ಫೋನ್ ಬುಕ್ ಮಾಡಿದ್ರೇ ಸೋಪ್ ಬಂತು..! ಅಮೆಜಾನ್ ಮೇಲೆ FIR..!
ನಾವು ಏನೋ ಬುಕ್ ಮಾಡಿದ್ರೇ ಆನ್‌ಲೈನ್‌ನಲ್ಲಿ ಮತ್ತೇನೋ ಬರುತ್ತೆ ಎಂಬುದನ್ನು ನೀವು ಎಷ್ಟೋ ಬಾರಿ ಕೇಳಿರ್ತಿರಿ ಅಥವಾ ನೋಡಿರ್ತಿರಿ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಸ್ಮಾರ್ಟ್‌ಫೋನ್ ಬುಕ್ ಮಾಡಿದ ಗ್ರಾಹಕನಿಗೆ ಸೋಪ್ ಬಂದಿದೆ. ಈ ಪ್ರಮಾದವನ್ನು ಎಸಗಿರುವುದು ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್ ಎಂಬುದನ್ನು ನಂಬಲೇಬೇಕು.

ಹೌದು, ಈಗ ಫೋನ್ ಬುಕ್ ಮಾಡಿದ ಗ್ರಾಹಕ ಅಮೆಜಾನ್ ಮೇಲೆ ದೂರು ಸಲ್ಲಿಸಿದ್ದು, ಗ್ರೇಟರ್ ನೋಯ್ಡಾದ ಬಿಸ್ರಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರ ಮೇಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಆಗಿದ್ರೇ ಏನೀದು ಪ್ರಕರಣ ಎಂಬುದನ್ನು ಮುಂದೆ ನೋಡಿ..!

ಯಾವಾಗ ಘಟನೆ..?
ಗ್ರೇಟರ್ ನೋಯ್ಡಾದಲ್ಲಿ ಬಿಸ್ರಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವರದಿಯಾಗಿದ್ದು, ದೂರು ಸಲ್ಲಿಸಿದ ಗ್ರಾಹಕ ಅಮೆಜಾನ್‌ನಲ್ಲಿ ಮೊಬೈಲ್ ಫೋನ್‌ನ್ನು ಆರ್ಡರ್ ಮಾಡಿದ್ದರು. ಆ ಫೋನ್‌ನ ಡೆಲಿವರಿ ಅಕ್ಟೋಬರ್ 27ರಂದು ಆಯಿತು. ಪಾರ್ಸಲ್ ತೆರೆದರೆ ಅದರಲ್ಲಿ ಫೋನ್ ಬದಲಾಗಿ ಸೋಪ್ ಬಂದಿದೆ ಎಂದಿದ್ದಾರೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಿಸ್ರಕ್ ನಿಶಾಂಕ್ ಶರ್ಮಾ ಪ್ರಕರಣವನ್ನು ವಿವರಿಸಿದ್ದಾರೆ.

ಯಾರ ಮೇಲೆ ಪ್ರಕರಣ..?
ಗ್ರಾಹಕ ದೂರು ಸಲ್ಲಿಸಿದ ಮೇಲೆ ಪೊಲೀಸರು FIR ದಾಖಲಿಸಿಕೊಂಡಿದ್ದು, ಅಮೆಜಾನ್‌ನ ಭಾರತದ ಮುಖ್ಯಸ್ಥ ಅಮಿತ್ ಅಗರ್‌ವಾಲ್, ಲಾಜಿಸ್ಟಿಕ್ ಸಂಸ್ಥೆ ದರ್ಶಿತಾ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾದ ಪ್ರದೀಪ್ ಕುಮಾರ್ ಮತ್ತು ರವೀಶ್ ಅಗರ್‌ವಾಲ್ ಹಾಗೂ ಡೆಲಿವರಿ ಬಾಯ್ ಅನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯಾವ್ಯಾವ ಸೆಕ್ಷನ್‌ನಲ್ಲಿ ಪ್ರಕರಣ..?
ಭಾರತೀಯ ದಂಡ ಸಂಹಿತೆ 420 (ಮೋಸ ಮತ್ತು ವಂಚನೆ), 406 (ಅಪನಂಬಿಕೆಯ ಕ್ರಿಮಿನಲ್ ಅಪರಾಧ) ಮತ್ತು 120B (ಕ್ರಿಮಿನಲ್ ಪಿತೂರಿ) ಎಂಬ IPC ಸೆಕ್ಷನ್‌ಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದು, ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.

ಅಮೆಜಾನ್‌ನಿಂದ ರೀಫಂಡ್
ಪ್ರಕರಣದ ಬಗ್ಗೆ ಅಮೆಜಾನ್ ಪ್ರತಿಕ್ರಿಯಿಸಿದ್ದು, ಘಟನೆ ನಡೆದಿರುವ ಬಗ್ಗೆ ಖಚಿತ ಪಡಿಸಿದೆ. ಅದಲ್ಲದೇ ದೂರುದಾರ ಗ್ರಾಹಕನಿಗೆ ರೀಫಂಡ್ ಪ್ರಕ್ರಿಯೆಯನ್ನು ಹೀಗಾಗಲೇ ಪ್ರಾರಂಭಿಸಿದ್ದು, ಸದ್ಯದಲ್ಲಿಯೇ ಗ್ರಾಹಕ ರೀಫಂಡ್ ಪಡೆಯಲಿದ್ದಾರೆ ಎಂದು ಅಮೆಜಾನ್ ಹೇಳಿದೆ.

ಅಮೆಜಾನ್‌ನಿಂದ ಗಂಭೀರ ನಿಲುವು
ಭಾರತದ ಅತಿ ನಂಬಿಕಸ್ಥ ಆನ್‌ಲೈನ್ ಮಾರುಕಟ್ಟೆ ತಾಣ ಆಗಿರುವ ಅಮೆಜಾನ್ ವಂಚನೆ ಪ್ರಕರಣದ ವಿರುದ್ಧ ಗಂಭೀರ ನಿಲುವನ್ನು ತಾಳಿದೆ. ಹೀಗಾಗಲೇ ಸ್ಥಳೀಯ ಪೊಲೀಸರು ಈ ಬಗ್ಗೆ ವಿಚಾರಣೆಯನ್ನು ಆರಂಭಿಸಿದ್ದಾರೆ. ಅದಲ್ಲದೇ ಅಮೆಜಾನ್ ಕೂಡ ಆಂತರಿಕ ತನಿಖೆಯನ್ನು ಮುಂದುವರೆಸಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅಮೆಜಾನ್ ಹೇಳಿದೆ.


Click it and Unblock the Notifications








