ಮ್ಯೂಸಿಕ್ ಮತ್ತು ಸಫಾರಿ ಬ್ರೌಸಿಂಗ್‌ಗೆ ಅಪ್ಡೇಟ್‌ಗಳನ್ನು ಸಹ ತರಲಿದೆ.
ಇನ್ನು iPadOS 17 ನಲ್ಲಿ ಕಸ್ಟಮೈಸ್ ಮಾಡಬಹುದಾದ ಲಾಕ್ ಸ್ಕ್ರೀನ್ ಮತ್ತು ಸಂವಾದಾತ್ಮಕ ವಿಜೆಟ್‌ಗಳನ್ನು ಕಾಣಬಹುದಾಗಿದೆ. ಇದು ನಿಮ್ಮ ಐಪ್ಯಾಡ್‌ನಲ್ಲಿ PDF ಗಳು ಅಥವಾ ಟಿಪ್ಪಣಿಗಳನ್ನು ಓದುವುದಕ್ಕೆ ಸುಲಭ ಅವಕಾಶ ನೀಡಲಿದೆ. ಜೊತೆಗೆ ಐಒಎಸ್ 17 ರಂತೆಯೇ ಸಂದೇಶಗಳು, ಫೇಸ್‌ಟೈಮ್ ಮತ್ತು ಸಫಾರಿಯಲ್ಲಿ ಹೊಸ ಸಂವಾದಾತ್ಮಕ ಟೂಲ್‌ಗಳನ್ನು ನೀಡಲಿದೆ. ಅಲ್ಲದೆ ಆಪಲ್ ಆರೋಗ್ಯ ಅಪ್ಲಿಕೇಶನ್ ಅನ್ನು ಐಪ್ಯಾಡ್‌ಗೆ ತಂದಿದ್ದು, ಬಳಕೆದಾರರು ತಮ್ಮ ಆರೋಗ್ಯ ಡೇಟಾವನ್ನು ಪರಿಶೀಲಿಸಲು ಅವಕಾಶ ದೊರಕಿಸಿಕೊಡಲಿದೆ.
iOS 17 ಮತ್ತು iPadOS 17 ಅನ್ನು ಯಾವೆಲ್ಲಾ ಡಿವೈಸ್ ಬೆಂಬಲಿಸಲಿದೆ
ಐಫೋನ್ ಮತ್ತು ಐಪ್ಯಾಡ್‌ಗಾಗಿ ಆಪಲ್ ಕಂಪೆನಿ ಪರಿಚಯಿಸುತ್ತಿರುವ ಹೊಸ ಸಾಫ್ಟ್‌ವೇರ್ ಸಿಸ್ಟಂಗಳಾದ iOS 17 ಮತ್ತು iPadOS 17 ಇದೇ ಸೆಪ್ಟೆಂಬರ್ 18 ರಿಂದ ಬಳಕೆದಾರರಿಗಾಗಿ ಲಭ್ಯವಾಗಲಿದೆ. ಈ ಹಿಂದೆ ಆಪಲ್ ಕಂಪೆನಿ ಘೋಷಣೆ ಮಾಡಿರುವಂತೆ iOS 17 ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್, ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಐಫೋನ್ 13ಪ್ರೊ ಮ್ಯಾಕ್ಸ್, ಐಫೋನ್ 12, ಅನ್ನು ಬೆಂಬಲಿಸಲಿದೆ.
ಇನ್ನು ಐಪ್ಯಾಡ್OS 17 ಅನ್ನು iPad (6 ನೇ ತಲೆಮಾರಿನ ಮತ್ತು ನಂತರದ), iPad mini (5 ನೇ ತಲೆಮಾರಿನ ಮತ್ತು ನಂತರದ), iPad Air (3 ನೇ ತಲೆಮಾರಿನ ಮತ್ತು ನಂತರದ), 12.9-inch iPad Pro (2 ನೇ ತಲೆಮಾರಿನ ಮತ್ತು ನಂತರದ) ಅನ್ನು ಬೆಂಬಲಿಸಲಿದೆ.


Click it and Unblock the Notifications








