ಜಿಯೋ ಬಳಕೆದಾರರಿಗೆ ಗೂಗಲ್ ಉಡುಗೊರೆ: 35,100 ರೂ. ಮೌಲ್ಯದ AI ಸೇವೆಗಳು ಉಚಿತ!
ರಿಲಯನ್ಸ್ ಜಿಯೋ ಒಡೆಯನದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ಕಂಪೆನಿಗಳು ಗುರುವಾರದಂದು ಪ್ರಮುಖ ಪಾಲುದಾರಿಕೆ ಘೋಷಿಸಿದ್ದು, ಈ ಪಾಲುದಾರಿಕೆಯಿಂದಾಗಿ ಜಿಯೋ ಬಳಕೆದಾರರು ಬರೋಬ್ಬರಿ 18 ತಿಂಗಳವರೆಗೆ ಗೂಗಲ್ ಎಐ ಪ್ರೊ (Google AI Pro) ಪ್ಲಾನ್‌ಗೆ ಉಚಿತ ಬಳಕೆ ಅವಕಾಶವನ್ನು ಪಡೆಯಲಿದ್ದಾರೆ. ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು 35,100 ರೂ. ಮೌಲ್ಯದ್ದಾಗಿದ್ದು, ಗೂಗಲ್‌ನ ಆಧುನಿಕ ಕೃತಕ ಬುದ್ಧಿಮತ್ತೆ ಸೇವೆಗಳು ಇದೀಗ ಜಿಯೋ ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿ ಸಿಗುತ್ತಿವೆ.! ಹಾಗಾದರೆ, ಏನಿದು ಸಿಹಿಸುದ್ದಿ?, ಜಿಯೋ ಗ್ರಾಹಕರಿಗೆ ಉಚಿತವಾಗಿ ದೊರೆಯಲಿರುವ ಗೂಗಲ್‌ನ AI ಸೇವೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಪ್ರಸ್ತುತ ನಾವು ನೋಡುವುದಾದರೆ, ದೇಶದ ಗ್ರಾಹಕರು Google AI Pro ಸೇವೆಗಳನ್ನು ಪಡೆಯಲು ಪ್ರತಿ ತಿಂಗಳು 1,950 ರೂ. ಪಾವತಿಸಬೇಕಿದೆ. ಈ ಸೇವೆಗೆ ಚಂದಾದಾರಿಕೆ ಪಡೆದರೆ ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ವಿಸ್ತೃತ ಅವಕಾಶಗಳು ದೊರೆಯುತ್ತವೆ. ಜೊತೆಗೆ ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಗಳು ಸಹ ಇವೆ. ಈ ಎಲ್ಲವೂ ಸಹ ರಿಲಯನ್ಸ್ ಜಿಯೋ ಬಳಕೆದಾರರಿಗೆ 18 ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ದೊರೆಯಲಿವೆ.
ಆರಂಭದಲ್ಲಿ ಈ ಕೊಡುಗೆಯು 18 ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಮೊದಲು ಲಭ್ಯವಿರುತ್ತದೆ. ಆದರೆ, ನಂತರ ಜಿಯೋದ ಎಲ್ಲ ಬಳಕೆದಾರರು ಇದಕ್ಕೆ ಅವಕಾಶವನ್ನು ಪಡೆಯುತ್ತಾರೆ. ಕಂಪನಿಯು ಈ AI ಸೇವೆಯ ವೈಶಿಷ್ಟ್ಯವನ್ನು 5G ಅನ್‌ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮಾತ್ರ ಒದಗಿಸುತ್ತದೆ ಎಂದು ಜಿಯೋ ತಿಳಿಸಿದೆ. ರಿಲಯನ್ಸ್ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಜಂಟಿಯಾಗಿ ಈ ವಿಶೇಷ ಎಐ ವೈಶಿಷ್ಟ್ಯವನ್ನು ಜಿಯೋ ಗ್ರಾಹಕರಿಗೆ ತಂದಿವೆ. ಪ್ರತಿ ಭಾರತೀಯ ಗ್ರಾಹಕ, ಸಂಸ್ಥೆ ಮತ್ತು ಡೆವಲಪರ್ ಅನ್ನು ಎಐನೊಂದಿಗೆ ಜೋಡಿಸುವುದು ಇದರ ಗುರಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಈ ಕುರಿತಂತೆ ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು, 145 ಕೋಟಿ ಭಾರತೀಯರಿಗೆ ಎಐ ಸೇವೆಗಳು ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಗೂಗಲ್‌ನಂತಹ ದೀರ್ಘಕಾಲೀನ ಪಾಲುದಾರರೊಂದಿಗೆ ನಾವು ಭಾರತವನ್ನು ಕೇವಲ ಎಐ-ಸಕ್ರಿಯಗೊಳಿಸುವುದಷ್ಟೇ ಅಲ್ಲದೆ, ಪ್ರತಿ ನಾಗರಿಕ ಮತ್ತು ಸಂಸ್ಥೆಯು ಎಐ ಬಳಸಿ ಅಭಿವೃದ್ಧಿ ಹೊಂದಲು ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಬೇಕು ಎಂದು ಬಯಸುತ್ತೇವೆ," ಎಂದು ಹೇಳಿದ್ದಾರೆ.ಇತ್ತ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರು, "ಭಾರತದ ಡಿಜಿಟಲ್ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ರಿಲಯನ್ಸ್ ಪ್ರಮುಖ ಪಾಲುದಾರ. ಈಗ ನಾವು ಈ ಸಹಯೋಗವನ್ನು ಎಐ ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಉಪಕ್ರಮವು ಗೂಗಲ್ ನ ಅತ್ಯಾಧುನಿಕ ಎಐ ಪರಿಕರಗಳನ್ನು ಭಾರತೀಯ ಗ್ರಾಹಕರು, ವ್ಯವಹಾರಗಳು ಮತ್ತು ಡೆವಲಪರ್‌ಗಳಿಗೆ ತರುತ್ತದೆ," ಎಂದು ಹೇಳಿದ್ದಾರೆ.
ಇನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ, ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಗೂಗಲ್ ಕ್ಲೌಡ್‌ನ ಕಾರ್ಯತಂತ್ರ ಪಾಲುದಾರ ಎಂದು ಕರೆಯಲಾಗಿದೆ. ಭಾರತವು ಜಾಗತಿಕ ಎಐ ಕೇಂದ್ರ ಆಗುವುದಕ್ಕೆ ಸಹಾಯ ಮಾಡಲು, ರಿಲಯನ್ಸ್ ಮತ್ತು ಗೂಗಲ್ ಸೇರಿ ಭಾರತದ ಕಂಪನಿಗಳಿಗೆ ಸುಧಾರಿತ ಎಐ ಹಾರ್ಡ್‌ವೇರ್, ಅಂದರೆ ಟೆನ್ಸರ್ ಪ್ರೊಸೆಸಿಂಗ್ ಯೂನಿಟ್‌ಗಳು (TPUಗಳು)ಗೆ ಬಳಕೆಯನ್ನು ವಿಸ್ತರಿಸುತ್ತವೆ. ಇದು ಭಾರತೀಯ ವ್ಯವಹಾರಗಳು ದೊಡ್ಡ ಮತ್ತು ಸಂಕೀರ್ಣ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹಾಗೂ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ವೇಗವಾಗಿ ವಿಸ್ತರಿಸಲು ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಪಾಲುದಾರಿಕೆಯು ರಿಲಯನ್ಸ್‌ನ "ಎಲ್ಲರಿಗೂ ಎಐ" ದೃಷ್ಟಿಕೋನಕ್ಕೆ ಹೊಂದಿಕೆ ಆಗುತ್ತದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ. .
ಈ ಕೊಡುಗೆಯ ಪ್ರಮುಖ ಅಂಶಗಳು.
ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ
2 ಟಿಬಿ ಕ್ಲೌಡ್ ಸ್ಟೋರೇಜ್, ಗೂಗಲ್ ಜೆಮಿನಿ 2.5 ಪ್ರೊ ಬಳಕೆಗೆ ಅವಕಾಶ
ನ್ಯಾನೋ ಬನಾನಾ, Veo 3.1 ಮತ್ತು ನೋಟ್‌ಬುಕ್ LMಗೆ ವಿಸ್ತೃತ ಸಂಪರ್ಕ
ರಿಲಯನ್ಸ್ ಮತ್ತು ಗೂಗಲ್ ಜಂಟಿಯಾಗಿ ಭಾರತದ ಎಐ ಕ್ರಾಂತಿಗೆ ವೇಗ


Click it and Unblock the Notifications








