Phone 17 Air: ನಿರೀಕ್ಷಿತ ಬಣ್ಣ ಆಯ್ಕೆಗಳು ಮತ್ತು ಫೀಚರ್ಸ್ ಮಾಹಿತಿ!
ಟೆಕ್ ದೈತ್ಯ ಸಂಸ್ಥೆ ಆಪಲ್ ಈ ಸೆಪ್ಟೆಂಬರ್‌ನಲ್ಲಿ iPhone 17, iPhone 17 Air, iPhone 17 pro ಮತ್ತು iPhone 17 pro max ಅನ್ನು ಒಳಗೊಂಡಿರುವ iPhone 17 ಶ್ರೇಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಈ ಹೊಸ ಆಪಲ್ iPhone ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಇನ್ನೂ ಕೆಲವು ತಿಂಗಳುಗಳು ಇರುವಾಗಲೇ, ಆನ್‌ಲೈನಿನಲ್ಲಿ ಬಹುನಿರೀಕ್ಷಿತ iPhone 17 Air ಫೋನಿನ ಬಣ್ಣ ಆಯ್ಕೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈಗಾಗಲೇ iPhone 17 Air ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿರುವುದರಿಂದ, ಈ ಹೊಸ ಮಾಹಿತಿಯು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟಿಹಾಕಿದೆ.
ಟಿಪ್‌ಸ್ಟರ್ ಮಜಿನ್ ಬು (@MajinBuOfficial) ಅವರ ಪ್ರಕಾರ, iPhone 17 Air ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬ್ಲ್ಯಾಕ್, ಸಿಲ್ವರ್, ಲೈಟ್ ಗೋಲ್ಡ್ ಮತ್ತು ಲೈಟ್ ಬ್ಲೂ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರಬಹುದು ಎಂದು ಇವರು ಸೂಚಿಸಿದ್ದು, ತಿಳಿ ನೀಲಿ ರೂಪಾಂತರವು ಮ್ಯಾಕ್‌ಬುಕ್ ಏರ್ M4 ನಲ್ಲಿ ಕಂಡುಬರುವ ಸ್ಕೈ ಬ್ಲೂ ಛಾಯೆಯನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಸೋರಿಕೆಗಳು iPhone 17 Air ಫೋನ್ ಆಪಲ್‌ನ ಅತ್ಯಂತ ತೆಳ್ಳಗಿನ ಸಾಧನಗಳಲ್ಲಿ ಒಂದಾಗಿ ಬರುತ್ತಿದೆ ಎಂಬುದಾಗಿ ಸೂಚಿಸಿವೆ. ಈ ಕುರಿತಂತೆ ಮತ್ತಷ್ಟು ಮಾಹಿತು ಈ ಕೆಳಕಂಡಂತಿದೆ.
iPhone 17 Air - ಇಲ್ಲಿಯವರೆಗೆ ನಾವು ತಿಳಿದಿರುವುದು
"yeux1122" ಎಂಬ ಕೊರಿಯನ್ ಬ್ಲಾಗ್ ನೇವರ್‌ನ ಪ್ರಕಾರ, iPhone 17 Air ಕೇವಲ 145 ಗ್ರಾಂ ತೂಗುತ್ತದೆ ಮತ್ತು 5.5 ಮಿಮೀ ದಪ್ಪವನ್ನು ಹೊಂದಿರುತ್ತದೆ. ಇದು ನಿಜವಾದರೆ, ಇದು ಆಪಲ್ ಇದುವರೆಗೆ ತಯಾರಿಸಿದ ಅತ್ಯಂತ ತೆಳ್ಳಗಿನ ಮತ್ತು ಹಗುರವಾದ ಐಫೋನ್‌ಗಳಲ್ಲಿ ಒಂದಾಗಲಿದೆ. ಇದನ್ನು iPhone 13 Mini ನಂತಹ ಮಾದರಿಗಳಿಗೆ ಹೋಲಿಸಬಹುದು. ವಿನ್ಯಾಸದ ದೃಷ್ಟಿಯಿಂದ ಇದು ಪ್ರಶಂಸನೀಯವಾಗಿದ್ದರೂ, ಬ್ಯಾಟರಿ ಸಾಮರ್ಥ್ಯವು ಕೆಲವರನ್ನು ನಿರಾಶೆಗೊಳಿಸಬಹುದು ಎಂದು ಹೇಳಲಾಗಿದೆ. ಏಕೆಂದರೆ, iPhone 17 Air ಫೋನ್ ಕೇವಲ 2,800mAh ಬ್ಯಾಟರಿಯನ್ನು ಹೊಂದಿರಲಿರುವ ಸಾಧ್ಯತೆ ಇದೆ.

ದಿ ಇನ್ಫಾರ್ಮೇಶನ್ ವರದಿಯ ಪ್ರಕಾರ, ಆಪಲ್‌ನ ಆಂತರಿಕ ಪರೀಕ್ಷೆಯು ಕೇವಲ ಶೇಕಡಾ 60-70 ರಷ್ಟು ಬಳಕೆದಾರರು ಮಾತ್ರ iPhone 17 Air ನಿಂದ ಪೂರ್ಣ ದಿನದ ಬಳಕೆಯನ್ನು ಪಡೆಯಬಹುದು ಎಂದು ತೋರಿಸಿದೆ. ಇದು ಆಪಲ್ ಸಾಮಾನ್ಯವಾಗಿ ತನ್ನ ಇತರ ಮಾದರಿಗಳೊಂದಿಗೆ ತಲುಪುವ 80-90 ಪ್ರತಿಶತ ಗುರಿಯಿಂದ ಗಮನಾರ್ಹ ಕುಸಿತವಾಗಿದೆ. ಇದನ್ನು ನಿಭಾಯಿಸಲು, ಆಪಲ್ ಕಂಪನಿಯು ಬ್ಯಾಟರಿ ಕೇಸ್ ಅನ್ನು ಐಚ್ಛಿಕ ಪರಿಕರವಾಗಿ ನೀಡುವ ಸಾಧ್ಯತೆಯಿದೆ ಎಂದು ವದಂತಿಗಳಿವೆ. ಆದರೆ, ಅಧಿಕೃತವಾಗಿ ಯಾವುದನ್ನೂ ದೃಢೀಕರಿಸಲಾಗಿಲ್ಲ ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯ.
ಇನ್ನೂ ಕೆಲವು ವರದಿಗಳಂತೆ, 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಆದರೆ ಪ್ರೊಮೋಷನ್ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಹಾಗೆಯೇ, iPhone 17 Air ಫೋನ್ 12GB RAM ನೊಂದಿಗೆ ಜೋಡಿಸಲಾದ ಸ್ಟ್ಯಾಂಡರ್ಡ್ A19 ಚಿಪ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದಲ್ಲದೆ, ಸೋರಿಕೆಯಾದ ರೆಂಡರ್‌ಗಳು ಹಿಂಭಾಗದ ಬಾರ್‌ನ ಎಡಭಾಗದಲ್ಲಿ ಇರಿಸಲಾಗಿರುವ ಒಂದೇ ಹಿಂಭಾಗದ ಕ್ಯಾಮೆರಾವನ್ನು ಬಹಿರಂಗಪಡಿಸುತ್ತವೆ, ಆದರೆ ಬಲಭಾಗದಲ್ಲಿ LED ಫ್ಲ್ಯಾಷ್ ಮತ್ತು ಮೈಕ್ರೊಫೋನ್ ಇದೆ.
ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ, iPhone 17 Air ಫೋನ್ 48MP ಹಿಂಭಾಗದ ಸಂವೇದಕ ಮತ್ತು 24MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರಬಹುದು. ಬೆಲೆಗೆ ಸಂಬಂಧಿಸಿದಂತೆ, iPhone 17 Air ಜಾಗತಿಕವಾಗಿ $1,299 ಕ್ಕಿಂತ ಕಡಿಮೆ ಮತ್ತು ಭಾರತದಲ್ಲಿ ಸುಮಾರು ₹90,000 ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳಿವೆ. ಮುಂಬರುವ iPhone 17 Air ಫೋನಿನಲ್ಲಿ ನೀವು ಏನನ್ನು ನಿರೀಕ್ಷಿಸುತ್ತೀರಾ?, ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








