ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಸೇಲ್ ಆದ ಫೋನ್ ಯಾವುದು ಗೊತ್ತಾ?
ಭಾರತದಲ್ಲಿ ಈ ವರ್ಷ ಯಾವ ಸ್ಮಾರ್ಟ್‌ಫೋನ್ ಹೆಚ್ಚು ಮಾರಾಟವಾಗಿದೆ ಎಂದು ಕೇಳಿದರೆ ನಿಮ್ಮ ಉತ್ತರ ಹೇಗಿರಬಹುದು?..ಖಂಡಿತವಾಗಿಯೂ ನೀವು ಯಾವುದಾದರೂ ಕಡಿಮೆ ಬೆಲೆಯ ಜನಪ್ರಿಯ ಸ್ಮಾರ್ಟ್‌ಫೋನ್ ಹೆಸರೊಂದನ್ನು ಹೇಳುತ್ತೀರಾ ಅಲ್ಲವೇ?. ಆದರೆ, 2025ರಲ್ಲಿ ದೇಶದಲ್ಲೇ ಅತ್ಯಧಿಕ ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ ಐಫೋನ್ 16 ಹೊರಹೊಮ್ಮಿದೆ. ಸಾಮಾನ್ಯವಾಗಿ ದುಬಾರಿ ಫೋನ್‌ಗಳ ಬ್ರ್ಯಾಂಡ್ ಎಂದೇ ಗುರುತಿಸಲ್ಪಟ್ಟಿದ್ದ ಐಫೋನ್, ಇದೀಗ ದೇಶದಲ್ಲೇ ಅತ್ಯಧಿಕ ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ, ಕಡಿಮೆ ಬೆಲೆಯ ಅನೇಕ ಆಂಡ್ರಾಯ್ಡ್ ಮಾದರಿಗಳನ್ನು ಹಿಂದಿಕ್ಕಿದೆ.
ಹೌದು, ಜನಪ್ರಿಯ ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, 2025ರ ನವೆಂಬರ್ ವರೆಗೆ ಭಾರತದಲ್ಲಿ ಐಫೋನ್ 16 ಸುಮಾರು 65 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. ಇದನ್ನು ಹೋಲಿಕೆಯಾಗಿ ನೋಡುವುದಾದಾದರೆ, ಬಜೆಟ್ ವಿಭಾಗದಲ್ಲಿ ಜನಪ್ರಿಯವಾಗಿರುವ Vivo Y29 5G ಇದೇ ಅವಧಿಯಲ್ಲಿ ಸುಮಾರು 47 ಲಕ್ಷ ಯೂನಿಟ್‌ಗಳ ಮಾರಾಟ ಕಂಡಿದೆ. ಗಮನಾರ್ಹ ಅಂಶವೆಂದರೆ, ಐಫೋನ್ 16 ಬೆಲೆ Vivo ಫೋನ್‌ಗಿಂತ ಮೂರರಷ್ಟು ಹೆಚ್ಚು ಇದ್ದರೂ ಸಹ, ಗ್ರಾಹಕರ ಆಯ್ಕೆ ಆಪಲ್ ಕಡೆಗೆ ತಿರುಗಿರುವುದು ದೇಶದ ಮೊಬೈಲ್ ಉದ್ಯಮದಲ್ಲಿ ಅತ್ಯಾಕರ್ಷಕ ಬದಲಾವಣೆಯಾಗಿದೆ.

ಇದಷ್ಟೇ ಅಲ್ಲದೆ, ಸುಮಾರು ₹47,000 ಆರಂಭಿಕ ಬೆಲೆಯ ಐಫೋನ್ 15 ಕೂಡ 2025ರ ಅತ್ಯಧಿಕ ಮಾರಾಟವಾದ ಟಾಪ್ 5 ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಬೆಲೆಯ ಫೋನ್‌ಗಳು ಆಳ್ವಿಕೆ ನಡೆಸುತ್ತಿದ್ದ ಭಾರತೀಯ ಮಾರುಕಟ್ಟೆಯಲ್ಲಿ, ಈ ಬೆಳವಣಿಗೆ ಗ್ರಾಹಕರ ಮನೋಭಾವದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ. ಈ ಬದಲಾವಣೆಗೆ ಪ್ರಮುಖ ಕಾರಣವಾಗಿ ಸುಲಭ ಖರೀದಿ ಆಯ್ಕೆಗಳು ಕಾಣಿಸುತ್ತಿವೆ. ನೋ-ಕಾಸ್ಟ್ EMI, ಬ್ಯಾಂಕ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಡೀಲ್‌ಗಳು ದುಬಾರಿ ಫೋನ್‌ಗಳನ್ನು ಹೆಚ್ಚಿನ ಜನರಿಗೆ ತಲುಪುವಂತಾಗಿವೆ.
ಭಾರತದಲ್ಲಿ ಆಪಲ್ ಐಫೋನ್ ಯಶಸ್ಸು ಕಾರಣವೇನು?
ತಜ್ಞರ ಪ್ರಕಾರ, ಭಾರತದಲ್ಲಿ "ಪ್ರೀಮಿಯಮೈಸೇಶನ್" ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತಿದೆ ಮತ್ತು ಈ ಬದಲಾವಣೆಯ ಪ್ರಮುಖ ಮುಖವೇ ಐಫೋನ್. ಒಮ್ಮೆ ಬಜೆಟ್ ಫೋನ್‌ಗಳೇ ಮೊದಲ ಆಯ್ಕೆಯಾಗಿದ್ದ ಭಾರತೀಯ ಗ್ರಾಹಕರು, ಇದೀಗ ಗುಣಮಟ್ಟ, ಬ್ರ್ಯಾಂಡ್ ಮತ್ತು ಅನುಭವಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಈ ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಜೊತೆಗೆ, ಭಾರತದಲ್ಲಿ ಆಪಲ್ ಕೈಗೊಂಡಿರುವ ದೀರ್ಘಕಾಲೀನ ತಂತ್ರವೂ ಈ ಯಶಸ್ಸಿಗೆ ಕಾರಣವಾಗಿದೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಕಂಪನಿ ಭಾರತದಲ್ಲಿ ಸ್ಥಳೀಯ ಉತ್ಪಾದನೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿದೆ.
ಆಪಲ್ ಭಾರತವನ್ನು ಕೇವಲ ಉತ್ಪಾದನಾ ಕೇಂದ್ರವಲ್ಲದೆ ಪ್ರಮುಖ ಮಾರಾಟ ಮಾರುಕಟ್ಟೆಯಾಗಿ ರೂಪಿಸುವ ಪ್ರಯತ್ನವೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಕೇವಲ 2025ರ, ಒಂದು ವರ್ಷದಲ್ಲೇ ಬೆಂಗಳೂರು, ಪುಣೆ ಮತ್ತು ನೋಯ್ಡಾದಲ್ಲಿ ಮೂರು ಹೊಸ ಆಪಲ್ ಸ್ಟೋರ್‌ಗಳನ್ನು ತೆರೆಯುವ ಮೂಲಕ, ಕಂಪನಿಯ ಭಾರತದಲ್ಲಿನ ರಿಟೇಲ್ ಹಾಜರಾತಿ ಇನ್ನಷ್ಟು ಬಲವಂತಗೊಂಡಿದೆ. ಇದರಿಂದ ದೇಶದಲ್ಲಿನ ಆಪಲ್ ಸ್ಟೋರ್‌ಗಳ ಸಂಖ್ಯೆ ಐದಕ್ಕೆ ಏರಿದೆ. ಸಾಮಾನ್ಯ ಜನರು ಕೂಡ ಆಪಲ್ ಐಫೋನ್‌ಗಳ ಒಲವನ್ನು ಹೊಂದುತ್ತಿರುವುದು ಮತ್ತು ಆಪಲ್‌ನ ಪ್ರಚಾರ ತಂತ್ರವು ದೇಶದಲ್ಲಿ ಐಫೋನ್‌ಗಳ ಹಣೆಬರಹವನ್ನೇ ಬದಲಾಯಿಸಿವೆ.
ಇನ್ನು, ಇದೇ ವರದಿಯು ಐಫೋನ್ 15 ಮತ್ತು ಐಫೋನ್ 16 ಸೇರಿ 2025ರ ನವೆಂಬರ್ ವರೆಗೆ ಭಾರತದಲ್ಲಿ ಮಾರಾಟವಾದ ಒಟ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಸುಮಾರು 8 ಶೇಕಡಾ ಪಾಲನ್ನು ಹೊಂದಿವೆ ಎಂದು ತಿಳಿಸಿದೆ. ಇದು ಪ್ರೀಮಿಯಂ ವಿಭಾಗದ ಫೋನ್‌ಗಳಿಗೆ ದೊಡ್ಡ ಸಾಧನೆ ಎನ್ನಬಹುದು. ಆಸಕ್ತಿದಾಯಕವಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಒಟ್ಟಾರೆ ಬೆಳವಣಿಗೆ 2025ರಲ್ಲಿ ಸ್ಥಿರವಾಗಿಯೇ ಇರುವ ನಿರೀಕ್ಷೆಯಿದೆ. ಈ ವರ್ಷ ಒಟ್ಟು ಶಿಪ್‌ಮೆಂಟ್ ಸುಮಾರು 158 ಮಿಲಿಯನ್ ಯೂನಿಟ್‌ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ಕೆಲವು ವರ್ಷಗಳ ಹೋಲಿಕೆಯಲ್ಲಿ ಕೇವಲ ಸ್ವಲ್ಪ ಮಾತ್ರ ಏರಿಕೆ. ಇಂತಹ ಪರಿಸ್ಥಿತಿಯಲ್ಲೂ ಆಪಲ್ ತನ್ನ ಮಾರಾಟವನ್ನು ಹೆಚ್ಚಿಸಿರುವುದು ವಿಶೇಷ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನಿಮ್ಮ ಪ್ರಕಾರ ಭಾರತದಲ್ಲಿ ಆಪಲ್ ಐಫೋನ್‌ಗಳ ಈ ಪರಿ ಬೆಳವಣಿಗೆಗೆ ಕಾರಣ ಏನಿರಬಹುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








