'ಮೇಕ್ ಇನ್ ಇಂಡಿಯಾ' ಎಫೆಕ್ಟ್!..ದೇಶಕ್ಕೆ ಸಿಹಿಸುದ್ದಿ ನೀಡಿದ ಮೊಬೈಲ್ ಮಾರುಕಟ್ಟೆ!!
ಚೀನಾ ದೇಶದ ಮೊಬೈಲ್ ಕಂಪೆನಿಗಳು ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿವೆ ಎಂಬ ಶಾಕಿಂಗ್ ಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಆದರೆ, ಮೇಕ್ ಇನ್ ಇಂಡಿಯಾದ ಪರಿಣಾಮದಿಂದಾಗಿ ದೇಶದಲ್ಲಿ ಮಾರಾಟವಾಗುತ್ತಿರುವ ಶೇ 94%ರಷ್ಟು ಮೊಬೈಲ್‌ಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿವೆ ಎಂಬ ಸಮಾಧಾನಕರ ಸುದ್ದಿಯೊಂದು ಈಗ ವರದಿಯಾಗಿದೆ.
ಹೌದು, ಭಾರತದಲ್ಲಿ ಶೇ. 50 ಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ಹೊಂದಿರುವ ಚೀನಾ ಮೂಲದ ಮೊಬೈಲ್ ಕಂಪೆನಿಗಳು ಭಾರತದಲ್ಲೇ ಹೆಚ್ಚು ಮೊಬೈಲ್ ತಯಾರಿಸುತ್ತಿವೆ ಎಂದು ಸೈಬರ್ ಮೀಡಿಯಾ ರಿಸರ್ಚ್ ವರದಿ ಹೇಳಿದೆ. ಮೊಬೈಲ್ ಬೆಲೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ದೇಶೀಯವಾಗಿ ಮೊಬೈಲ್ ಉತ್ಪಾದನೆ ನಡೆಯುತ್ತಿದೆ ಎಂದು ವರದಿಯಲ್ಲಿ ಹೇಳಿದೆ.

ಭಾರತ ಸರ್ಕಾರದಿಂದ ಮೇಕ್ ಇನ್ ಇಂಡಿಯಾಗೆ ಸಿಗುತ್ತಿರುವ ವಿಶೇಷ ಉತ್ತೇಜನ ಹಾಗೂ ಮೊಬೈಲ್ ಆಮದು ಸುಂಕವನ್ನು ತಪ್ಪಿಸಿ, ಮೊಬೈಲ್ ಬೆಲೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಬಹುತೇಕ ಎಲ್ಲಾ ವಿದೇಶಿ ಮೊಬೈಲ್ ಕಂಪೆನಿಗಳು ಕೂಡ ಇಲ್ಲಿಯೇ ಮೊಬೈಲ್ ಉತ್ಪಾದನೆ ನಡೆಸುತ್ತಿವೆ ಎಂದು ಸೈಬರ್ ಮೀಡಿಯಾ ರಿಸರ್ಚ್ ವರದಿಯಲ್ಲಿ ಹೇಳಲಾಗಿದೆ.

ಶೀಘ್ರದಲ್ಲೇ ಭಾರತ ಜಗತ್ತಿನ ಅತಿ ದೊಡ್ಡ ಮೊಬೈಲ್ ಉತ್ಪಾದಕ ದೇಶವಾಗಲಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ ವಾರದ ಒಳಗಾಗಿ ಸೈಬರ್ ಮೀಡಿಯಾ ರಿಸರ್ಚ್ ಇಂತಹದೊಂದು ವರದಿಯನ್ನು ನೀಡಿದೆ. ಹಾಗಾದರೆ, ಈ ವರ್ಷದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆ ಹೇಗಿದೆ? ದೇಶದಲ್ಲಿ ಯಾವ ಮೊಬೈಲ್ ಕಂಪೆನಿಯ ಭರಾಟೆ ಹೆಚ್ಚು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಿದೇಶೀ ಕಂಪನಿಗಳ ಪ್ರಾಬಲ್ಯ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ವಿದೇಶೀ ಕಂಪನಿಗಳು ಶೇ 70%ಗಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಇವುಗಳ ಪಾಲು ಈ ವರ್ಷ 80 ಪರ್ಸೆಂಟ್‌ಗಿಂತ ಹೆಚ್ಚಿರಲಿದೆ ಎಂದು ಹೇಳಲಾಗಿದೆ. ದೇಶದಲ್ಲಿನ ಮೊಬೈಲ್ ಮಾರಾಟ ಕಂಪೆನಿಗಳ ಪೈಕಿ ಶಿಯೋಮಿ, ಸ್ಯಾಮ್‌ಸಂಗ್ ಒಪ್ಪೋ, ಶಿಯೋಮಿ, ವಿವೋಗಳದ್ದೇ ಭರಾಟೆ ಹೆಚ್ಚಿದೆ ಎಂದು ಸೈಬರ್ ಮೀಡಿಯಾ ರಿಸರ್ಚ್ ತಿಳಿಸಿದೆ.

ಮೊಬೈಲ್ ಮಾರಾಟದಲ್ಲಿ 9% ಏರಿಕೆ
ಈ ವರ್ಷದಲ್ಲಿ ದೇಶದಲ್ಲಿ ಮೊಬೈಲ್‌ಮಾರಾಟದ ಪ್ರಮಾಣ ಶೇ. 9% ಏರಿಕೆ ಕಂಡಿದ್ದರೆ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ. 24% ನಷ್ಟು ಏರಿಕೆ ಕಂಡುಬಂದಿದೆ. ಅದರಲ್ಲೂ ಮಲ್ಟಿ ಕ್ಯಾಮೆರಾ ತಳಿಗಳು 70% ರಷ್ಟು ಪ್ರಗತಿಯಲ್ಲಿ ಮಾರಾಟ ಕಾಣುತ್ತಿವೆ ಎಂದು ಹೇಳಿದೆ. ದೇಶೀ ಕಂಪನಿಗಳ ಪೈಕಿ ಲಾವಾ ಪಾಲು ಅತಿ ದೊಡ್ಡದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಚೀನೀ ಕಂಪೆನಿಗಳ ಪ್ರಾಬಲ್ಯ!
ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಪ್ರಾಬಲ್ಯ ಮೆರೆದಿವೆ. ಅಂದಾಜು 1 ಲಕ್ಷ ಕೋಟಿ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಬಹುಪಾಲು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಪ್ರಾಬಲ್ಯ 10 ರಿಂದ 11 ಪರ್ಸೆಂಟ್ ಏರಿಕೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ 50% ಕ್ಕಿಂತ ಹೆಚ್ಚು!
ಚೀನಾದ ನಾಲ್ಕು ಪ್ರಮುಖ ಕಂಪೆನಿಗಳಾದ ಶಿಯೋಮಿ, ಒಪ್ಪೊ, ವಿವೊ ಮತ್ತು ಹಾನರ್ ಕಂಪೆನಿಗಳು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ 50,000 ಕೋಟಿ ವ್ಯವಹಾರ ನಡೆಸಿವೆ. ಇನ್ನು ಒನ್‌ಪ್ಲಸ್, ಮೊಟೊನಂತಹ ಚೀನಾ ಮೊಬೈಲ್ ಕಂಪೆನಿಗಳು ಸಹ ಸೇರಿದರೆ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.50% ಪರ್ಸೆಂಟ್ ಪಾಲನ್ನು ಚೀನಾ ಕಂಪೆನಿಗಳೇ ಹೊಂದಿವೆ.

ವರ್ಷದಲ್ಲೇ 2 ಪಟ್ಟು ಹೆಚ್ಚಾಯ್ತು!
2016-17ರ ಆರ್ಥಿಕ ವರ್ಷದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು 26,262.4 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಆದರೆ, ಈ2017-18ರ ಅವಧಿಯಲ್ಲಿ ಒಟ್ಟು 51,722.1 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ, ಚೀನಾ ಮೊಬೈಲ್ ಕಂಪೆನಿಗಳು ಒಂದೇ ವರ್ಷದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ದ್ವಿಗುಣಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.

ಯಾವ ಕಂಪೆನಿ ಎಷ್ಟು ಆದಾಯ ಗಳಿಸಿದೆ?
ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿ ದೇಶದಲ್ಲಿ 22,947.3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನಗಳಿಸಿದೆ. ಎರಡನೇ ಸ್ಥಾನದಲ್ಲಿ ಒಪ್ಪೋ ಕಂಪನಿಯು 11,994.3 ಕೋಟಿ ರೂ. ವಹಿವಾಟು ನಡೆಸಿದೆ. ವಿವೋ 11,179.3 ಕೋಟಿ ರೂ. ವ್ಯಾಪಾರ ನಡೆಸಿದ್ದರೆ, ಪ್ರಖ್ಯಾತ ಬ್ರ್ಯಾಂಡ್ ಹುವಾವೆ ಕಂಪೆನಿ 5,601.3 ಕೋಟಿ ರೂ. ವಹಿವಾಟು ನಡೆಸಿದೆ.

ಬಜೆಟ್ ಫೋನ್‌ಗಳ ಮೇಲೆ ಹಿಡಿತ!
ಶಿಯೋಮಿ ಕಂಪೆನಿ .6,000-13,000 ಬೆಲೆಯ ಮೊಬೈಲ್‌ಗಳ ಮೇಲೆ ಹಿಡಿತ ಸಾಧಿಸಿದರೆ, ಒಪ್ಪೊ ಮತ್ತು ವಿವೊ ಕ್ರಮವಾಗಿ 10,000-22,000 ರೂ. ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಮಾರಾಟ ಮಾಡಿವೆ. ಹಾನರ್ ಕಂಪೆನಿ ಕೂಡ 8,000-12,000 ವಿಭಾಗದಲ್ಲಿ ಹೆಚ್ಚು ಪಾಲನ್ನು ಪಡೆದಿದೆ. ಇವುಗಳ ಮಧ್ಯೆ ಕೊರಿಯಾದ ಸ್ಯಾಮ್‌ಸಂಗ್ ಮಾತ್ರ ಹೆಚ್ಚು ಹೋರಾಟ ಮಾಡಿದೆ.

ಪ್ರೀಮಿಯಮ್‌ನಲ್ಲಿ ಒನ್‌ಪ್ಲಸ್!
ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಇವುಗಳ ಪಾಲು ಹೆಚ್ಚಿದ್ದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಒನ್‌ಪ್ಲಸ್ ಕಂಪೆನಿ ಮಿಂಚುತ್ತಿದೆ. ಈ ವರ್ಷ ಸತತ ಎರಡು ತ್ರೈಮಾಸಿಕಗಳಿದಲೂ ರೂ 30,000-ಪ್ಲಸ್ ವಿಭಾಗದಲ್ಲಿ ನಾಯಕತ್ವವನ್ನು ಉಳಿಸಿಕೊಳ್ಳುವಲ್ಲಿ ಒನ್‌ಪ್ಲಸ್ ಯಶಸ್ವಿಯಾಗಿದೆ. ಭಾರತ ಈ ಬ್ರಾಂಡ್‌ಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ

ಸ್ಯಾಮ್‌ಸಂಗ್ ಕಥೆ ಗೊತ್ತಿಲ್ಲ!
ಕೊರಿಯಾದ ಸ್ಯಾಮ್‌ಸಂಗ್ 2016-17ರ ಸಾಲಿನಲ್ಲಿ 34,261 ಕೋಟಿ ರೂ.ವ್ಯವಹಾರ ನಡೆಸಿದೆ. ಆದರೆ, 2018ರ ಆರ್ಥಿಕ ಸಾಲಿನ ಸ್ಯಾಮ್‍ಸಂಗ್ ಹಾಗೂ ಲೆನೆವೊ ಕಂಪನಿಗಳ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು 2018ನೇ ಆರ್ಥಿಕ ಸಾಲಿನಲ್ಲಿ ಆಪಲ್ 13,097 ಕೋಟಿ ರೂ. ವಹಿವಾಟನ್ನು ಭಾರತದ ಮಾರುಕಟ್ಟೆಯಲ್ಲಿ ನಡೆಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


Click it and Unblock the Notifications