ಅಮೆರಿಕಾಕ್ಕೆ ಸೆಡ್ಡು ಹೊಡೆದ 'ಸ್ವದೇಶಿ ಜಿಪಿಎಸ್' ಬಿಡುಗಡೆಗೆ ಕ್ಷಣಗಣನೆ!..ಇತಿಹಾಸ ಪುಟ ಸೇರಲಿದೆ ನಾವಿಕ್!!
ಅಮೆರಿಕದ ಜಿಪಿಎಸ್‌ಗೆ ಪರ್ಯಾಯವಾಗಿ ಭಾರತ ಅಭಿವೃದ್ಧಿಪಡಿಸಿರುವ ಸ್ವದೇಶಿ ಜಿಪಿಎಸ್ 'ನಾವಿಕ್' ಶೀಘ್ರದಲ್ಲಿಯೇ ತನ್ನ ಸೇವೆ ಆರಂಭಿಸಲಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಐಟಿ ಸಚಿವ ರವಿಶಂಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಮತ್ತು ಖಾಸಾಗಿಯಾಗಿ ನಾವಿಕ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.!
ಸರ್ಕಾರ ನೀಡಿದ ಹೇಳಿಕೆಗಳ ಪ್ರಕಾರ, 'ನಾವಿಕ್' ಸೇವೆ ಲೋಕಾರ್ಪಣೆಗೊಳ್ಳುವುದಷ್ಟೇ ಬಾಕಿ ಉಳಿದಿದೆ. 'ನಾವಿಕ್' ಸೇವೆ ಆರಂಭಿಸುವ ಸಂಬಂಧ ಕೋರಿಕೆ ಪ್ರಸ್ತಾವವನ್ನು ಸರ್ಕಾರ ಆಹ್ವಾನಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಇತಿಹಾಸ ಪುಟಕ್ಕೆ ಸೇರಿಕೊಳ್ಳುವ ಸ್ವದೇಶಿ ಜಿಪಿಎಸ್ 'ನಾವಿಕ್' ಅನ್ನು ಪ್ರತಿಯೋರ್ವ ಭಾರತೀಯ ಮೊಬೈಲ್ ಬಳಕೆದಾರನು ಬಳಸಬಹುದಾಗಿದೆ.

ಯುದ್ದದ ಸಂದರ್ಭದಲ್ಲಿ ಭಾರತಕ್ಕೆ ಜಿಪಿಎಸ್ ಮಾಹಿತಿ ಒದಗಿಸಲು ಖಡಾಖಂಡಿತವಾಗಿ ಭಾರತಕ್ಕೆ ನಿರಾಕರಿಸಿದ್ದ ಅಮೆರಿಕಾಕ್ಕೆ ಸೆಡ್ಡು ಹೊಡೆದಿರುವ ನಾವಿಕ್ ಬಿಡುಗಡೆ ಎಲ್ಲರಲ್ಲಿಯೂ ಕಾತುರ ಮೂಡಿಸಿದೆ. ಹಾಗಾದರೆ, ಭಾರತದ ಸ್ವದೇಶಿ ಜಿಪಿಎಸ್ ಸೇವೆ ಹೇಗಿರಲಿದೆ? ಸ್ವದೇಶಿ ಜಿಪಿಎಸ್ 'ನಾವಿಕ್' ಬಿಡುಗಡೆ ಆದ ನಂತರದ ಪರಿಸ್ಥಿತಿಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಕಾರ್ಗಿಲ್ ವೇಳೆಯಲ್ಲಿ ಜಿಪಿಎಸ್!
ಅದು 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿ ದಾಟಿ ದೇಶದೊಳಗೆ ಅಡಗಿದ್ದ ಪಾಕಿಸ್ತಾನ ಸೇನೆಯನ್ನು ಸದೆಬಡಿಯಲು ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮೂಲಕ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿತ್ತು. ಇಂಥ ಕಠಿಣ ಸಮಯದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ಖಡಾಖಂಡಿತವಾಗಿ ಭಾರತಕ್ಕೆ ನಿರಾಕರಿಸಿತು.!

ಸ್ವದೇಶಿ ಪಥದರ್ಶಕ ವ್ಯವಸ್ಥೆ!
ಯುದ್ದದಂತಹ ಕಠಿಣ ಸಂದರ್ಭದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ನಿರಾಕರಿಸಿದ ನಂತರ ಅಂದೇ ರಾಷ್ಟ್ರಕ್ಕೆ ಸ್ವದೇಶಿ ಪಥದರ್ಶಕ ವ್ಯವಸ್ಥೆಯ ಅಗತ್ಯ ಎಷ್ಟಿದೆ ಎಂಬುದರ ಅರಿವಾಯಿತು. ನಂತರ ಇಂಥ ವ್ಯವಸ್ಥೆಯನ್ನು ದೇಶೀಯವಾಗಿ ರೂಪಿಸಲು ಇಸ್ರೊ ಸಿದ್ಧಪಡಿಸಿದ ಯೋಜನೆಗೆ ಕೇಂದ್ರ ಸರ್ಕಾರ 2006ರ ಮೇನಲ್ಲಿ ಅನುಮೋದನೆ ನೀಡಿತ್ತು.

ಸಿದ್ದವಾಗಿದೆ ಸ್ವದೇಶಿ ಪಥದರ್ಶಕ
2006ರ ಮೇನಲ್ಲಿ ಅನುಮೋದನೆ ಪಡೆದ ಸ್ವದೇಶಿ ಪಥದರ್ಶಕ ಯೋಜನೆ 12 ವರ್ಷಗಳಲ್ಲಿ ಪೂರ್ಣಗೊಂಡು ಬಳಕೆಗೆ ತೆರೆದುಕೊಳ್ಳುತ್ತಿದೆ. ಭಾರತೀಯ ಉಪಗ್ರಹಗಳ ಮೂಲಕ ಅಮೆರಿಕದ ಜಿಪಿಎಸ್‌ಗಿಂತ ಹೆಚ್ಚು ನಿಖರವಾಗಿ ಪಥದರ್ಶಕ ಇನ್ನು ಭಾರತೀಯರಿಗೆ ಸಿಗಲಿದೆ. ಈ ಮೂಲಕ ಜಿಪಿಎಸ್ ವ್ಯವಸ್ಥೆ ಹೊಂದಿರುವ ಅಮೆರಿಕಾಕ್ಕೆ ಭಾರತದ ಪಥದರ್ಶಕ ಟಾಂಗ್ ನೀಡಿದೆ.

ಭಾರತದ ನಾವಿಕ್!!
ಭಾರತೀಯ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿರುವ ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ಅಂತಿಮ ಹಂತದ ಪರೀಕ್ಷೆ ಮುಗಿಸಿದೆ. ನಾವಿಕ್ ಕಾರ್ಯರಂಭಿಸಿದರೆ ಇಂತಹ ಸೌಲಭ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಲಿದೆ. ಭಾರತೀಯರಿಗೆ ನಾವಿಕ್ ದಾರಿಹೋಕನಾಗಲಿದೆ.!

ಜಿಪಿಎಸ್‌ಗಿಂತಲೂ ಬೆಸ್ಟ್ ನಾವಿಕ್!!
ಪ್ರಸ್ತುತ ಜಿಪಿಎಸ್ ಮೂಲಕ ದೇಶದಲ್ಲಿ ಸಂಚಾರಕ್ಕೆ ದೊರೆಯುತ್ತಿರುವ ಸೇವೆಗಿಂತ ಭಾರತದ ನಾವಿಕ್ ಸೇವೆ ನಿಖರವಾಗಿರಲಿದೆ. ನಾವಿಕ್ ಮ್ಯಾಪ್ ಹಾಕಿಕೊಂಡು ಹುಡುಕುವ ಸ್ಥಳಕ್ಕೆ ಬಹುಬೇಗ ಸೇರುತ್ತೇವೆ. ಯಾವುದೇ ಗೊಂದಲಗಳಲ್ಲಿದೆ ಕ್ಯಾಬ್, ಆಟೋ ನಮ್ಮದೇ ಮನೆ ಬಾಗಿಲಲ್ಲಿ ಬಂದು ನಿಲ್ಲಲಿವೆ.!

ಚಿಪ್‌ಗಳ ತಯಾರಿ ಆಗಬೇಕಿದೆ.
ಭಾರತೀಯ ರೈಲ್ವೆ, ಪರ್ವತಾರೋಹಣ, ಕ್ರೀಡೆ, ಸೇನೆ, ವಾಯುಯಾನ ಸೇರಿ ಹಲವು ಕಡೆ ಜಿಪಿಎಸ್ ಪಥದರ್ಶಕ ವ್ಯವಸ್ಥೆಯ ಬಳಕೆ ಹೆಚ್ಚಿದೆ. ಈ ಎಲ್ಲ ವಲಯಗಳಲ್ಲಿಯೂ ಇಸ್ರೊದ ‘ನಾವಿಕ್' ಮೂಲಕ ಮಾಹಿತಿ ಪಡೆಯಲು ಅಗತ್ಯವಾದ ಚಿಪ್‌ಗಳ ತಯಾರಿ ಹಾಗೂ ಸಾಧನಗಳಲ್ಲಿ ಅವುಗಳ ಅಳವಡಿಕೆ ತ್ವರಿತವಾಗಿ ಆಗಬೇಕಿದೆ.

1420 ಕೋಟಿ ರೂಪಾಯಿ ವೆಚ್ಚವಾಗಿದೆ.
ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಯೋಜನೆಗೆ ಇಲ್ಲಿಯವರೆಗೂ 1420 ಕೋಟಿ ರೂಪಾಯಿ ವೆಚ್ಚವಾಗಿದೆ. ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಲ್ಲಿ ಎಂಟು ಸರಣಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ಅಮೆರಿಕ (ಜಿಪಿಎಸ್), ರಷ್ಯಾ (ಗ್ಲೋನಾಸ್), ಐರೋಪ್ಯ ಒಕ್ಕೂಟ (ಗೆಲಿಲಿಯೋ) ಮಾತ್ರ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಹೊಂದಿವೆ.!!

ಕೂಡಲೇ ಸಾರ್ವಜನಿಕ ಬಳಕೆಗೆ!!
ಭಾರತೀಯ ವಿಜ್ಞಾನಿಗಳೇ ರೂಪಿಸಿರುವ ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ 2018 ರ ವರ್ಷದ ಕೊನೆಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ಕೇಂದ್ರದ ನಿರ್ದೇಶಕ ತಪನ್ ಮಿಶ್ರ ಈಗಾಗಲೇ ಹೇಳಿದ್ದಾರೆ.!

ನಾವಿಕ್ ಎಂದು ನಾಮಕರಣ ಮಾಡಿದ್ದು ಮೋದಿ!!
ಸ್ವದೇಶಿ ಜಿಪಿಎಸ್ ವ್ಯವಸ್ಥೆ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹಗಳನ್ನು (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಮೊದಲು ಐಆರ್ಎನ್ಎಸ್ಎಸ್ ಎಂಬ ಹೆಸರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾವಿಕ್ ಎಂದು ನಾಮಕರಣ ಮಾಡಿದ್ದರು.


Click it and Unblock the Notifications