ISRO Gaganyaan Mission Test : ಇಸ್ರೋದ ಗಗನಯಾನ ಸುರಕ್ಷತಾ ಪ್ರಾಯೋಗಿಕ ಹಾರಾಟ ಯಶಸ್ವಿ!
ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋದ ಗಗನಯಾನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಬಹು ನಿರೀಕ್ಷಿತ ಮಾನವಸಹಿತ ಗಗನಯಾನ ಸಿದ್ಧತೆಯ ಭಾಗವಾಗಿ ಚೊಚ್ಚಲ ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟಕ್ಕೆ ಇಂದು ಬೆಳಗ್ಗೆ 8:45 ಗಂಟೆಗೆ ಸಮಯ ನಿಗದಿಯಾಗಿತ್ತು. ಆದರೆ ಕೊನೆಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸಮಯವನ್ನು ಬೆಳಗ್ಗೆ 10:00ಕ್ಕೆ ಮರು ನಿಗಧಿಪಡಿಸಲಾಗಿತ್ತು.
ಹೌದು, ಇಸ್ರೋ ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ದೋಷವನ್ನು ಬಗೆಹರಿಸುವ ಮೂಲಕ ಗಗನಯಾನ ಮಿಷನ್ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ. ಈ ಮೂಲಕ ಮಾನವ ಸಹಿತ ಗಗನಯಾನಕ್ಕೆ ಮುಂದಾಗಿರುವ ಇಸ್ರೋಗೆ ಆನೆಬಲ ಬಂದಿದೆ. ಅಷ್ಟಕ್ಕೂ ಏಣಿದು ಗಗನಯಾನ್ ಮಿಷನ್, ಇದರ ಪರೀಕ್ಷಾರ್ಥ ಹಾರಾಟದ ಸಿದ್ಧತೆ ಹೇಗಿದೆ? ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಸ್ರೋ ಸಂಸ್ಥೆ ಚಂದ್ರಯಾನ 3 ಮಿಷನ್ ಯಶಸ್ಸಿನ ನಂತರ ಗಗನಯಾನ ಮಿಷನ್‌ಗಾಗಿ ಸಿದ್ಧತೆ ನಡೆಸುತ್ತಿದೆ. ಇದರ ಪರೀಕ್ಷಾರ್ಥವಾಗಿ ರಾಕೆಟ್ ಅನ್ನು ಉಡಾವಣೆ ಮಾಡಲು ಸಮಯ ನಿಗದಿಪಡಿಸಿತ್ತು. ಇನ್ನು ಈ ಪರೀಕ್ಷಾರ್ಥ ಉಡಾವಣೆಗೆ ʻಟಿವಿ-ಡಿ1ʼ ಎಂದು ಹೆಸರಿಸಲಾಗಿದೆ. ಸದ್ಯ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಗಗನಯಾನ ಯೋಜನೆಯ (Gaganyaan Mission Test Flight) ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಸ್ರೋ ಇದೀಗ ಉಡಾವಣೆ ಮಾಡಿದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಯಶಸ್ವಿಯಾಗಿದೆ. ಸದ್ಯ ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ರಾಕೆಟ್ ಉಡಾವಣೆ ಮಾಡಲಾಗಿತ್ತು. ಇದರಲ್ಲಿ ರಾಕೆಟ್‌ನಿಂದ ಬೇರ್ಪಟ್ಟಿರುವ ಎರಡೂ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಭೂಮಿಗೆ ಬಂದಿಳಿದಿವೆ. ಇದರಿಂದ ಮುಂದಿನ ದಿನಗಳಲ್ಲಿ ಮಾನವ ಸಹಿತ ಗಗನಯಾನ ಕೈಗೊಂಡಾಗ ವಿಜ್ಞಾನಿಗಳು ಪ್ಯಾರಾಚೂಟ್ ಮೂಲಕ ಬಾಹ್ಯಕಾಶದಿಂದ ಕೆಳಗಿಳಿಯುವುದಕ್ಕೆ ಈ ಟೆಕ್ನಾಲಜಿ ಸಹಾಯಕವಾಗಲಿದೆ.
ಏನಿದು ಟಿವಿ-ಡಿ1? ಇದರ ಉದ್ದೇಶವೇನು?
ಮಾನವ ಸಹಿತ ಗಗನಯಾನ ಮಾಡುವ ಇಸ್ರೋದ ಉದ್ದೇಶಕ್ಕೆ ಈ ಟಿವಿ-ಡಿ1 ಪ್ರಾಯೋಗಿಕ ಹಾರಟವು ಸಹಾಯಕಾರಿಯಾಗಿದೆ. ಇನ್ನು ಈ ಹಾರಾಟ ಪ್ರದರ್ಶನದ ಮೂಲಕ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯ (ಕ್ರ್ಯೂ ಎಸ್ಕೇಪ್ ಸಿಸ್ಟಮ್ - ಸಿಇಎಸ್) ಕಾರ್ಯಾಚರಣೆಯ ಮೌಲ್ಯಮಾಪನ ಮಾಡುವುದಕ್ಕೆ ಸಾಧ್ಯವಾಗಲಿದೆ. ಕ್ರ್ಯೂ ಮಾಡ್ಯುಲ್ ಸಿಸ್ಟಂ ಸಾಮರ್ಥ್ಯಗಳ ಪರೀಕ್ಷೆ, ಎತ್ತರದಿಂದ ಭೂಮಿಗೆ ಇಳಿಯುವ ಸಂದರ್ಭದಲ್ಲಿ ಅದರ ವೇಗವನ್ನು ತಗ್ಗಿಸುವ ಪರೀಕ್ಷೆಯನ್ನು ಮಾಡುವುದಕ್ಕೆ ಸಹಕಾರಿಯಾಗಲಿದೆ.
ಇನ್ನು ಈ ಟೆಸ್ಟಿಂಗ್ ವೆಹಿಕಲ್ ಏಕ ಹಂತದ, ದ್ರವ ಇಂಧನ ಚಾಲಿತ ರಾಕೆಟ್ ಆಗಿದೆ. ಇದರಲ್ಲಿ ಸುಧಾರಿತ ವಿಕಾಸ್ ಇಂಜಿನನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಕ್ರ್ಯೂ ಮಾಡ್ಯುಲ್ (ಸಿಎಂ) ಹಾಗೂ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಅನ್ನು ಒಳಗೊಂಡಿದೆ. ಇದು ಗಗನಯಾನ ಯೋಜನೆಯ ಮೊದಲ ಪ್ರಾಯೋಗಿಕ ಪರೀಕ್ಷಾರ್ಥವಾಗಿ ನಡೆಸುವ ಹಾರಾಟವಾಗಿರಲಿದೆ. ಇದನ್ನು ಸಮುದ್ರ ಮಟ್ಟದಿಂದ 11 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಉಡಾವಣೆಗೊಳಿಸಲಾಗುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಟಿವಿ-ಡಿ1 ಯೋಜನೆಯ ಮುಖ್ಯ ಉದ್ದೇಶ ಮಾನವಸಹಿತ ಗಗನಯಾನಕ್ಕೆ ಸಹಾಯ ಮಾಡುವುದು. ಅದರಂತೆ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ರಾಕೆಟ್‌ನಿಂದ ಬೇರ್ಪಡುವಿಕೆ, ಸುರಕ್ಷಿತ ದೂರಕ್ಕೆ ತಲುಪುವ ತನಕ ಅದರ ಪಥವನ್ನು ಅಧ್ಯಯನ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸುರಕ್ಷಿತ ಅಂತರಕ್ಕೆ ತಲುಪಿದ ಬಳಿಕ ಸಿಇಎಸ್‌ನ ಪ್ಯಾರಾಶೂಟ್‌ಗಳು ತೆರೆದುಕೊಳ್ಳಲಿವೆ. ಇದು ಮಾನವ ಸಹಿತ ಯೋಜನೆಯ ಸಿಇಎಸ್‌ನಷ್ಟೇ ತೂಕ ಹೊಂದಿರಲಿದೆ.
ಸದ್ಯ ಪ್ರಾಯೋಗಿಕ ವಾಹನದಲ್ಲಿರುವ ಸಿಎಂ ಒಳಗೆ ಏವಿಯಾನಿಕ್ಸ್ ವ್ಯವಸ್ಥೆ ಅಳವಡಿಸಲಾಗಿದೆ. ಇದು ಸಂಚರಣೆ (ನ್ಯಾವಿಗೇಶನ್), ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಹಾಗೂ ಇನ್ಸ್ಟ್ರುಮೆಂಟೇಶನ್ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ನಿರ್ವಹಿಸಲು ಡ್ಯುಯಲ್ ರಿಡಂಡಂಟ್ ಮೋಡ್‌ನಲ್ಲಿ ಕಾರ್ಯಾಚರಣೆ ನಡೆಸಲಿದೆ. ಇದಕ್ಕಾಗಿ ಸಿಎಂ ಇನ್ಸ್ಟ್ರುಮೆಂಟೇಷನ್ ವ್ಯವಸ್ಥೆ ಹೊಂದಿದ್ದು, ಹಾರಾಟ ದಾಖಲೆಗಳನ್ನು ಪರಿಶೀಲಿಸಿ, ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯಾಚರಿಸಿವೆಯೇ ಎಂದು ತಿಳಿಸಲಿದೆ. ನಂತರ ಕ್ರ್ಯೂ ಮಾಡ್ಯುಲ್ ಬಂಗಾಳ ಕೊಲ್ಲಿಯಲ್ಲಿ ಪತನಗೊಳ್ಳಲಿದ್ದು, ಅದನ್ನು ಅದಕ್ಕಾಗಿಯೇ ಮೀಸಲಾದ ಭಾರತೀಯ ನೌಕಾಪಡೆಯ ನೌಕೆ ಮತ್ತು ಮುಳುಗು ತಂಡದವರು ಅದನ್ನು ಸಂಗ್ರಹಿಸುತ್ತಾರೆ ಎಂದು ಇಸ್ರೋ ಹೇಳಿದೆ.


Click it and Unblock the Notifications








