ಸೆಲ್ಯೂಟ್ ಇಸ್ರೋ! SpaDeX ಯಶಸ್ವಿ.. ಅಂತರಿಕ್ಷದಲ್ಲಿ ಉಪಗ್ರಹಗಳ ಆಲಿಂಗನ
ಇಸ್ರೊ ಹಿರಿಮೆಗೆ ಮತ್ತೊಂದು ಗರಿ.. ಭಾರತ ಮತ್ತೊಂದು ಅದ್ಭುತ ಸಾಧನೆ! ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನ ಕರಗತ ಮಾಡಿಕೊಂಡ 4ನೇ ದೇಶ ಭಾರತ. ಹೌದು, ಅಂತರಿಕ್ಷದಲ್ಲಿ ಎರಡು ಉಪಗ್ರಹಗಳ ಜೋಡಣೆ ಕಾರ್ಯ ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ (ISRO) ಮಾಹಿತಿ ನೀಡಿದೆ. ಅಮೆರಿಕ, ರಷ್ಯಾ, ಚೀನಾ ನಂತರ ಈಗ ಭಾರತ ಈ ಸಾಲಿನಲ್ಲಿದೆ. ಪ್ರಧಾನಿ ಮೋದಿ, ಕೇಂದ್ರ ಸಚಿವರು ಮತ್ತು ಇಸ್ರೋ ಅಧ್ಯಕ್ಷ ನಾರಾಯಣನ್ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಸ್ಪಾಡೆಕ್ಸ್ (SpaDeX) ಯಶಸ್ವಿಯಾಗಿದೆ ಎಂದು ಇಸ್ರೋ ಈಗಾಗಲೇ ಘೋಷಿಸಿದೆ. ಬಾಹ್ಯಾಕಾಶದಲ್ಲಿರುವ 2 ಪ್ರತ್ಯೇಕ ಉಪಗ್ರಹಗಳನ್ನು ಜೋಡಿಸಲಾಗಿದೆ. ಎರಡು ಉಪಗ್ರಹಗಳನ್ನು ಡಾಕಿಂಗ್ ಮಾಡುವ ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಬಾಹ್ಯಾಕಾಶ ನಿಲ್ದಾಣ, ಚಂದ್ರಯಾನ 4 ಮತ್ತು ಗಗನ್‌ಯಾನ್‌ಗೆ ದಾರಿ ಮಾಡಿಕೊಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿದೆ.

ಇದೊಂದು ಐತಿಹಾಸಿಕ ಕ್ಷಣ ಎಂದ ಇಸ್ರೋ
ಈ ಬಗ್ಗೆ ಇಸ್ರೋ ಸಂತಸ ಹಂಚಿಕೊಂಡಿದೆ. ಡಾಕಿಂಗ್ ಪ್ರಕ್ರಿಯೆ ಯಶಸ್ವಿ..! ಸ್ಪೇಸ್ ಕ್ರಾಫ್ಟ್ ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ. ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ದಾಖಲಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ. ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4ನೇ ರಾಷ್ಟ್ರ ಭಾರತವಾಗಿದೆ. ಇಡೀ ತಂಡಕ್ಕೆ ಮತ್ತು ಭಾರತಕ್ಕೆ ಅಭಿನಂದನೆಗಳು ಎಂದು ಇಸ್ರೋ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದೆ.
ಇಸ್ರೋ ಹೇಳಿದ್ದೇನು?
ಡಾಕಿಂಗ್ ನಂತರ ಎರಡು ಉಪಗ್ರಹಗಳನ್ನು ಒಂದೇ ವಸ್ತುವಾಗಿ ನಿಯಂತ್ರಿಸುವುದು ಯಶಸ್ವಿಯಾಗಿದೆ ಎಂದು ಇಸ್ರೋ ಪೋಸ್ಟ್ ಮೂಲಕ ತಿಳಿಸಿದೆ. ಮುಂದಿನ ದಿನಗಳಲ್ಲಿ ಅನ್ಡಾಕಿಂಗ್ ಪ್ರಕ್ರಿಯೆ ಮತ್ತು ವಿದ್ಯುತ್ ಟ್ರಾನ್ಸ್ಪರ್ ಪರಿಶೀಲನೆಗಳು ನಡೆಯಲಿವೆ ಇಸ್ರೋ ಹೇಳಿದೆ.
ಡಿ.30 ರಂದು ಸ್ಪಾಡೆಕ್ಸ್ ಮಿಷನ್ ಪ್ರಾರಂಭ
ಇಸ್ರೋ 2024ರ ಡಿಸೆಂಬರ್ 30 ರಂದು ಸ್ಪಾಡೆಕ್ಸ್ ಮಿಷನ್ ಅನ್ನು ಪ್ರಾರಂಭಿಸಿತು. ಇದು ಎರಡು ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಬಿಟ್ಟಿತು. ಅದುವೇ SDX01 (ಚೇಸರ್) ಮತ್ತು SDX02 (ಟಾರ್ಗೆಟ್). ಈ ಕಾರ್ಯಾಚರಣೆಯ ಉದ್ದೇಶ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಡಾಕಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸುವುದಾಗಿದೆ.
ಇಸ್ರೋ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಇಸ್ರೋ ತನ್ನ ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ ಅಡಿಯಲ್ಲಿ ಉಪಗ್ರಹಗಳನ್ನು ಸಂಪರ್ಕಿಸುವಲ್ಲಿ ಯಶಸ್ಸು ಸಾಧಿಸಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಪ್ರಧಾನಿ ಮೋದಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೋ ತಂಡಕ್ಕೆ ಮನದುಂಬಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಮಾಡಿದ್ದಾರೆ. ಈ ಮೂಲಕ ಇಸ್ರೋದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. 'ಉಪಗ್ರಹಗಳ ಬಾಹ್ಯಾಕಾಶ ಡಾಕಿಂಗ್‌ನ ಯಶಸ್ವಿ ಪ್ರದರ್ಶನಕ್ಕಾಗಿ ನಮ್ಮ ಇಸ್ರೋ ವಿಜ್ಞಾನಿಗಳು ಮತ್ತು ಇಡೀ ಬಾಹ್ಯಾಕಾಶ ಬಂಧುತ್ವಕ್ಕೆ ಅಭಿನಂದನೆಗಳು. ಮುಂಬರುವ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಗಳಿಗೆ ಇದು ಒಂದು ಪ್ರಮುಖ ಹೆಜ್ಜೆಯಾಗಿರುವುದು ಗಮನಾರ್ಹ' ಎಂದು ಹೇಳಿದ್ದಾರೆ.
ಚಂದ್ರಯಾನ-4 ಕಾರ್ಯಾಚರಣೆಗೆ ಅಗತ್ಯ!
ಡಾಕಿಂಗ್ ತಂತ್ರಜ್ಞಾನವು ಚಂದ್ರಯಾನ-4 ನಂತಹ ಕಾರ್ಯಾಚರಣೆಗೆ ಅಗತ್ಯವಿದೆ. ಡಾಕಿಂಗ್ ಕಾರ್ಯಾಚರಣೆಯ ಅಡಿಯಲ್ಲಿ 20 ಕಿಲೋಮೀಟರ್ ದೂರದಲ್ಲಿ ಮೊದಲು ಎರಡೂ ಉಪಗ್ರಹಗಳನ್ನು ಇರಿಸಲಾಯಿತು. ಬಳಿಕ ಚೇಸರ್ ಉಪಗ್ರಹವು ಟಾರ್ಗೆಟ್ ಉಪಗ್ರಹವನ್ನು ಸಮೀಪಿಸಿತು. 5 ಕಿಮೀ, 1.5 ಕಿಮೀ, 500 ಮೀ, 225 ಮೀ, 15 ಮೀ ಮತ್ತು ಕೊನೆದಾಗಿ 3 ಮೀ ದೂರವನ್ನು ಕ್ರಮಿಸಿತು. ಬಳಿಕ ಎರಡೂ ಉಪಗ್ರಹಗಳನ್ನು ಒಟ್ಟಿಗೆ ಸಂಪರ್ಕಿಸಲಾಯಿತು. ಡಾಕಿಂಗ್ ನಂತರ ಉಪಗ್ರಹಗಳ ನಡುವಿನ ವಿದ್ಯುತ್ ವರ್ಗಾವಣೆ ಮಾಡಲಾಯಿತು. ಬಳಿಕ ಅವುಗಳ ಸಂಬಂಧಿತ ಪೇಲೋಡ್ ಕಾರ್ಯಾಚರಣೆ ಪ್ರಾರಂಭಿಸಲು ಎರಡನ್ನೂ ಬೇರ್ಪಡಿಸಲಾಯಿತು.


Click it and Unblock the Notifications








