Whatsapp:ಹೊಸ ಗೌಪ್ಯತೆ ನೀತಿ ಹಿಂತೆಗೆದುಕೊಳ್ಳುವಂತೆ ಕೇಂದ್ರದಿಂದ ನೋಟಿಸ್!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಹೊಸ ಗೌಪ್ಯತೆ ನೀತಿ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದೆ. ಇನ್ನು ಭಾರತದಲ್ಲಿ ಹೊಸ ಗೌಪ್ಯತೆ ನೀತಿಯನ್ನ ಹಿಂತೆಗೆದುಕೊಳ್ಳುವಂತೆ ಈಗಾಗಲೇ ಕೇಂದ್ರ ಸರ್ಕಾರ ವಾಟ್ಸಾಪ್‌ಗೆ ಪತ್ರ ಬರೆದಿತ್ತು. ಇದೀಗ ಮತ್ತೊಮ್ಮೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಮೀಟಿವೈ) ವಾಟ್ಸಾಪ್‌ಗೆ ಹೊಸ ನೋಟಿಸ್ ಕಳುಹಿಸಿದ್ದು, ಹೊಸ ಗೌಪ್ಯತೆ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಕೋರಿದೆ.

ಹೌದು, ವಾಟ್ಸಾಪ್‌ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಕಳುಹಿಸಿದೆ. ಹೊಸ ಗೌಪ್ಯತೆ ನೀತಿ ಬಳಕೆದಾರರ ಮಾಹಿತಿ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಅಲ್ಲದೆ ಹೊಸ ನೋಟಿಸ್‌ಗೆ ಪ್ರತಿಕ್ರಿಯಿಸಲು ಐಟಿ ಸಚಿವಾಲಯವು ವಾಟ್ಸಾಪ್‌ಗೆ ಮೇ 25 ರವರೆಗೆ ಸಮಯವನ್ನು ನೀಡಿದೆ. ಇದು ವಿಫಲವಾದರೆ "ಕಾನೂನಿನ ಪ್ರಕಾರ ಅಗತ್ಯವಾದ ಎಲ್ಲಾ ಕ್ರಮಗಳನ್ನು" ವಾಟ್ಸಾಪ್ ವಿರುದ್ದ ತೆಗೆದುಕೊಳ್ಳುವುದಾಗಿ ಹೇಳಿದೆ. ಹಾಗಾದ್ರೆ ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ನೀಡಿದ ನೋಟಿಸ್‌ನಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಸಾರ್ವಭೌಮ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಕಾನೂನಿನಡಿಯಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತದೆ ಎಂದು ಕೇಂದ್ರ ಐಟಿ ಸಚಿವಾಲಯ ವಾಟ್ಸಾಪ್‌ಗೆ ಹೇಳಿದೆ. ವಾಟ್ಸಾಪ್‌ಗೆ ಕಳುಹಿಸಲಾದ ನೋಟಿಸ್‌ನಲ್ಲಿ "ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳು ಮತ್ತು FAQ ಸೇರಿದಂತೆ ಈ ಬದಲಾವಣೆಗಳನ್ನು ಪರಿಚಯಿಸುವ ವಿಧಾನವು ಮಾಹಿತಿ ಗೌಪ್ಯತೆ, ಡೇಟಾ ಸುರಕ್ಷತೆ ಮತ್ತು ಬಳಕೆದಾರರ ಆಯ್ಕೆಯ ಪವಿತ್ರ ಮೌಲ್ಯಗಳನ್ನು ಹಾಳು ಮಾಡುತ್ತದೆ ಎಂದು ಹೇಳಲಾಗಿದೆ. ಭಾರತೀಯ ಬಳಕೆದಾರರು ಮತ್ತು ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುವವರ ವಿರುದ್ದ ಯಾವುದೇ ನಿರ್ಧಾರಕ್ಕೂ ಬದ್ದ ಎಂದು ಹೇಳಿದೆ".

ಇನ್ನು ವಾಟ್ಸಾಪ್ ತನ್ನ ವಿವಾದಾತ್ಮಕ ಗೌಪ್ಯತೆ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಐಟಿ ಸಚಿವಾಲಯ ಕಳುಹಿಸಿದ ಎರಡನೇ ನೋಟಿಸ್ ಇದಾಗಿದೆ. ಈ ವರ್ಷದ ಜನವರಿಯಲ್ಲಿ, ಸಚಿವಾಲಯವು ವಾಟ್ಸಾಪ್‌ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ ಕ್ಯಾಥ್‌ಕಾರ್ಟ್‌ಗೆ ಪತ್ರವೊಂದನ್ನು ಬರೆದಿದ್ದು, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಇತ್ತೀಚಿನ ಗೌಪ್ಯತೆ ಮತ್ತು ನೀತಿ ನವೀಕರಣವನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿತ್ತು. ಆದರೆ ಇದೀಗ ಮತ್ತೊಮ್ಮೆ ವಾಟ್ಸಾಪ್‌ಗೆ ನೋಟಿಸ್ ನೀಡಿದ್ದು ಕಠಿಣ ಮಾತುಗಳನ್ನು ಪುನರುಚ್ಚಸಿದೆ.

ಈ ವಿಧಾನವು ಡೇಟಾ ಗೌಪ್ಯತೆ, ಬಳಕೆದಾರರ ಆಯ್ಕೆ ಮತ್ತು ಭಾರತೀಯ ಬಳಕೆದಾರರ ಸ್ವಾಯತ್ತತೆಯ ಪ್ರಮುಖ ಮೌಲ್ಯಗಳನ್ನು ಉಲ್ಲಂಘಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ನ ಬೃಹತ್ ಬಳಕೆದಾರರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಈ ಸೂಕ್ಷ್ಮ ಮಾಹಿತಿಯ ಬಲವರ್ಧನೆಯು ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರನ್ನು ಹೆಚ್ಚಿನ ಮಾಹಿತಿ ಸುರಕ್ಷತೆ ಅಪಾಯ ಸೃಷ್ಟಿಸುವ ದುರ್ಬಲತೆಗಳಿಗೆ ಒಡ್ಡಿಕೊಳ್ಳುತ್ತದೆ "ಎಂದು ಐಟಿ ಸಚಿವಾಲಯ ಪತ್ರದಲ್ಲಿ ತಿಳಿಸಿದೆ. ಅಲ್ಲದೆ ಯುರೋಪ್‌ನಲ್ಲಿರುವವರಿಗೆ ಹೋಲಿಸಿದರೆ ಭಾರತೀಯ ವಾಟ್ಸಾಪ್ ಬಳಕೆದಾರರಿಗೆ ತಾರತಮ್ಯದ ಚಿಕಿತ್ಸೆಯ ವಿಷಯವನ್ನು ಮತ್ತೊಮ್ಮೆ ಕೈಗೆತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.


Click it and Unblock the Notifications








