ಫೋನ್ ಕಳೆದುಹೋಯ್ತು ಅಂತಾ ಸುಮ್ಮನೇ ಆಗಬೇಡಿ! ಇಲ್ಲದಿದ್ದರೆ ಈ ಸಮಸ್ಯೆ ನಿಮಗೂ ಎದುರಾಗಬಹುದು!
ನಿಮ್ಮ ಫೋನ್ ಕಳುವಾಗಿದೆಯಾ, ಹೋದರೆ ಹೋಗಲಿ ಅಂತಾ ಸುಮ್ಮನೆ ಆಗುವವರು ಈ ಸ್ಟೋರಿಯನ್ನು ಓದಲೇಬೇಕು. ಮೊಬೈಲ್ ಕಳೆದುಹೋದ ನಂತರ ಹೆಚ್ಚಿನ ಜನರು ಸುಮ್ಮನೆ ಆಗಿ ಬಿಡುತ್ತಾರೆ. ಅರೆ ಕಳೆದುಹೋದ ಮೊಬೈಲ್ ಮರಳಿ ಸಿಗೋದಿಲ್ಲ ಬಿಡಿ ಅಂತಾ ಇದ್ದು ಬಿಡುತ್ತಾರೆ. ಆದರೆ ತಾವು ಸುಮ್ಮನೆ ಇದ್ದು ಬಿಟ್ಟರೆ ಆದರಿಂದಾಗುವ ನಷ್ಟ ಅಷ್ಟಿಷ್ಟಲ್ಲ.
ಹೌದು, ಫೋನ್ ಕಳೆದುಹೋದರೆ ಕೂಡಲೇ ನಿಮ್ಮ ಗೂಗಲ್ ಅಕೌಂಟ್ ಅನ್ನು ಬೇರೆ ಮೊಬೈಲ್‌ನಲ್ಲಿ ತೆರೆದು ಹಳೆ ಮೊಬೈಲ್‌ನಲ್ಲಿರುವ ನಿಮ್ಮ ಡೇಟಾವನ್ನು ಅಳಿಸಿಹಾಕುವುದು ಸೂಕ್ತ. ಇಲ್ಲದೆ ಹೋದರೆ ಮೊಬೈಲ್ ಕದ್ದವರು ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಾದ್ಯತೆ ಇರುತ್ತದೆ. ಅದರಲ್ಲೂ ನಿಮ್ಮ ಫೋನ್‌ನಲ್ಲಿ ಯುಪಿಐ ಅಕೌಂಟ್‌ಗಳಿದ್ದರೆ ಅದರಿಂದ ಹಣವನ್ನು ಕದಿಯುವ ಸಾದ್ಯತೆಯಿದೆ. ಇಂತಹದ್ದೆ ಘಟನೆ ಇದೀಗ ಕೋಲ್ಕತ್ತಾದಲ್ಲಿ ನಡೆದಿದೆ. ಅಷ್ಟಕ್ಕೂ ಈ ಘಟನೆಯಲ್ಲಿ ಆಗಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋಲ್ಕತ್ತಾ ಮೂಲದ ವ್ಯಕ್ತಿಯೊಬ್ಬ ತಡ ರಾತ್ರಿ ಸಮಯದಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದಾನೆ. ಬಸ್‌ನಲ್ಲಿರುವಾಗ ಕಳ್ಳರು ಮೊಬೈಲ್ ಅನ್ನು ಕದ್ದುಕೊಂಡಿದ್ದಾರೆ. ಮೊಬೈಲ್ ಕಳೆದುಹೋಗಿದೆ ಏನು ಮಾಡೋದು ಹೋದರೆ ಹೋಗಲಿ ಅಂತಾ ಆ ವ್ಯಕ್ತಿ ಸುಮ್ಮನೆ ಆಗಿದ್ದಾನೆ. ಆದರೆ ಆತ ಮೊಬೈಲ್ ಕಳೆದುಕೊಂಡ ಕೆಲವು ನಿಮಿಷಗಳ ಬಳಿಕ ಆತನ ಬ್ಯಾಂಕ್ ಖಾತೆಯಿಂದ 42,000ರೂ. ವರ್ಗಾವಣೆ ಆಗಿರೋದು ತಿಳಿದುಬಂದಿದೆ. ಇದಕ್ಕೆ ಕಾರಣ ಆತನ ಮೊಬೈಲ್‌ನಲ್ಲಿದ್ದ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಕಳ್ಳರು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಇಲ್ಲಿ ನಡೆದಿದ್ದೇನು?
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಕೆಸ್ಟೋಪುರದ ನಿವಾಸಿ ಶಂಕರ್ ಘೋಷ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದಾನೆ. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ಈತ ಕೈನಲ್ಲಿ ಮೊಬೈಲ್ ಹಿಡಿದುಕೊಂಡು ನೋಡುವಾಗ ಕಳ್ಳ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಿಟಕಿಯ ಹೊರಗೆ ನಿಂತಿದ್ದ ಆರೋಪಿಗಳು ನಾನು ಪ್ರತಿಕ್ರಿಯಿಸುವ ಮೊದಲೇ ಏಕಾಏಕಿ ಫೋನ್ ಕಸಿದುಕೊಂಡು ಓಡಿಹೋದರು, ನಂತರದ 15 ನಿಮಿಷಗಳಲ್ಲಿ 42,000 ರೂ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಘೋಷ್ ವಿವರಿಸಿದ್ದಾರೆ.
ಮೊದಲಿಗೆ ಫೋನ್ ಕಸಿದುಕೊಂಡ ಕಳ್ಳರು ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಅನ್ನೋದು ಘೋಷ್ ಅವರಿಗೆ ತಿಳಿದುಬಂದಿಲ್ಲ. ನಂತರ ಅವರು ಹೊಸ ಮೊಬೈಲ್ ಖರೀದಿಸಿ, ತಮ್ಮ ಹೆಸರಿನ ಸಿಮ್‌ಕಾರ್ಡ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅವರಿಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ವಿಚಾರ ತಿಳಿದಿದೆ. ಕೂಡಲೇ ಘೋಷ್ ಅವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಮೊಬೈಲ್ ಕಳ್ಳತನ ಹಾಗೂ ಅನಧಿಕೃತವಾಗಿ ಹಣ ವರ್ಗಾವಣೆ ಎಂದು ಎರಡು ದೂರುಗಳನ್ನು ದಾಖಲಿಸಿದ್ದಾರೆ.
ಈ ಘಟನೆಯ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಮೊಬೈಲ್ ಕದ್ದ ಕಳ್ಳರು ಯುಪಿಐ ಪಿನ್ ಅನ್ನು ಒಂದೇ ಬಾರಿಗೆ ಸರಿಯಾಗಿ ನಮೂದಿಸಿರುವುದು. ಈ ಕಾರಣಕ್ಕೆ ಈ ವಹಿವಾಟಿನ ಬಗ್ಗೆ ಬ್ಯಾಂಕ್ ಅಧಿಕಾರಿಗಳು ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದರೆ ಕಳ್ಳರು ಮೊಬೈಲ್‌ನಲ್ಲಿ ವೈಯುಕ್ತಿಕ ಡೇಟಾವನ್ನು ಕೂಡ ಕದ್ದಿದ್ದಾರೆ. ಇದರಲ್ಲಿ ಯುಪಿಐ ಪಿನ್ ಪಾಸ್‌ವರ್ಡ್‌ಗಳು ಕೂಡ ಸೇರಿವೆ ಅನ್ನೋದು ವಿಶೇಷ. ಆದರಿಂದ ನಿಮ್ಮ ಮೊಬೈಲ್ ಫೋನ್ ಕದ್ದರೆ ಅದರಲ್ಲಿ ಸಂಗ್ರಹವಾಗಿರುವ ನಿಮ್ಮ ವೈಯಕ್ತಿಕ ವಿವರಗಳು ದುರ್ಬಳಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹಿರಿಯ ಪತ್ತೆದಾರಿ ವಿಭಾಗದ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ನಿಮ್ಮ ಮೊಬೈಲ್‌ನಲ್ಲಿ ವೈಯುಕ್ತಿಕ ಮಾಹಿತಿ ಸಂಗ್ರಹಿಸುವ ಮುನ್ನ ಆಲೋಚಿಸುವುದು ಸೂಕ್ತ.


Click it and Unblock the Notifications








