ಐಫೋನ್ ಯೂಸರ್ಸ್ ಇಲ್ಲಿ ನೋಡಿ!..ಆಪಲ್ iOS 26.2 ಸ್ಟೇಬಲ್ ಅಪ್ಡೇಟ್ ಲೈವ್!
ಟೆಕ್ ದೈತ್ಯ ಆಪಲ್ ತನ್ನ ಐಫೋನ್ ಬಳಕೆದಾರರಿಗಾಗಿ ಹೊಸ iOS 26.2 ಅಪ್‌ಡೇಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡ iOS 26 ಆಪರೇಟಿಂಗ್ ಸಿಸ್ಟಮ್‌ನ ಎರಡನೇ ದೊಡ್ಡ ಅಪ್‌ಡೇಟ್ ಇದಾಗಿದ್ದು, ಇತ್ತೀಚಿನ ವಾರಗಳಲ್ಲಿ ಡೆವಲಪರ್ ಮತ್ತು ಪಬ್ಲಿಕ್ ಬೀಟಾ ಹಂತದಲ್ಲಿ ಪರೀಕ್ಷೆ ನಡೆಸಿದ ನಂತರ ಇದೀಗ ಸ್ಥಿರ ಆವೃತ್ತಿಯಾಗಿ ಲಭ್ಯವಾಗಿದೆ. ಈ ಅಪ್‌ಡೇಟ್ ಐಫೋನ್ ಬಳಕೆ ಅನುಭವವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಹೆಚ್ಚುವರಿ ಕಸ್ಟಮೈಜೇಶನ್, ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಮನರಂಜನಾ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ.
iOS 26.2 ನಲ್ಲಿ ಹೊಸದಾಗಿ ಏನಿದೆ?
ಹೊಸ iOS 26.2 ಅಪ್‌ಡೇಟ್‌ನಲ್ಲಿ ಆಪಲ್ ಮ್ಯೂಸಿಕ್ ಬಳಕೆದಾರರಿಗೆ ವಿಶೇಷ ಸುಧಾರಣೆಗಳನ್ನು ನೀಡಲಾಗಿದೆ. ಈಗ Favourite Songs ಪ್ಲೇಲಿಸ್ಟ್ ನೇರವಾಗಿ Top Picks ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಕೇಳುವ ಹಾಡುಗಳಿಗೆ ಸುಲಭ ಪ್ರವೇಶ ಸಿಗುತ್ತದೆ. ಜೊತೆಗೆ, ಹಾಡುಗಳ ಲಿರಿಕ್ಸ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ವೀಕ್ಷಿಸುವ ಅವಕಾಶ ನೀಡಲಾಗಿದೆ. ಸಂಗೀತ ಪ್ರಿಯರಿಗೆ ಇದು ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ.
ಲಾಕ್ ಸ್ಕ್ರೀನ್ ಮತ್ತು Liquid Glass UI ಗೆ ಹೊಸ ರೂಪ
iOS 26.2 ಲಾಕ್ ಸ್ಕ್ರೀನ್‌ನಲ್ಲಿ ಹೆಚ್ಚಿನ ವೈಯಕ್ತಿಕರಣ ಆಯ್ಕೆಗಳನ್ನು ಪರಿಚಯಿಸಿದೆ. ಘಡಿಯ ವಿನ್ಯಾಸವನ್ನು ಬದಲಾಯಿಸುವ ಜೊತೆಗೆ Liquid Glass ಥೀಮ್‌ನ ಪಾರದರ್ಶಕತೆಯನ್ನು ನಿಯಂತ್ರಿಸಬಹುದು. ಇದರಿಂದ ಬಳಕೆದಾರರು ತಮ್ಮ ಐಫೋನ್ ಲುಕ್ ಅನ್ನು ಇನ್ನಷ್ಟು ವೈಯಕ್ತಿಕವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ವೇಳೆ, Enhanced Safety Alerts ಎಂಬ ಹೊಸ ಸುರಕ್ಷತಾ ವ್ಯವಸ್ಥೆಯನ್ನೂ ಸೇರಿಸಲಾಗಿದೆ. ಇದು ನೆರೆ, ಪ್ರಕೃತಿ ವಿಕೋಪಗಳು ಮತ್ತು ತುರ್ತು ಪರಿಸ್ಥಿತಿಗಳ ಬಗ್ಗೆ ಮುಂಚಿತ ಎಚ್ಚರಿಕೆ ನೀಡುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.
Reminders ಮತ್ತು AirDrop ಗೆ ಭದ್ರತಾ ಅಪ್‌ಗ್ರೇಡ್
iOS 26.2 ಅಪ್‌ಡೇಟ್‌ನಲ್ಲಿ Reminders ಆ್ಯಪ್‌ಗೆ ಅಲಾರ್ಮ್ ವ್ಯವಸ್ಥೆಯನ್ನು ಸೇರಿಸಲಾಗಿದೆ. ತುರ್ತು ಕೆಲಸಗಳಿಗೆ ಅಲಾರ್ಮ್, ಸ್ನೂಝ್ ಆಯ್ಕೆ ಮತ್ತು Live Activity ಬೆಂಬಲ ದೊರೆಯುತ್ತದೆ. ಇತ್ತ AirDrop ಬಳಸುವಾಗ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಅಪರಿಚಿತ ವ್ಯಕ್ತಿಗೆ ಫೈಲ್ ಕಳುಹಿಸುವ ಸಂದರ್ಭದಲ್ಲಿ ಈಗ ಹೆಚ್ಚುವರಿ ಪರಿಶೀಲನೆಗಾಗಿ ಕೋಡ್ ನಮೂದಿಸಬೇಕಾಗುತ್ತದೆ.

Podcasts, Games ಮತ್ತು Accessibility ವಿಭಾಗದಲ್ಲಿ ಸುಧಾರಣೆಗಳು
ಪಾಡ್‌ಕಾಸ್ಟ್ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಸೃಷ್ಟಿಯಾಗುವ ಅಧ್ಯಾಯಗಳ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದರಿಂದ ದೀರ್ಘ ಎಪಿಸೋಡ್‌ಗಳಲ್ಲಿ ಬೇಕಾದ ಭಾಗವನ್ನು ಸುಲಭವಾಗಿ ಹುಡುಕಬಹುದು. ಜೊತೆಗೆ, ಪಾಡ್‌ಕಾಸ್ಟ್‌ನಲ್ಲಿ ಉಲ್ಲೇಖವಾದ ಇತರೆ ಪಾಡ್‌ಕಾಸ್ಟ್‌ಗಳಿಗೆ ನೇರವಾಗಿ ಫಾಲೋ ಮಾಡುವ ಲಿಂಕ್‌ಗಳೂ ಲಭ್ಯವಾಗಿವೆ. ಗೇಮ್ಸ್ ಆ್ಯಪ್‌ನಲ್ಲಿ ಗೇಮ್ಸ್ ಅನ್ನು ವರ್ಗ, ಗಾತ್ರ ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ ಫಿಲ್ಟರ್ ಮಾಡಬಹುದು. ಆಟದ ವೇಳೆ ರಿಯಲ್-ಟೈಮ್ ಸ್ಕೋರ್ ಬ್ಯಾನರ್‌ಗಳು ಹಾಗೂ Backbone ಮತ್ತು Razer ಸೇರಿದಂತೆ ಜನಪ್ರಿಯ ಕಂಟ್ರೋಲರ್‌ಗಳಿಗೆ ಉತ್ತಮ ಬೆಂಬಲ ನೀಡಲಾಗಿದೆ.
ಇತರೆ ಪ್ರಮುಖ ಬದಲಾವಣೆಗಳು
Accessibility Settings ನಲ್ಲಿ ಅಲರ್ಟ್‌ಗಳಿಗೆ ಸ್ಕ್ರೀನ್ ಫ್ಲಾಶಿಂಗ್ ಆಯ್ಕೆಯನ್ನು ಸೇರಿಸಲಾಗಿದೆ. Apple News Today Feedನ ಮೇಲ್ಭಾಗದಲ್ಲಿ ಹೊಸ ಶಾರ್ಟ್‌ಕಟ್ ಲಿಂಕ್ ಕಾಣಿಸಿಕೊಳ್ಳುತ್ತದೆ. ಅಲ್ಲದೆ, Home ಆ್ಯಪ್‌ನಲ್ಲಿ ಮಲ್ಟಿಪ್ಯಾಕ್ ಆಕ್ಸೆಸರಿ ಪೇರಿಂಗ್ ಮಾಡುವಾಗ ಒಂದೇ ಸೆಟಪ್ ಕೋಡ್ ಬಳಸುವ ಸೌಲಭ್ಯವೂ ಲಭ್ಯವಾಗಿದೆ.
iOS 26.2 ಅಪ್‌ಡೇಟ್ : ಇನ್‌ಸ್ಟಾಲ್ ಮಾಡುವ ವಿಧಾನ
ಆಪಲ್ ತಿಳಿಸಿರುವಂತೆ, ಈಗಾಗಲೇ ಬೀಟಾ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಂಡಿದ್ದ ಹಾಗೂ iOS 26.2 ಬೀಟಾ ಬಳಸುತ್ತಿದ್ದ ಎಲ್ಲ ಐಫೋನ್‌ಗಳು ಈ ಸ್ಥಿರ ಅಪ್‌ಡೇಟ್‌ಗೆ ಅರ್ಹವಾಗಿವೆ. ಅಪ್‌ಡೇಟ್ ಮಾಡಲು Settings ಆಪ್ ತೆರೆಯಿಸಿ, General > Software Update ಗೆ ಹೋಗಬೇಕು. ನಿಮ್ಮ ಐಫೋನ್ ಲಭ್ಯವಿರುವ ಅಪ್‌ಡೇಟ್ ಅನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ನಂತರ Download & Install ಆಯ್ಕೆ ಮಾಡಿ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡರೆ, ಇನ್‌ಸ್ಟಾಲೇಶನ್ ಪ್ರಕ್ರಿಯೆ ಆರಂಭವಾಗುತ್ತದೆ. ಅಪ್‌ಡೇಟ್ ಸಮಯದಲ್ಲಿ ಫೋನ್ ಒಂದಕ್ಕಿಂತ ಹೆಚ್ಚು ಬಾರಿ ರೀಸ್ಟಾರ್ಟ್ ಆಗಬಹುದು. ಈ ಹೊಸ ವೈಶಿಷ್ಟ್ಯಗಳು ಐಫೋನ್ ಅನ್ನು ಇನ್ನಷ್ಟು ಸ್ಮಾರ್ಟ್ ಮತ್ತು ಉಪಯುಕ್ತವಾಗಿಸುತ್ತವೆ.


Click it and Unblock the Notifications








