ಬಿಗ್ ಶಾಕ್: ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿನ 21 ಮಿಲಿಯನ್ ಪೋಸ್ಟ್ ಡಿಲೀಟ್
ತಂತ್ರಜ್ಞಾನ ಅನ್ನೋದು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಅನುಕೂಲಗಳು ಎಷ್ಟಿದೆಯೋ ಅಷ್ಟೇ ಅಪಾಯವೂ ಟೆಕ್ನಾಲಜಿಯಿಂದ ಸಂಭವಿಸಬಹುದು. ಇಂತಹ ಸಾಕಷ್ಟು ಘಟನೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಬೆಳಕಿಗೆ ಬರುತ್ತಿರುವುದನ್ನು ಕಾಣಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಒಬ್ಬರು, ಮತ್ತೊಬ್ಬರ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಶಿಕ್ಷೆಗೆ ಒಳಗಾದ ಅಸಂಖ್ಯಾತ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದೆ. ಈ ಮಧ್ಯೆಯೇ ಮೆಟಾ, ಬರೋಬ್ಬರಿ 21 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮೆಟಾ ತೆಗೆದು ಹಾಕಿದೆ. 4,172 ದೂರುಗಳ ಮೇಲೆ ಕ್ರಮ ಕೈಗೊಂಡಿದೆ.
ಹೌದು, ಮೇ ತಿಂಗಳಲ್ಲಿ ಫೇಸ್ಬುಕ್ (Facebook) ಮತ್ತು ಇನ್ಸ್ಟಾಗ್ರಾಮ್ (Instagram) ನಲ್ಲಿನ 21 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮೆಟಾ ತೆಗೆದು ಹಾಕಿದೆ. ಈ ಕುರಿತು ಮೆಟಾ ಮಾಹಿತಿ ನೀಡಿದೆ. ಭಾರತದಲ್ಲಿ ಫೇಸ್ಬುಕ್ನ 13 ನಿಯಮಗಳ ಅಡಿಯಲ್ಲಿ 15.6 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್ಗಳನ್ನು ತೆಗೆದುಹಾಕಲಾಗಿದೆ. ಇನ್ನೂ, ಇನ್ಸ್ಟಾಗ್ರಾಮ್ನ 12 ನಿಯಮಗಳ ಅಡಿಯಲ್ಲಿ 5.8 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್ಗಳನ್ನು (ಪೋಸ್ಟ್ಗಳು, ಫೋಟೋಗಳು, ವೀಡಿಯೊಗಳು ಅಥವಾ ಕಾಮೆಂಟ್ಗಳು) ತೆಗೆದುಹಾಕಲಾಗಿದೆ ಎಂದು ಹೇಳಿದೆ.

ನಿಯಮ ಉಲ್ಲಂಘಿಸುವ ಪೋಸ್ಟ್ಗಳ ವಿರುದ್ಧ ಕ್ರಮ
ಕಂಪನಿಯ ನಿಯಮಗಳನ್ನು ಉಲ್ಲಂಘಿಸುವ ಎಷ್ಟು ಪೋಸ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಕಿ ಅಂಶಗಳನ್ನು ನಾವು ಕಲೆ ಹಾಕುತ್ತೇನೆ. ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಿಂದ ಕಂಟೆಂಟ್ ಅನ್ನು ತೆಗೆದುಹಾಕುವುದು ಅಥವಾ ಕೆಲ ಬಳಕೆದಾರರಿಗೆ ತೊಂದರೆಯಾಗಬಹುದಾದ ಫೋಟೋಗಳು ಅಥವಾ ವಿಡಿಯೋಗಳ ವಿಷಯದಲ್ಲಿ ಎಚ್ಚರಿಕೆ ನೀಡುವುದು ಈ ಕ್ರಮಗಳಲ್ಲಿ ಸೇರಿವೆ ಎಂದು ಮೆಟಾ ತಿಳಿಸಿದೆ.
ಫೇಸ್ಬುಕ್ನಲ್ಲಿ 22,251 ದೂರು ದಾಖಲು
ಮೇ ತಿಂಗಳಲ್ಲಿ ಫೇಸ್ಬುಕ್ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 22,251 ದೂರುಗಳನ್ನು ಸ್ವೀಕರಿಸಿದೆ. ಇದಲ್ಲದೆ 13,982 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ. ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 8,269 ದೂರುಗಳನ್ನು ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್ ಅನ್ನು ವಿಶ್ಲೇಷಿಸಿದ್ದೇವೆ. ಮತ್ತು ಒಟ್ಟು 5,583 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 2,686 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಕ್ರಮ ಕೈಗೊಂಡಿಲ್ಲ ಎಂದು ಮೆಟಾ ತಿಳಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ 14,373 ಕೇಸ್
ಇನ್ಸ್ಟಾಗ್ರಾಮ್ನಲ್ಲಿ, ಮೆಟಾ ಕಂಪನಿಯು ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 14,373 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 7,300 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಸಾಧನಗಳನ್ನು ಒದಗಿಸಿದ್ದೇವೆ ಎಂದು ಮೆಟಾ ಮಾಹಿತಿ ನೀಡಿದೆ.
4,172 ದೂರುಗಳ ಮೇಲೆ ಕ್ರಮ, 2,901 ಕೇಸ್ ಪೆಂಡಿಂಗ್
ಮೆಟಾ ಕಂಪನಿಯು, ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 7,073 ದೂರುಗಳನ್ನು ಆಧರಿಸಿ ಈ ಕಂಟೆಂಟ್ಗಳನ್ನು ಪರಿಶೀಲಿಸಿದೆ. ಒಟ್ಟು 4,172 ದೂರುಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 2,901 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಕ್ರಮ ಕೈಗೊಂಡಿಲ್ಲ. ಹೊಸ ಐಟಿ ನಿಯಮಗಳು 2021ರ ಅಡಿಯಲ್ಲಿ, ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ.
ಜನವರಿಯಲ್ಲಿ 2.20 ಕೋಟಿ ಪೋಸ್ಟ್ ಡಿಲೀಟ್
ಭಾರತದಲ್ಲಿ ಫೇಸ್ಬುಕ್ನ 13 ನಿಯಮಗಳ ಅಡಿಯಲ್ಲಿ 1.78 ಕೋಟಿ (17.8 ದಶಲಕ್ಷ) ಆಕ್ಷೇಪಾರ್ಹ ಕಂಟೆಂಟ್ ಹಾಗೂ ಇನ್ ಸ್ಟಾಗ್ರಾಮ್ನ 12 ನಿಯಮಗಳ ಅಡಿಯಲ್ಲಿ 48 ಲಕ್ಷ (4.8 ದಶಲಕ್ಷ) ಆಕ್ಷೇಪಾರ್ಹ ಕಂಟೆಂಟ್ಗಳನ್ನು ಜನವರಿಯಲ್ಲಿ ಡಿಲೀಟ್ ಮಾಡಲಾಗಿತ್ತು. ಜನವರಿಯಲ್ಲಿ ಫೇಸ್ಬುಕ್ ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ 29,548 ದೂರು ವರದಿಗಳನ್ನು ಸ್ವೀಕರಿಸಿತ್ತು. ಮತ್ತು 21,060 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಧಾನಗಳನ್ನು ಒದಗಿಸಲಾಗಿತ್ತು ಎಂದು ಮೆಟಾ ತಿಳಿಸಿದೆ.
ಸಮಸ್ಯೆ ಪರಿಹಾರಕ್ಕೆ ಕ್ರಮ ಏನು?
ಮೆಟಾ ಕಂಪನಿಯು ಸಮಸ್ಯೆ ಪರಿಹಾರಕ್ಕಾಗಿ ಕೆಲವು ಮಾರ್ಗಗಳನ್ನು ರೂಪಿಸಿದೆ. ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ನಿರ್ದಿಷ್ಟ ನಿಯಮ ಉಲ್ಲಂಘನೆಗಳಿಗಾಗಿ ದೂರು ನೀಡಲು ಪೂರ್ವ-ಸ್ಥಾಪಿತ ಚಾನೆಲ್ಗಳು, ಬಳಕೆದಾರರು ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಬಹುದಾದ ಸ್ವಯಂ-ಪರಿಹಾರ ಸಾಧನಗಳು, ಖಾತೆ ಹ್ಯಾಕ್ ಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಒಳಗೊಂಡಿವೆ ಎಂದು ಹೇಳಿದೆ.
ಆಕ್ಷೇಪಾರ್ಹ ಪೋಸ್ಟ್ ಮಾಡುವ ಮುನ್ನ ಎಚ್ಚರ!
ಸಾಮಾಜಿಕ ಜಾಲತಾಣ ಬಳಕೆದಾರರೆಲ್ಲರೂ ಒಂದು ವಿಷಯವನ್ನು ಖಂಡಿತ ಅರ್ಥಮಾಡಿಕೊಳ್ಳಲೇ ಬೇಕು. ಆಕ್ಚೇಪಾರ್ಹ ವಿಷಯ ಎಂದರೆ ಯಾವುದು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ. ಕಾರಣ, ಸಾಕಷ್ಟು ಮಂದಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ಬಂಧನಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಮತ್ತೊಬ್ಬರ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡುವ ಮುನ್ನ ಎಚ್ಚರದಿಂದಿರಬೇಕು.


Click it and Unblock the Notifications








