ಜಿಯೋ ಫಸ್ಟ್ ಡೇ ಫಸ್ಟ್ ಶೋ!..ಏನಿದು ಅಂಬಾನಿಯ ಹೊಸ ಪ್ಲ್ಯಾನ್?
ಆಗಸ್ಟ್ 12ರ ಸೋಮವಾರದಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರು ಬಹು ನಿರೀಕ್ಷಿತ ಜಿಯೋ ಫೈಬರ್ ಸೇರಿದಂತೆ ಹಲವಾರು ಹೊಸ ಉತ್ಪನ್ನಗಳನ್ನು ಘೋಷಿಸಿದ್ದಾರೆ. ಕಳೆದ ವರ್ಷ ದೇಶದ ಇಂಟರ್‌ನೆಟ್ ಪ್ರಪಂಚದಲ್ಲಿ ಗುಲ್ಲೆಬ್ಬಿಸಿದ್ದ ಜಿಯೋ ಗಿಗಾಫೈಬರ್ ಸೇವೆಯನ್ನು 1GBps ವೇಗಕ್ಕೇರಿಸಿ, ಜಿಯೋ ಫೈಬರ್ ಹೆಸರಿನಲ್ಲಿ ಭಾರತೀಯರ ಬಳಿಗೆ ತೆಗೆದುಕೊಂಡು ಬಂದಿದ್ದಾರೆ.

ಇಷ್ಟೇ ಅಲ್ಲದೇ, ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಬ್ರ್ಯಾಡ್‌ಬ್ಯಾಂಡ್ ಸೇವೆಗಳನ್ನು ಉಚಿತ ಸೆಟ್‌ಅಪ್ ಬಾಕ್ಸ್‌ನೊಂದಿಗೆ ನೀಡುತ್ತಿರುವ ಅವರು, ಜೊತೆಗೆ ಜಿಯೋ ಫಸ್ಟ್ ಡೇ ಫಸ್ಟ್ ಶೋ ಎಂಬ ಹೊಸ ಯೋಜನೆಯನ್ನು ಸಹ ಘೋಷಿಸಿದ್ದಾರೆ. ಹಾಗಾದರೆ, ಏನಿದು ಜಿಯೋ ಫಸ್ಟ್ ಡೇ ಫಸ್ಟ್ ಶೋ?, ಅಂಬಾನಿ ಅವರು ಘೋಷಿಸಿರುವ ಜಿಯೋ ಫಸ್ಟ್ ಡೇ ಫಸ್ಟ್ ಶೋ ಯೋಜನೆ ಹೊಂದಿರುವ ಕೊಡುಗೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

ಜಿಯೋ ಫಸ್ಟ್ ಡೇ ಫಸ್ಟ್ ಶೋ ಯೋಜನೆ ಎಂದರೇನು?
ಜಿಯೋ ಫಸ್ಟ್ ಡೇ ಫಸ್ಟ್ ಶೋ ಒಂದು ಸೇವೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ ಒಬ್ಬರು ತಮ್ಮ ಮನೆಯಿಂದ ನೇರವಾಗಿ ಚಲನಚಿತ್ರಗಳು ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಪ್ರೀಮಿಯಂ ಜಿಯೋ ಫೈಬರ್ ಯೋಜನೆಗಳಿಗೆ ಚಂದಾದಾರರಾಗಿರುವ ಗ್ರಾಹಕರಿಗೆ ಈ ಸೇವೆ ಲಭ್ಯವಿರುತ್ತದೆ. ಈಗಿನಂತೆ, ಪ್ರತಿ ಚಲನಚಿತ್ರಕ್ಕೂ ಜಿಯೋ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆಯೇ ಅಥವಾ ಇದು ಜಿಯೋ ಫೈಬರ್ ಬಳಕೆದಾರರಿಗೆ ಪೂರಕ ಸೇವೆಯಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಜಿಯೋ ಫಸ್ಟ್ ಡೇ ಫಸ್ಟ್ ಶೋ ಹೇಗೆ ಕಾರ್ಯನಿರ್ವಹಿಸುತ್ತದೆ?
ಚಿತ್ರಮಂದಿರಗಳಂತೆಯೇ ಚಲನಚಿತ್ರಗಳಿಗೆ ಪ್ರವೇಶವನ್ನು ನೀಡಲು ಜಿಯೋ ಸಿನೆಮಾ ನಿರ್ಮಾಪಕರು ಮತ್ತು ವಿತರಕರೊಂದಿಗೆ ಪಾಲುದಾರರಾಗಬಹುದು. ಜಿಯೋ ಸೆಟ್-ಟಾಪ್ ಬಾಕ್ಸ್ ಅಥವಾ ಜಿಯೋ ರೂಟರ್ ಬಳಸಿ, ಒಬ್ಬರು ಒಂದು ಬಾರಿ ವೀಕ್ಷಣೆಗಾಗಿ ಡಿಆರ್ಎಂ ಲಾಕ್ ಮಾಡಿದ ವಿಷಯವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಚಲನಚಿತ್ರ ಮುಗಿದ ತಕ್ಷಣ, ಸ್ಥಳೀಯ ಮೂಲದಿಂದ ವಿಷಯವನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.

ಜಿಯೋ ಫಸ್ಟ್ ಡೇ ಫಸ್ಟ್ ಶೋ ಸೇವೆ ಆರಂಭ ಯಾವಾಗ?
ಜಿಯೋ ಫೈಬರ್ ಯೋಜನೆಗಳನ್ನು ಹೆಚ್ಚಿನ ಪ್ರೀಮಿಯಂ ಒಟಿಟಿ ಅಪ್ಲಿಕೇಶನ್‌ಗಳೊಂದಿಗೆ ಒಟ್ಟುಗೂಡಿಸಲಾಗುತ್ತದೆ. ಪ್ರೀಮಿಯಂ ಜಿಯೋ ಫೈಬರ್ ಗ್ರಾಹಕರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿನವೇ ತಮ್ಮ ಮನೆಯಲ್ಲಿ ಹೊಸ ಚಲನಚಿತ್ರಗಳನ್ನು ವೀಕ್ಷಿಸಬಹುದು. ಇದನ್ನೇ ಜಿಯೋ ಫಸ್ಟ್ ಡೇ ಫಸ್ಟ್ ಶೋ ಎಂದು ಕರೆಯಲಾಗಿದೆ. 2020ರ ಮಧ್ಯದಲ್ಲಿ ಜಿಯೋ ಫಸ್ಟ್ ಡೇ ಫಸ್ಟ್ ಶೋ ಪ್ರಾರಂಭಿಸಲಾಗುವುದು ಎಂದು ಮುಖೇಶ್ ಅಂಬಾನಿಯವರು ತಿಳಿಸಿದ್ದಾರೆ.

ಪ್ರೀಮಿಯಂ ಜಿಯೋ ಫೈಬರ್ ಯೋಜನೆ ಎಂದರೇನು?
ಜಿಯೋ ಕಂಪನಿಯು ನಿಜವಾದ ಚಂದಾದಾರಿಕೆ ಯೋಜನೆಗಳನ್ನು ಇನ್ನೂ ಅನಾವರಣಗೊಳಿಸದ ಕಾರಣ, ಯಾವ ಯೋಜನೆಯು ಪ್ರೀಮಿಯಂ ಜಿಯೋ ಫೈಬರ್ ಯೋಜನೆಯಾಗಿ ಅರ್ಹತೆ ಪಡೆಯುತ್ತದೆ ಎಂಬುದರ ಬಗ್ಗೆ ನಿಖರವಾದ ವ್ಯಾಖ್ಯಾನವಿಲ್ಲ. ಆದರೆ, ಜಿಯೋ ಫೈಬರ್‌ನ ಮೂಲ ಯೋಜನೆ 700 ರೂಪಾಯಿಗಳಿಂದ 10,000.ರೂ.ಗಳ ವರೆಗಿನ ಅತ್ಯಂತ ದುಬಾರಿ ಯೋಜನೆಗಳನ್ನು ಪ್ರೀಮಿಯಂ ಯೋಜನೆ ಎಂದು ಪರಿಗಣಿಸಬಹುದು.

ಜಿಯೋ ಫಸ್ಟ್ ಡೇ ಫಸ್ಟ್ ಶೋ ಸೇವೆ ಬಗ್ಗೆ ನಮ್ಮ ಅಭಿಪ್ರಾಯ
ಜಿಯೋ ಫಸ್ಟ್ ಡೇ ಫಸ್ಟ್ ಶೋ ಕೊಡುಗೆ ವಿಶೇಷವಾಗಿ ಮೂವಿ ಬಫ್‌ಗಳಿಗೆ ಅದ್ಭುತವಾಗಿದೆ. ರಿಲಯನ್ಸ್ ಸ್ವತಃ ಸಿನೆಮಾ ನಿರ್ಮಾಪಕರಾಗಿರುವುದರಿಂದ, ಕಂಪನಿಯು ಜಿಯೋ ಫಸ್ಟ್ ಡೇ ಫಸ್ಟ್ ಶೋನಲ್ಲಿ ತನ್ನದೇ ಆದ ಚಲನಚಿತ್ರಗಳನ್ನು ನೀಡಲು ಪ್ರಾರಂಭಿಸಬಹುದು. ಆದರೆ, ಇದು ಥಿಯೇಟರ್ ಮಾಲೀಕರ ಆದಾಯದ ಮೇಲೆ ಪರಿಣಾಮ ಬೀರುತ್ತದೆಯೇ? ಮತ್ತು ಚಲನಚಿತ್ರ ನಿರ್ಮಾಪಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಮಯ ಮಾತ್ರ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.


Click it and Unblock the Notifications








