ಕೀಪ್ಯಾಡ್ ಮೊಬೈಲ್ ಪ್ರಿಯರಿಗೆ ಗುಡ್‌ನ್ಯೂಸ್? ಇಲ್ಲಿದೆ 12 ದಿನ ಬ್ಯಾಟರಿ ಬಾಳಿಕೆ ನೀಡುವ ಹೊಸ ಫೋನ್!
ಸ್ಮಾರ್ಟ್‌ಫೋನ್‌ಗಳ ಆರ್ಭಟದ ನಡುವೆ ಇಂದಿಗೂ ಕೀಪ್ಯಾಡ್ ಸೆಟ್‌ಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಬಳಕೆದಾರರ ಅಗತ್ಯಗಳಿಗೆ ಅನುಗುಣವಾದ ಕೀಪ್ಯಾಡ್ ಸೆಟ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಐಟೆಲ್ ಕಂಪೆನಿ ಕೂಡ ಒಂದಾಗಿದ್ದು, ಇದೀಗ ಹೊಸದಾಗಿ ಐಟೆಲ್ it5330 ಹೆಸರಿನ ಕೀಪ್ಯಾಡ್ ಫೋನ್ ಪರಿಚಯಿಸಿದೆ.
ಹೌದು, ಐಟೆಲ್ it5330 ಫೀಚರ್ ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಹ್ಯಾಂಡ್‌ಸೆಟ್ ವಿಶಿಷ್ಟವಾದ ಗ್ಲಾಸ್ ಫಿನಿಶ್‌ನೊಂದಿಗೆ ನಯವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಕೀಪ್ಯಾಡ್ ಫೋನ್ ಬಜೆಟ್ ಬೆಲೆಯನ್ನು ಹೊಂದಿದ್ದು, 2,000ರೂ ಒಳಗಿನ ಫೋನ್‌ಗಳಿಗೆ ಟಕ್ಕರ್ ನೀಡುವ ಸೂಚನೆ ನೀಡಿದೆ. ಹಾಗಾದ್ರೆ ಐಟೆಲ್ it5330 ಫೋನ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ it5330 ಫೀಚರ್ಸ್ ಹೇಗಿದೆ?
ಐಟೆಲ್ it5330 ಫೀಚರ್ ಫೋನ್ ಕೇವಲ 11.1mm ದಪ್ಪವನ್ನು ಹೊಂದಿದ್ದು, ಸ್ಲಿಮ್ ಪ್ರೊಫೈಲ್ ನೊಂದಿಗೆ 2.8-ಇಂಚಿನ ಕಲರ್ ಡಿಸ್‌ಪ್ಲೇ ಹೊಂದಿದೆ. ಇದು 1900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 31.7 ಗಂಟೆಗಳ ಟಾಕ್ ಟೈಮ್ ನೀಡಲಿದೆ. ಇದರೊಂದಿಗೆ 12 ದಿನಗಳ ಬ್ಯಾಕಪ್ ಅನ್ನು ನೀಡುತ್ತದೆ. ಈ ಫೋನ್ 32GB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದರಿಂದ ಫೋನ್‌ನಲ್ಲಿ ಮಲ್ಟಿಮೀಡಿಯಾ ಸಂಗ್ರಹಣೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ.
ಐಟೆಲ್ it5330 ಫೀಚರ್ ಫೋನ್ ಇಂಗ್ಲಿಷ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಪಂಜಾಬಿ, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಸೇರಿದಂತೆ ಒಟ್ಟು ಒಂಬತ್ತು ಭಾಷೆಗಳನ್ನು ಬೆಂಬಲಿಸಲಿದೆ. ಇದಕ್ಕಾಗಿ ಮಲ್ಟಿ ಲ್ಯಾಂಗ್ವೇಜ್ ಇಂಟರ್‌ಫೇಸ್ ಅನ್ನು ಒಳಗೊಂಡಿದೆ. ಇನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ಮನರಂಜನಾ ಉದ್ದೇಶಗಳಿಗಾಗಿ ರೆಕಾರ್ಡರ್‌ನೊಂದಿಗೆ ವೈರ್‌ಲೆಸ್ ಎಫ್‌ಎಂ ಅನ್ನು ನೀಡಲಾಗಿದೆ. ಜೊತೆಗೆ ಬಳಕೆದಾರರು ವೈರ್ಡ್ ಹೆಡ್‌ಫೋನ್‌ಗಳ ತೊಂದರೆಯಿಲ್ಲದೆ ರೇಡಿಯೊವನ್ನು ಆನಂದಿಸಲು ಅವಕಾಶ ಸಿಗಲಿದೆ.

ಈ ಡಿವೈಸ್‌ನಲ್ಲಿರುವ ಕಿಂಗ್ ವಾಯ್ಸ್ ಫೀಚರ್ಸ್ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಒಳಬರುವ ಕರೆಗಳು, ಸಂದೇಶಗಳು, ಮೆನು, ಡಯಲಿಂಗ್ ಸಂಖ್ಯೆ ಇತ್ಯಾದಿಗಳಂತಹ ಮಾಹಿತಿಯನ್ನು ಓದುತ್ತದೆ. ಇನ್ನು ಫೋನ್ ಎರಡು SIM ಸ್ಲಾಟ್‌ಗಳು ಮತ್ತು 3.5mm ಜ್ಯಾಕ್ ಅನ್ನು ನೀಡುತ್ತದೆ. ಈ ಫೋನ್ ಆಟೋ ಕಾಲ್ ರೆಕಾರ್ಡಿಂಗ್ ಮತ್ತು VGA ಕ್ಯಾಮೆರಾದೊಂದಿಗೆ ಬರುತ್ತದೆ.
ಐಟೆಲ್ it5330 ಬೆಲೆ ಮತ್ತು ಲಭ್ಯತೆ
ಐಟೆಲ್ it5330 ಭಾರತದಲ್ಲಿ ಕೇವಲ 1,499ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ನೀಲಿ, ತಿಳಿ ಹಸಿರು, ತಿಳಿ ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.
ಇನ್ನು ಇತ್ತೀಚಿಗೆ ಐಟೆಲ್ ಕಂಪೆನಿ ತನ್ನ ಐಟೆಲ್ A05s ಸ್ಮಾರ್ಟ್‌ಫೋನ್ ಅನ್ನು ಹೊಸ ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದು 4GB + 64GB ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಬಂದಿದೆ. ಈ ಫೋನ್ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದ್ದು, 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಈ ಫೋನ್ 1.6GHz UNISOC ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದೆ. ಆಂಡ್ರಾಯ್ಡ್ 13 ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದು ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡಲಿದೆ. ಐಟೆಲ್ A05s ಸ್ಮಾರ್ಟ್‌ಫೋನ್ 2GB ಆಯ್ಕೆಯಲ್ಲಿ 5MP ರಿಯರ್ ಕ್ಯಾಮೆರಾವನ್ನು ಹೊಂದಿತ್ತು. ಆದರೆ 4GB RAM ಆಯ್ಕೆಯು 8MP ಸೆನ್ಸಾರ್ ಸಾಮರ್ಥ್ಯದ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಫೋಟೋಗಳು ಮತ್ತು ವೀಡಿಯೊಗಳಿಗಾಗಿ AI ಸೌಂದರ್ಯವರ್ಧಕ ವಿಧಾನಗಳೊಂದಿಗೆ 5MP ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ.


Click it and Unblock the Notifications








