ಇದು ದೇಶವೇ ಬೆಚ್ಚಿ ಬೀಳಿಸುವ ಘಟನೆ! ಏಕಕಾಲದಲ್ಲಿ 30,000 ಸಿಮ್ ಕಾರ್ಡ್ ಬ್ಯಾನ್!
ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ಹಾಗೂ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿರುವ ನಕಲಿ ಸಿಮ್‌ಕಾರ್ಡ್ ವಂಚನೆಯೊಂದು ಬಯಲಾಗಿದೆ. ಮುಂಬೈ ಪೋಲಿಸರು ಮತ್ತು ದೂರಸಂಪರ್ಕ ಇಲಾಖೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಕೃತ್ಯ ಬಹಿರಂಗವಾಗಿದೆ. ಇದೀಗ 30,000 ಸಿಮ್ ಕಾರ್ಡ್‌ಗಳನ್ನು ಡಿಸ್‌ಕನೆಕ್ಟ್ ಮಾಡಲಾಗಿದೆ.
ಹೌದು, ದೂರಸಂಪರ್ಕ ಇಲಾಖೆ ಮುಂಬೈನಲ್ಲಿ 30,000 ಸಿಮ್‌ಕಾರ್ಡ್‌ಗಳನ್ನು ಬ್ಯಾನ್ ಮಾಡಿದೆ. ಈ ಎಲ್ಲಾ ಸಿಮ್‌ಕಾರ್ಡ್‌ಗಳನ್ನು ನಕಲಿ ದಾಖಲೆ ನೀಡಿ ಪಡೆದುಕೊಳ್ಳಲಾಗಿದ್ದು, ಇಂದೊಂದು ಬೃಹತ ನಕಲಿ ಸಿಮ್ ಕಾರ್ಡ್ ಜಾಲವಾಗಿದೆ ಎಂದು ಹೇಳಲಾಗಿದೆ. ಈ ಸಿಮ್ ಕಾರ್ಡ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಜನರನ್ನು ವಂಚಿಸುವುದಕ್ಕೆ ಬಳಕೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಹಾಗಾದ್ರೆ ನಕಲಿ ಸಿಮ್ ಕಾರ್ಡ್ ಜಾಲ ಪತ್ತೆಯಾಗಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂತಹ ಸಿಮ್‌ಕಾರ್ಡ್‌ಗಳು ಮುಂಬೈನಲ್ಲಿ 30,000 ದಷ್ಟು ಪತ್ತೆಯಾಗಿದ್ದು ದೂರಸಂಪರ್ಕ ಇಲಾಖೆ ಅದೆಲ್ಲವನ್ನು ಬ್ಯಾನ್ ಮಾಡಿದೆ. ಕೂಡಲೇ ಡಿಸ್‌ಕನೆಕ್ಟ್ ಮಾಡಿದೆ ಎಂದು ವರದಿಯಾಗಿದೆ. ಈ ಸ್ಕ್ಯಾಮ್ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಮಲಬಾರ್ ಹಿಲ್‌ನಲ್ಲಿರುವ ಟೆಲಿಕಾಂ ಸೇವಾ ಪೂರೈಕೆದಾರರ ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಅಬ್ದುಲ್ ಹಕೀಮ್ ಮನ್ಸೂರಿ ಎಂಬ ವ್ಯಕ್ತಿ ತನ್ನ ಹೆಸರಿನಲ್ಲಿ 684 ಸಿಮ್ ಕಾರ್ಡ್‌ಗಳನ್ನು ನೀಡಿರುವುದು ಪತ್ತೆಯಾಗಿದೆ. ಇದಲ್ಲದೆ ಕೇವಲ 62 ಜನರ ಫೋಟೋ ದಾಖಲೆಗಳಿಗೆ ಸುಮಾರು 8,247 ಸಿಮ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದರೆ ಅಷ್ಟು ಸಿಮ್‌ಕಾರ್ಡ್‌ಗಳನ್ನು ಯಾರು ಬಳಸುತ್ತಿದ್ದಾರೆ ಅನ್ನೊದು ನಿಜಕ್ಕೂ ಬೆಚ್ಚಿಬೀಳಿಸುವಂತಹ ಸಂಗತಿಯಾಗಿದೆ.
ಈ ಹೊಸ ಸ್ಕ್ಯಾಮ್‌ನಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರು ಹೆಚ್ಚಿನ ಕಮಿಷನ್ ಪಡೆಯುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡಿದ್ದಾರೆ. ಅಲ್ಲದೆ ಯಾರದೋ ಗುರುತಿನ ದಾಖಲೆಗಳಿಗೆ ಸಿಮ್‌ಕಾರ್ಡ್‌ಗಳನ್ನು ನೀಡುವ ಮೂಲಕ ಹೊಸ ದಂದೆಗಳಿಗೆ ಆಹ್ವಾನ ಮಾಡಿಕೊಡುತ್ತಿದ್ದಾರೆ. ಈ ರೀತಿ ಪಡೆದ ಸಿಮ್ ಕಾರ್ಡ್‌ಗಳಿಂದ ಅಪರಾಧ ಕೃತ್ಯಗಳು ನಡೆದು ಅದರ ಮೂಲ ಪತ್ತೆ ಹಚ್ಚಿದಾಗ ಸಿಮ್ ಕಾರ್ಡ್ ಬಳಕೆದಾರನಿಗೂ ಸಿಮ್ ಕಾರ್ಡ್‌ಗೆ ಸಲ್ಲಿಸಿರುವ ದಾಖಲೆಯಲ್ಲಿನ ವ್ಯಕ್ತಿಗೂ ಸಂಬಂಧವೇ ಇರುವುದಿಲ್ಲ ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ.

ಸಿಮ್‌ಕಾರ್ಡ್ ವಂಚನೆಯನ್ನು ಪತ್ತೆ ಹಚ್ಚಿದ್ದು ಹೇಗೆ?
ಸಿಮ್ ಕಾರ್ಡ್ ವಂಚನೆಯನ್ನು ಪರಿಶೀಲಿಸಲು ದೂರಸಂಪರ್ಕ ಇಲಾಖೆ ಹೊಸ ತಂತ್ರಜ್ಞಾನವನ್ನು ಬಳಸಿದೆ. ಇದಕ್ಕಾಗಿ ಫೇಸಿಯಲ್ ರೆಕಗ್ನಿಷನ್ ಟೆಕ್ನಾಲಜಿ ಜೊತೆಗೆ ASTR-AI ಎಂಬ ಸೂಪರ್-ಕಂಪ್ಯೂಟರ್ ಆಧಾರಿತ ನೆಕ್ಸ್ಟ್ ಜನರೇಷನ್ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗಿದೆ. ಅದರಂತೆ ವಂಚಕರು ಇಲ್ಲಿ ಮೂರನೇ ವ್ಯಕ್ತಿಗಳಿಂದ ಆಧಾರ್ ದಾಖಲೆಗಳನ್ನು ಪಡೆದು ತಮ್ಮ ಅಥವಾ ಇತರರ ಫೋಟೋಗಳನ್ನು ಅಂಟಿಸುವ ಮೂಲಕ ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆ. ಇಂತಹ ನಕಲಿ ಗುರುತಿನ ದಾಖಲೆಗಳನ್ನು ಆಧರಿಸಿ ಸಿಮ್ ಕಾರ್ಡ್‌ಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಸ ತಂತ್ರಜ್ಞಾನದ ಮೂಲಕ ದೂರಸಂಪರ್ಕ ಇಲಾಖೆ ಟೆಲಿಕಾಂ ಸೇವಾ ಪೂರೈಕೆದಾರರು ಒದಗಿಸಿದ ಚಂದಾದಾರರ ಫೋಟೋಗಳು ಮತ್ತು ಡೇಟಾಬೇಸ್ ಮಾಹಿತಿಯನ್ನು ಹೋಲಿಸುವ ಮೂಲಕ ಸಿಮ್‌ಕಾರ್ಡ್‌ಗಳ ಸತ್ಯಾಸತ್ಯತೆ ಪರಿಶೀಲಿಸಿದೆ. ಇದರಲ್ಲಿ ವಿಭಿನ್ನ ಚಂದಾದಾರರ ಹೆಸರುಗಳೊಂದಿಗೆ ಒಂದೇ ರೀತಿಯ ಫೋಟೋಗಳನ್ನು ಹೊಂದಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಮೂಲಕ ಈ ವಂಚನೆಯಲ್ಲಿ ಮೋಸದಿಂದ ಪಡೆದುಕೊಂಡಿರುವ ಸಿಮ್‌ಕಾರ್ಡ್‌ಗಳ ವಿವರ ಬಹಿರಂಗವಾಗಿದೆ.

ತನಿಖೆಯ ಪರಿಣಾಮವಾಗಿ, ಮುಂಬೈನಲ್ಲಿ DoT ಗುರುತಿಸಿದ ಎಲ್ಲಾ 30,000 ನಾನ್-ಫೈಡ್ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅಲ್ಲದೆ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 13 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಸಿಮ್ ಕಾರ್ಡ್‌ಗಳನ್ನು ಪೂರೈಸುವ ಮೊಬೈಲ್ ಅಂಗಡಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಎಂದು ವರದಿ ತಿಳಿಸಿದೆ.


Click it and Unblock the Notifications








