ಅ.25 ರಂದು ಒಂದೇ ವೇದಿಕೆಯಲ್ಲಿ ಏರ್‌ಟೆಲ್ ಮತ್ತು ಜಿಯೋ ಮಾಲಿಕರು!!
ಭಾರತದ ಟೆಲಿಕಾಂ ಪ್ರಪಂಚದಲ್ಲಿ ದರಸಮರ ಯುದ್ಧ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಏರ್‌ಟೆಲ್ ಹಾಗೂ ಜಿಯೋ ಕಂಪೆನಿಗಳ ಮಾಲಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕ್ಟೋಬರ್ 25ರಿಂದ 27ರವರೆಗೆ ನಡೆಯುವ 'ಭಾರತೀಯ ಮೊಬೈಲ್ ಸಮ್ಮೇಳನ'ದಲ್ಲಿ ಮುಖೇಶ್ ಅಂಬಾನಿ ಹಾಗೂ ಸುನಿಲ್ ಮಿತ್ತಲ್ ಒಟ್ಟಿಗೆ ಸೇರಲಿದ್ದಾರೆ.
ಅ.25 ರಂದು ನಡೆಯುವ 'ಭಾರತೀಯ ಮೊಬೈಲ್ ಸಮ್ಮೇಳನ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಏರ್‌ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್ ಹಾಗೂ ಭಾರತೀಯ ವೊಡಾಫೋನ್ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಆಯೋಜಕ, ಸಿಒಎಐ ನಿರ್ದೇಶಕ ರಾಜನ್ ಎಸ್. ಮಾಥ್ಯೂಸ್ ತಿಳಿಸಿದ್ದಾರೆ.

3 ದಿನಗಳ ಕಾಲ ನಡೆಯುವ ಭಾರತೀಯ ಮೊಬೈಲ್ ಸಮ್ಮೇಳನದಲ್ಲಿ ಟೆಲಿಕಾಂ ಕ್ಷೇತ್ರದ ವಿವಿಧ ಕಂಪನಿಗಳ ಮುಖ್ಯಸ್ಥರು, ಪರಿಣಿತ ತಂತ್ರಜ್ಞರು, ಮಾರುಕಟ್ಟೆಯ ಮುಖ್ಯಸ್ಥರು ಸಹ ಆಗಮಿಸಿ ಉದ್ಯಮಕ್ಕೆ ಸಂಬಂಧಿಸಿದ್ದ ವಿಷಯಗಳು ಚರ್ಚಿಸಿ ಕೆಲವು ಪ್ರಸ್ತಾವನೆಗಳನ್ನು ಮುಂದಿಡಲಿದ್ದಾರೆ. ದೂರಸಂಪರ್ಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವ ನಿರೀಕ್ಷೆ ಇದೆ.
ಭಾರತೀಯ ಮೊಬೈಲ್ ಸಮ್ಮೇಳನದಲ್ಲಿ ಬಹುಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ ಕುರಿತು ಚರ್ಚೆ ನಡೆಯಲಿದ್ದು, ಬಿಐಎಂಎಸ್ಟಿಇಸಿ(ಭಾರತ, ಬಾಂಗ್ಲಾ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ ಸದಸ್ಯ ರಾಷ್ಟ್ರಗಳು) ಸೇರಿದಂತೆ, ಅಮೆರಿಕ, ಕೆನಡ, ಇಂಗ್ಲೆಂಡ್ ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ 300 ಪ್ರದರ್ಶಕರು, 2,500 ಪ್ರತಿನಿಧಿಗಳು ಮತ್ತು 10,000 ಸಂದರ್ಶಕರು ಭೇಟಿ ನೀಡಲಿದ್ದಾರೆ. 250 ಸ್ಟಾರ್ಟ್ಅಪ್ಗಳನ್ನು ಗುರುತಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಕಾರ್ಯನಿರ್ವಹಿಸಿ ಉತ್ತಮ ಸ್ಟಾರ್ಟ್ಅಪ್ಗಳಿಗೆ ಆರ್ಥಿಕ ನಿಧಿ ಒದಗಿಸಲಾಗುವುದು. ಇದಕ್ಕಾಗಿ ಸ್ಯಾಮ್ಸಂಗ್, ಹುವಾವೇ ಮತ್ತು ನೋಕಿಯಾ ಕಂಪನಿಗಳು ಕೈಜೋಡಿಸಿವೆ.


Click it and Unblock the Notifications








