ಆರೋಗ್ಯ ವಿಚಾರಗಳಿಗೆ ChatGPT ಬಳಸುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ?
ಇತ್ತೀಚಿನ OpenAI ವರದಿ ಪ್ರಕಾರ, ಪ್ರತಿದಿನ 4 ಕೋಟಿಗೂ ಹೆಚ್ಚು ಜನರು ಆರೋಗ್ಯ ಸಂಬಂಧಿತ ಸಲಹೆ, ಮಾಹಿತಿ ಮತ್ತು ಸ್ಪಷ್ಟತೆಗಾಗಿ ChatGPT ಅನ್ನು ಬಳಸುತ್ತಿದ್ದಾರೆ. ಒಟ್ಟು ಸಂದೇಶಗಳಲ್ಲಿ ಐದು ಶೇಕಡಕ್ಕಿಂತ ಹೆಚ್ಚು ಆರೋಗ್ಯ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಈ ವರದಿಯು ಹೇಳಿದೆ. ಇದರಿಂದಾಗಿ, ಡಿಜಿಟಲ್ ಆರೋಗ್ಯ ಸಹಾಯಕಗಳ ಮೇಲಿನ ಜನರ ನಂಬಿಕೆ ವೇಗವಾಗಿ ಹೆಚ್ಚುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. ಅಂದರೆ, ಜಗತ್ತಿನಾದ್ಯಂತ ಆರೋಗ್ಯ ಮಾಹಿತಿ ಹುಡುಕುವ ರೀತಿಯಲ್ಲಿ ದೊಡ್ಡ ಬದಲಾವಣೆ ನಡೆಯುತ್ತಿದೆ ಎಂದರ್ಥ.!
ಹೌದು, ಬಹುಮಟ್ಟಿಗೆ ಜನರು ತಮ್ಮಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಏನು ಸೂಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ChatGPT ಅನ್ನು ಮೊದಲ ಹೆಜ್ಜೆಯಾಗಿ ಬಳಸುತ್ತಿದ್ದಾರೆ. ಇದಲ್ಲದೆ, ವೈದ್ಯಕೀಯ ಪದಗಳು, ಪರೀಕ್ಷಾ ವರದಿಗಳ ಅರ್ಥ, ಔಷಧ ಸೇವನೆಯ ಸೂಚನೆಗಳು ಮತ್ತು ಚಿಕಿತ್ಸಾ ಆಯ್ಕೆಗಳ ಬಗ್ಗೆ ಸರಳವಾಗಿ ತಿಳಿದುಕೊಳ್ಳಲು ಈ AI ಉಪಕರಣ ಜನಪ್ರಿಯವಾಗುತ್ತಿದೆ. ವೈದ್ಯರನ್ನು ಭೇಟಿ ಮಾಡುವ ಮುನ್ನ ಮಾಹಿತಿ ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯ ನಿರ್ಧಾರಗಳಲ್ಲಿ ಹೆಚ್ಚು ಜಾಗೃತರಾಗಲು ಜನರು ಪ್ರಯತ್ನಿಸುತ್ತಿದ್ದಾರೆ ಎಂದು OpenAI ವರದಿಯು ಹೇಳಿದೆ.
OpenAI ತನ್ನ ವರದಿಯಲ್ಲಿ ChatGPT ಅನ್ನು ಜನಸಾಮಾನ್ಯರಿಗೆ ನೆರವಾಗುವ ಉಪಯುಕ್ತ ಸಾಧನವಾಗಿ ವಿವರಿಸಿದೆ. ದುಬಾರಿ ಚಿಕಿತ್ಸೆ, ಗೊಂದಲಭರಿತ ನಿಯಮಗಳು ಮತ್ತು ವೈದ್ಯರ ಕೊರತೆಯಿಂದ ಬಳಲುವ ಜನರಿಗೆ ಇದು ಮಾಹಿತಿ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಕಂಪನಿ ಹೇಳಿದೆ. ವಿಶೇಷವಾಗಿ ಆಸ್ಪತ್ರೆಗಳೇ ಇಲ್ಲದ ಅಥವಾ ವೈದ್ಯಕೀಯ ಸೌಲಭ್ಯ ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ವರಯದಿ ಪ್ರಕಾರ, ಇಂತಹ "ಹಾಸ್ಪಿಟಲ್ ಡೆಸರ್ಟ್" ಪ್ರದೇಶಗಳಿಂದ ಪ್ರತಿವಾರ ಸುಮಾರು 5.8 ಲಕ್ಷ ಆರೋಗ್ಯ ಸಂಬಂಧಿತ ಪ್ರಶ್ನೆಗಳು ChatGPT ಗೆ ಬರುತ್ತಿವೆ. ಇದು ಜನರು ತಕ್ಷಣದ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಡಿಜಿಟಲ್ ವೇದಿಕೆಗಳತ್ತ ಮುಖ ಮಾಡುತ್ತಿರುವುದನ್ನು ತೋರಿಸುತ್ತದೆ. ಚಿಕಿತ್ಸೆಗಾಗಿ ತಯಾರಿ ನಡೆಸುವುದು, ವೈದ್ಯರನ್ನು ಪ್ರಶ್ನಿಸಲು ಅಗತ್ಯವಾದ ಮಾಹಿತಿ ಸಂಗ್ರಹಿಸುವುದು ಮತ್ತು ಆರೋಗ್ಯ ಹಕ್ಕುಗಳ ಬಗ್ಗೆ ಅರಿವು ಪಡೆಯುವುದು ಇದರ ಪ್ರಮುಖ ಬಳಕೆಗಳಾಗಿವೆ.
AI ತಂತ್ರಜ್ಞಾನವು ಆಸ್ಪತ್ರೆಗಳನ್ನು ಪುನಃ ತೆರೆಯಲಾರದು ಅಥವಾ ವೈದ್ಯರ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಲಾರದು ಎಂಬುದನ್ನು OpenAI ಕೂಡ ಒಪ್ಪಿಕೊಳ್ಳುತ್ತದೆ. ಆದರೆ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು, ರೋಗಿಗಳು ಮತ್ತು ವೈದ್ಯರ ನಡುವಿನ ಸಂವಹನವನ್ನು ಸುಧಾರಿಸಲು ಹಾಗೂ ವೈದ್ಯರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಇದು ತಕ್ಷಣದ ಮಟ್ಟದಲ್ಲಿ ಸಹಕಾರಿಯಾಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಇನ್ನು ಈ ಪ್ರವೃತ್ತಿ ವಿಶೇಷವಾಗಿ ಅಮೆರಿಕದಂತಹ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಭಾಗವಾಗುತ್ತಿದೆ. ಕೆಲವು ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿ AI ಬಳಕೆಗೆ ಮಿತಿ ವಿಧಿಸುವ ಬಗ್ಗೆ ಚಿಂತಿಸುತ್ತಿದ್ದರೆ, ಕೇಂದ್ರ ಮಟ್ಟದಲ್ಲಿ ಸ್ಪಷ್ಟ ನೀತಿ ರೂಪಿಸುವ ಪ್ರಕ್ರಿಯೆ ಇನ್ನೂ ನಿಧಾನಗತಿಯಲ್ಲಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ಭವಿಷ್ಯ ಕುರಿತ ಚರ್ಚೆಗಳು ಮತ್ತಷ್ಟು ಗಂಭೀರವಾಗುತ್ತಿವೆ ಎಂದು ಹೇಳಿದೆ.
ಇದರ ನಡುವೆ, ChatGPT ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಆರೋಪಗಳೂ ಕೇಳಿಬರುತ್ತಿವೆ. ಕೆಲ ಪ್ರಕರಣಗಳಲ್ಲಿ AI ಉತ್ತರಗಳು ಆತಂಕ ಅಥವಾ ಗೊಂದಲವನ್ನು ಹೆಚ್ಚಿಸಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ OpenAI ವಿರುದ್ಧ ಕಾನೂನು ಹೋರಾಟಗಳು ನಡೆದಿವೆ. ತಜ್ಞರು, AI ಅನ್ನು ವೈದ್ಯರ ಪರ್ಯಾಯವಾಗಿ ಅಲ್ಲ, ಮಾಹಿತಿ ಸಹಾಯಕವಾಗಿ ಮಾತ್ರ ಬಳಸಬೇಕು ಎಂದು ಎಚ್ಚರಿಸುತ್ತಿದ್ದಾರೆ.
ChatGPT ಸೇರಿದಂತೆ AI ಆಧಾರಿತ ಆರೋಗ್ಯ ಸಹಾಯಕಗಳು ಜಾಗತಿಕ ಆರೋಗ್ಯ ಮಾಹಿತಿ ವ್ಯವಸ್ಥೆಯಲ್ಲಿ ಹೊಸ ದಿಕ್ಕು ತೋರಿಸುತ್ತಿವೆ. ಭಾರತದಲ್ಲಿ ಕೂಡ ಟೆಲಿಮೆಡಿಸಿನ್ ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ, ಜವಾಬ್ದಾರಿಯುತ ಬಳಕೆಯೊಂದಿಗೆ ಇಂತಹ ತಂತ್ರಜ್ಞಾನಗಳು ಸಾರ್ವಜನಿಕ ಆರೋಗ್ಯ ಜಾಗೃತಿಗೆ ಮತ್ತು ಮಾಹಿತಿ ಪ್ರವೇಶಕ್ಕೆ ದೊಡ್ಡ ಉತ್ತೇಜನ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಏನಂತಿರಾ?..ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








