ಭಾರತದಲ್ಲಿ ಜೂನ್ 10 ರಂದು ಬಿಡುಗಡೆಯಾಗಲಿದೆ Motorola Edge 60!
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ ಮೊಟೊರೋಲಾದ ಹೊಸ Motorola Edge 60 ಸ್ಮಾರ್ಟ್ಫೋನಿನ ಬಿಡುಗಡೆ ದಿನಾಂಕವು ಪ್ರಕಟವಾಗಿದೆ. ಬಹುನಿರೀಕ್ಷಿತ Motorola Edge 60 ಸ್ಮಾರ್ಟ್ಫೋನ್ ದೇಶದಲ್ಲಿ ಇದೇ ಜೂನ್ 10 ರಂದು ಅನಾವರಣಗೊಳ್ಳಲಿದೆ ಎಂಬುದನ್ನು ಕಂಪೆನಿಯು ಖಚಿತಪಡಿಸಿದ್ದು, ಈ ಹೊಸ ಫೋನ್ ದೇಶದಲ್ಲಿ ಪ್ಯಾಂಟೋನ್ ಜಿಬ್ರಾಲ್ಟರ್ ಸೀ ಮತ್ತು ಪ್ಯಾಂಟೋನ್ ಶ್ಯಾಮ್ರಾಕ್ ಎಂಬ ಎರಡು ಬಣ್ಣಗಳಲ್ಲಿ ಮತ್ತು 12GB RAM ಮತ್ತು 256GB ಶೇಖರಣಾ ಸಾಮರ್ಥ್ಯದ ಒಂದೇ ಮಾದರಿಯಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ. ಜೊತೆಗೆ ದೇಶದಲ್ಲಿ ಬಿಡುಗಡೆಯಾಗುತ್ತಿರುವ Motorola Edge 60 ಸ್ಮಾರ್ಟ್ಫೋನಿನ ಪ್ರಮುಖ ಫೀಚರ್ಸ್ ಯಾವುವು ಎಂಬ ಪೂರ್ಣ ಮಾಹಿತಿಯನ್ನು ಸಹ ಪ್ರಕಟಿಸಲಾಗಿದೆ.
ಮೊಟೊರೋಲಾ ಕಂಪನಿಯ ಭಾರತೀಯ ವೆಬ್ಸೈಟ್ನಲ್ಲಿರುವ ಬ್ಯಾನರ್ ಮೂಲಕ ಈ ಮಾಹಿತಿಗಳು ಬಹಿರಂಗಗೊಂಡಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ Motorola Edge 60 ಮಾದರಿಯು ಜಾಗತಿಕ ಆವೃತ್ತಿಗಿಂತ ಭಿನ್ನವಾದ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗುತ್ತಿದೆ. ಭಾರತೀಯ ರೂಪಾಂತರವು ಹೆಚ್ಚು ಶಕ್ತಿಶಾಲಿ MediaTek Dimensity 7400 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಜಾಗತಿಕವಾಗಿ ಬಿಡುಗಡೆಯಾದ Motorola Edge 60 MediaTek Dimensity 7300 SoC ಅನ್ನು ಹೊಂದಿತ್ತು. ಈ ದೊಡ್ಡ ಬದಲಾವಣೆಯು ಭಾರತೀಯ ಬಳಕೆದಾರರಿಗೆ Motorola Edge 60 ಸ್ಮಾರ್ಟ್ಫೋನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ನಿರೀಕ್ಷೆಯಿದೆ. ಇಷ್ಟೆ ಅಲ್ಲದೇ, ಬ್ಯಾಟರಿ ವಿಭಾಗದಲ್ಲಿಯೂ ಸಹ ಫೋನ್ ಅಪ್ಗ್ರೇಟ್ ಆಗಿದೆ.
ಭಾರತೀಯ ರೂಪಾಂತರದ Motorola Edge 60 ಸ್ಮಾರ್ಟ್ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 68W ಟರ್ಬೊಪವರ್ ವೇಗದ ಚಾರ್ಜಿಂಗ್ಗೆ ಬೆಂಬಲ ನೀಡುತ್ತದೆ. ಜಾಗತಿಕ ರೂಪಾಂತರದಲ್ಲಿ ಕೇವಲ 5,200mAh ಬ್ಯಾಟರಿ ಇತ್ತು ಎಂಬುದನ್ನು ನಾವು ಗಮನಿಸಬಹುದು. ಇನ್ನು ಡಿಸ್ಪ್ಲೇ ವಿಭಾಗದಲ್ಲಿ, ಈ Motorola Edge 60 ಸ್ಮಾರ್ಟ್ಫೋನ್ 6.67-ಇಂಚಿನ 1.5K (1,220 x 2,712 ಪಿಕ್ಸೆಲ್ಗಳು) pOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 4,500 nits ಗರಿಷ್ಠ ಬ್ರೈಟ್ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಇದು ಬಳಕೆದಾರರಿಗೆ ಉತ್ತಮ ದೃಶ್ಯ ಅನುಭವವನ್ನು ಒದಗಿಸುತ್ತದೆ ಎಂದು ಮೊಟೊರೊಲಾ ಕಂಪೆನಿಯು ಭರವಸೆಯನ್ನು ನೀಡಿದೆ.

ಕ್ಯಾಮೆರಾದ ವಿಭಾಗದಲ್ಲಿ, Motorola Edge 60 ಸ್ಮಾರ್ಟ್ಫೋನ್ ಪ್ರಭಾವಶಾಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ Sony LYTIA 700C ಸೆನ್ಸಾರ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ವೈಶಿಷ್ಟ್ಯಗಳು ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಜೊತೆಗೆ , ಇದು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟೀರಿಯೊ ಸ್ಪೀಕರ್ಗಳನ್ನು ಒಳಗೊಂಡಿದ್ದು, ಉತ್ತಮ ಆಡಿಯೊ ಅನುಭವವನ್ನು ನೀಡುವುದಾಗಿ ಕಂಪೆನಿ ತಿಳಿಸಿದೆ.
ಇನ್ನುಳಿದಂತೆ, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ಪ್ರಮಾಣೀಕರಣ ಮತ್ತು Android 15-ಆಧಾರಿತ Hello UI ಸಾಫ್ಟ್ವೇರ್ ಅನ್ನು ಖಚಿತಪಡಿಸಲಾಗಿದೆ. ಪ್ರಸ್ತುತ ಇಷ್ಟು ಮಾಹಿತಿಯನ್ನು ಮೊಟೊರೊಲಾ ಕಂಪೆನಿಯು ಖಚಿತಪಡಿಸಿದ್ದು, Motorola Edge 60 ಭಾರತೀಯ ಮಾರುಕಟ್ಟೆಗೆ ಬಲವಾದ ವಿಶೇಷತೆಗಳೊಂದಿಗೆ ಪ್ರವೇಶಿಸುತ್ತಿದೆ ಎಂಬುದನ್ನು ನಾವು ತಿಳಿಯಬಹುದು. ಜೂನ್ 10 ರ ಬಿಡುಗಡೆ ದಿನಾಂಕವು ಈಗಾಗಲೇ ದೃಢಪಟ್ಟಿರುವುದರಿಂದ, ಮೊಟೊರೊಲಾ ಅಭಿಮಾನಿಗಳು ಈ ಹೊಸ ಫೋನ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ನೀವು ಕೂಡ Motorola Edge 60 ಸ್ಮಾರ್ಟ್ಫೋನ್ ಬಿಡುಗಡೆಗೆ ಕಾಯುತ್ತಿದ್ದೀರಾ? ನೀವು ಈ ಸ್ಮಾರ್ಟ್ಫೋನಿನಲ್ಲಿ ಎದುರುನೋಡುತ್ತಿರುವ ಪ್ರಮುಖ ಫೀಚರ್ ಯಾವುದು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications