ಖುಷಿ ಸುದ್ದಿ.. ಇನ್ಮುಂದೆ ಹಣ ಕೊಡಬೇಕಿಲ್ಲ: UPI ಮೂಲಕ KSRTC ಟಿಕೆಟ್ ಖರೀದಿಗೆ ಅವಕಾಶ
ಕೆಎಸ್‌ಆರ್‌ಟಿಸಿ (KSRTC) ಪ್ರಯಾಣಿಕರಿಗೆ ಖುಷಿ ಸುದ್ದಿ. ಇನ್ಮುಂದೆ ನೀವು ಚಿಲ್ಲರೆಗಾಗಿ ಕಂಡಕ್ಟರ್ ಜೊತೆ ಜಗಳವಾಡುವ ಸಂದರ್ಭವೇ ಉದ್ಭವಿಸಲ್ಲ. ಇಷ್ಟುದಿನ ಕಂಡಕ್ಟರ್ ಪಾಲಾಗುತ್ತಿದ್ದ ಒಂದೊಂದು ರೂಪಾಯಿ ಸಹ ನಿಮ್ಮ ಜೇಬಲ್ಲೇ ಸೇಫ್ ಆಗಿರಲಿದೆ. ಹೌದು, UPI ಮೂಲಕ KSRTC ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯು (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ತನ್ನ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಇದರ ಭಾಗವಾಗಿಯೇ, ಪ್ರಯಾಣಿಕರಿಗೆ UPI ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡುವ ಅವಕಾಶ ನೀಡಲು ಮುಂದಾಗಿದೆ.
ಹೌದು, ಜೂನ್ 25 ರಿಂದ KSRTC ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇದರ ಲಾಭ ಪಡೆಬಹುದು. ನೀವು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು ಮತ್ತು ನಗದು ಹಣ ಇಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇನ್ಮುಂದೆ ಹೊಸ ಪಾವತಿ ವ್ಯವಸ್ಥೆ ಜಾರಿಯಾಗಲಿದ್ದು, ಪ್ರಯಾಣಿಕರಿಗೆ ತುಂಬಾ ಸಹಾಯಕವಾಗಿದೆ.

KSRTC ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ಎಲ್ಲಾ ಕಂಡಕ್ಟರ್‌ಗಳಿಗೆ ತರಬೇತಿ ಸಹ ನೀಡಲಿದೆ. ಬಳಕ ಕೆಲವೇ ವಾರಗಳಲ್ಲಿ ಎಲ್ಲಾ ಬಸ್‌ಗಳಲ್ಲಿ ಈ ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬರಲಿದೆ. ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಯಂತೆ 10,245 ಇಟಿಎಂಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಇಟಿಎಂಗಳಿಗೆ ಇಂಟರ್ಫೇಸ್ ಸಾಫ್ಟ್‌ವೇರ್
EbixCash Ltd ಐದು ವರ್ಷಗಳ ಕಾಲ ETM ಗಳನ್ನು ಪೂರೈಸಲು ಒಪ್ಪಿಗೆ ನೀಡಿದೆ. ಈ ಒಪ್ಪಂದಕ್ಕೆ ಸಹಿ ಕೂಡ ಹಾಕಲಾಗಿದೆ. ಕಂಪನಿಯು ಇಟಿಎಂಗಳಿಗೆ ಬ್ಯಾಕೆಂಡ್ ಮತ್ತು ಇಂಟರ್ಫೇಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು KSRTC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು
KSRTC ಕಂಡಕ್ಟರ್‌ಗಳು ಎಂಟ್ರಿ (ಆಗಮನ) ಮತ್ತು ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು. ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು. ನಂತರ ಟಿಕೆಟ್ ದರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಪ್ರಯಾಣಿಕರು ಹಣ ಪಾವತಿಸಿದ ನಂತರ ಟಿಕೆಟ್ ಪಡೆಯಬಹುದು. ವಿಶೇಷವೆಂದರೆ, ಯಂತ್ರಗಳನ್ನು ಲಾಕ್ ಮಾಡಬಹುದು ಮತ್ತು ಅವುಗಳನ್ನು ಕದ್ದರೆ, ಅವುಗಳನ್ನು ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಕ್ತಿ ಯೋಜನೆ ಫಲಾನುಭವಿಗಳ ಕಥೆ ಏನು?
UPI ಮೂಲಕ ಟಿಕೆಟ್ ಖರೀದಿಯಿಂದ ಇ-ಪಾಸ್ ಹೊಂದಿರುವ KSRTC ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹ್ಯಾಂಡ್‌ಹೆಲ್ಡ್ ಇಟಿಎಂಯಲ್ಲಿ RFID ಸಾಧನವಿರಲಿದ್ದು, ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ಮೌಲ್ಯೀಕರಿಸಲು ಕ್ಯಾಮರಾ ಕೂಡ ಇದರಲ್ಲಿ ಇರುತ್ತದೆ. ಒಂದು ವೇಳೆ ರಾಜ್ಯ ಶಕ್ತಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಬಹುದು. ಆಗ ಕೂಡ ಅಳವಡಿಸಿಕೊಳ್ಳಲು ಈ ಯಂತ್ರಗಳಲ್ಲಿ ಅವಕಾಶ ಇರುತ್ತದೆ.
ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ
ಈ ಬಗ್ಗೆ KSRTC ಎಂಡಿ ಅನ್ಬು ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ETM ಗಳ ಮೂಲಕ, ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಪಪಾವತಿಸಿ, ಟಿಕೆಟ್ ಖರೀದಿ ಮಾಡಬಹುದು. ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಬಸ್ ಗಳಲ್ಲಿ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದೆ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. ಕಂಡಕ್ಟರ್‌ಗಳು ಚಿಲ್ಲರೆ ನೀಡಲಿಲ್ಲ ಎಂಬ ದೂರುಗಳು ಸಹ ಕಮೆಯಾಗಲಿದೆ ಎಂದು ಹೇಳಿದ್ದಾರೆ.
ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ ಟ್ರ್ಯಾಕಿಂಗ್
ಇನ್ನೂ ETM ಗಳಲ್ಲಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಗಳನ್ನು ಟ್ರ್ಯಾಕಿಂಗ್ ಮಾಡುವುದು. ಖಾಲಿ ಇರುವ ಆಸನಗಳ ಆಧಾರದ ಮೇಲೆ ಟಿಕೆಟ್‌ಗಳನ್ನು ನೀಡುವುದು, ಸ್ಥಳ ಟ್ರ್ಯಾಕಿಂಗ್ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳಂತಹ ಹಲವು ಫೀಚರ್‌ಗಳಿವೆ. ಆದರೆ, ಅವುಗಳನ್ನು ಕೂಡಲೇ ಸೇರಿಸಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಎಲ್ಲವನ್ನೂ ಅಳವಡಿಸಿಕೊಳ್ಳಲಾಗುವುದು ಎಂದು KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications








