ನಿಮ್ಮ ಪೋಷಕರಿಗೆ ಈ ಆನ್‌ಲೈನ್ ವಂಚನೆಗಳ ಬಗ್ಗೆ ಮರೆಯದೇ ಪಾಠ ಮಾಡಿ!!
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡಬಹುದು ಎಂಬ ವಿಚಾರಗಳು ಈಗಾಗಲೇ ನಿಮಗೆ ತಿಳಿದಿರಬಹುದು. ನಾವು ಈ ಎಲ್ಲಾ ವಂಚನೆಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಹೊಂದಿದ್ದರೂಸಹ, ನಮ್ಮ ಪೋಷಕರಿಗೆ ಇವುಗಳ ಬಗ್ಗೆ ಅಷ್ಟೇನು ಮಾಹಿತಿ ಇರುವುದಿಲ್ಲ. ಹಾಗಾಗಿ, ನಿಮ್ಮ ಪೋಷಕರಿಗೆ ನೀವು ಡಿಜಿಟಲ್ ಬಗ್ಗೆ ತಿಳಿಸುವುದು ಒಳಿತು.
ಅಂತರ್ಜಾಲ ಬಳಕೆ ದಿನದಿಂದ ದಿನಕ್ಕೆ ಏರುತ್ತಾ ಹೋದಂತೆ ಅಪಾಯಗಳೂ ಕೂಡಾ ಹೆಚ್ಚುತ್ತಾ ಹೋಗುತ್ತಿದೆ. ಈಗ ಅಂತರ್ಜಾಲವನ್ನು ನಿಮ್ಮ ಪೋಷಕರೂ ಕೂಡ ಬಳಸುವುದರಿಂದ, ಆನ್‌ಲೈನ್ ವಂಚನೆ, ಮಾಹಿತಿ ಸೋರಿಕೆ, ಚಿತ್ರಗಳ ದುರುಪಯೋಗ ಹೀಗೆ ಹಲವಾರು ತೊಂದರೆಗಳ ಬಗ್ಗೆ ಅವರಿಗೆ ನೀವು ಮಾಹಿತಿ ತಿಳಿಸದೇ ಇದ್ದರೆ, ಅವರು ಮೋಸ ಹೋಗುವ ಸಾಧ್ಯತೆ ಹೆಚ್ಚು.

ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್ ವಂಚನೆ, ಮಾಹಿತಿ ಸೋರಿಕೆ, ಚಿತ್ರಗಳ ದುರುಪಯೋಗ, ಹೀಗೆ ಯಾವ ಯಾವ ಆನ್‌ಲೈನ್ ವಂಚನೆಗಳ ಬಗ್ಗೆ ನಿಮ್ಮ ಪೋಷಕರಿಗೆ ನೀವು ತಿಳಿಸಬೇಕಾದ ಅಂಶಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೇವೆ. ಅವುಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

ಎಟಿಎಂ ಅಥವಾ ಬ್ಯಾಂಕ್ಗಳ ಪಿನ್ಕೋಡ್
ನಿಮ್ಮ ಪೋಷಕರಿಗೆ ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿಯೇ ಬಹಳ ಮುಖ್ಯವಾಗಿ ಬೇಕಾಗಿರುವುದು. ಬ್ಯಾಂಕ್ಗಳ ಮಾಹಿತಿ, ತಮ್ಮ ಎಟಿಎಂ/ಕ್ರೆಡಿಟ್ ಕಾರ್ಡ್ ಮಾಹಿತಿ, ಹೀಗೆ ಹಣಕಾಸು ವಿಚಾರಗಳ ಮಾಹಿತಿಯನ್ನು ಎಲ್ಲೂ ಸೇವ್ ಮಾಡಿಟ್ಟುಕೊಳ್ಳದಂತೆ ಹೇಳಿಕೊಡಿ. ಮತ್ತೆ ಯಾರಿಗೂ ಈ ಬಗ್ಗೆ ಮಾಹಿತಿ ನೀಡಲೇಬೇಡಿ ಎಂದು ಖಡಾಖಂಡಿತವಾಗಿ ತಿಳಿಸಿ.

ಸ್ಪ್ಯಾಪ್ ಇ-ಮೇಲ್, ಮೆಸೇಜ್‌ಗಳು
ಅಂತರ್ಜಾಲದ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ಪೋಷಕರು, ಸ್ಪ್ಯಾಪ್ ಇ-ಮೇಲ್, ಮೆಸೇಜ್ಗಳ ಬಗ್ಗೆ ಮಾಹಿತಿಯನ್ನು ತಿಳಿಯದೇ ಇರಬಹುದು. ಬ್ರೌಸಿಂಗ್ ಮಾಡುವಾಗ ಹಲವಾರು ಸ್ಪ್ಯಾಮ್ ಮೇಲ್ಗಳು ಬರುತ್ತಿರುತ್ತವೆ. ಒಂದು ವೇಳೆ ಇವುಗಳನ್ನು ತೆರೆದು ನೋಡಿದರೆ ಹಣಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇವುಗಳ ಬಗ್ಗೆ ಎಚ್ಚರಿಸಿ.

ಮೊಬೈಲ್ ರಿಪೇರಿ ಹಾಗೂ ಬ್ಯಾಂಕ್ ಸಿಬ್ಬಂದಿ ಕರೆ!
ಬಹುತೇಕ ಸಮಯದಲ್ಲಿ ವಂಚಕರು ಮೊಬೈಲ್ಗಳಲ್ಲಿನ ಸಮಸ್ಯೆ ಸರಿಪಡಿಸುವುದಾಗಿ ಕರೆ ಮಾಡಿದರೆ ಅಥವಾ ಬ್ಯಾಂಕ್ಗಳಲ್ಲಿನ ಸಮಸ್ಯೆ ಕುರಿತು ಕರೆ ಮಾಡಿ ನಿಮ್ಮ ಎಟಿಎಂ, ಸಿಮ್ ಸಂಖ್ಯೆ ಹಾಗೂ ಇತರೇ ದಾಖಲೆಗಳನ್ನು ಕೇಳುತ್ತಾರೆ. ಅಂತಹ ಯಾವುದೇ ಕರೆಗಳು ಬಂದರೆ ಅವುಗಳನ್ನು ತಿರಸ್ಕರಿಸುವಂತೆ ಹೇಳಿ.

ನಕಲಿ ಆಪ್ಗಳ ಕುರಿತು ಎಚ್ಚರಿಕೆ
ಪ್ಲೇಸ್ಟೋರ್‌ನಲ್ಲಿ ಸಾವಿರಾರು ಮೋಸದ ಆಪ್‌ಗಳು ಬೀಡುಬಿಟ್ಟಿರುತ್ತವೆ. ಸಹಾಯ ಮಾಡುವ ಸೊಗಿನಲ್ಲಿ ಬಳಕೆದಾರರ ಖಾಸಾಗಿ ಮಾಹಿತಿಯನ್ನು ಈ ಆಪ್‌ಗಳು ಕಲೆಹಾಕಬಹುದು. ಇನ್ನು ಕೆಲವು ಆಪ್‌ಗಳು ಜಾಹೀರಾತಿಗೆ ಮಾತ್ರಾ ಸೀಮಿತವಾಗಿರಬಹುದು. ಹಾಗಾಗಿ, ನಿಮ್ಮ ಪೋಷಕರಿಗೆ ಇಂತಹ ಅನಗತ್ಯ ಆಪ್‌ಗಳನ್ನು ಡೌನ್‌ಲೋಡ್ ಮಾಡದಂತೆ ತಿಳಿಸಿ.

ಸಿಮ್, ಆಧಾರ್, ವೋಟರ್ ಐಡಿ, ಪಾನ್ಕಾರ್ಡ್ ಮಾಹಿತಿ
ವಂಚಕರು ಕರೆ ಮಾಡಿ ನಿಮ್ಮ ಸಿಮ್, ಆಧಾರ್, ವೋಟರ್ ಐಡಿ, ಪಾನ್ಕಾರ್ಡ್ ಮಾಹಿತಿಗಳನ್ನು ಅಪ್‌ಡೇಟ್ ಮಾಡಬೇಕಿದೆ ಎಂದು ಹೇಳುತ್ತಿರುತ್ತಾರೆ. ಹಾಗಾಗಿ, ಆಧಾರ್, ವೋಟಾರ್ ಐಡಿ ಅಥವಾ ಇತರೇ ದಾಖಲೆಗಳ ಮಾಹಿತಿಯನ್ನು ಫೋನಿನಲ್ಲಿ ಸಂಭಾಷಣೆ ನಡೆಸಿದ ಯಾವ ವ್ಯಕ್ತಿಗೂ ನೀಡಲೇಬಾರದು ಎಂಬುದನ್ನು ಹೇಳಿ.

ಆಮಿಷಕ್ಕೆ ಬಲಿಯಾಗದಂತೆ ತಿಳಿಸಿ.!
ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿರುವಾಗ ಅವರಿಗೆ ಭಾರೀ ಗಿಫ್ಟ್ ಬಂದಿರುವ ಬಗ್ಗೆ ಮೆಸೇಜ್‌ಗಳು ಬಂದಿರುವುದನ್ನು ನೀವು ನೋಡಬಹುದು. ಹಿರಿಯರು ಈ ಆಮಿಷಗಳಿಗೆ ಶೀಘ್ರವಾಗಿ ಬಲಿಯಾಗುವುದು ಹೆಚ್ಚು, ಹಾಗಾಗಿ, ಇಂತಹ ಆಮಿಷಗಳ ಬಲೆಗೆ ಬೀಳಬೇಡಿ. ಅಂತಹ ಆಮಿಷಗಳು ನಮ್ಮನ್ನು ವಂಚಿಸಲು ಇವೆ ಎಂಬುದನ್ನು ತಿಳಿಸಿ ಹೇಳಿ.


Click it and Unblock the Notifications