ಹೀಗೂ ಕೂಡ ವಂಚನೆ ಮಾಡುವವರಿದ್ದಾರೆ ಎಚ್ಚರಿಕೆ.. ಕೇಳಿದ್ರೆ ದಂಗಾಗ್ತೀರಾ!
ಆನ್‌ಲೈನ್‌ನಲ್ಲಿ ಸ್ಕ್ಯಾಮರ್‌ಗಳು ಹೇಗೆಲ್ಲಾ ವಂಚನೆ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಇಂಬುಕೊಡುವಂತೆ ಪ್ರತಿನಿತ್ಯವೂ ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅದರಂತೆ ಇದೀಗ ಮುಂಬೈನಲ್ಲಿ ಮತ್ತೊಂದು ಆನ್‌ಲೈನ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದ ವಿಚಾರ ಕೇಳಿದ್ರೆ ನೀವು ಕೂಡ ದಂಗಾಗೋದು ಗ್ಯಾರಂಟಿ.
ಹೌದು, ಮುಂಬೈನಲ್ಲಿ ಹಾಲಿಡೇ ವಿಲ್ಲಾಗಳು ಮತ್ತು ಬಂಗಲೆಗಳನ್ನು ಬುಕ್ ಮಾಡಿಕೊಂಡು ಪಾರ್ಟಿ ಮಾಡುವ ಮಂದಿ ಇದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡಿರುವ ವಂಚಕನೊಬ್ಬ ಆನ್‌ಲೈನ್‌ನಲ್ಲಿ ಹಾಲಿಡೇ ವಿಲ್ಲಾ ಬುಕ್ ಮಾಡುವ ಜನರಿಗೆ ವಂಚನೆ ಮಾಡಿದ್ದಾನೆ. ಈತನ ವಯಸ್ಸು ಕೇವಲ 23 ವರ್ಷ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಇನ್ನುಳಿದಂತೆ ಈ ವಂಚಕನಿಂದ ಮೋಸ ಹೋಗಿದ್ದವರು ಕಳೆದುಕೊಂಡಿದ್ದು ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ನಲ್ಲಿ ಹಾಲಿಡೇ ವಿಲ್ಲಾ ಬುಕ್ ಮಾಡುವ ನೆಪದಲ್ಲಿ ಇಲ್ಲಿಯವರೆಗೆ ಈತ 20 ಬಾರಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಅದರಲ್ಲೂ ಐಷಾರಾಮಿ ವಿಲ್ಲಾಗಳು ಮತ್ತು ಬಂಗಲೆಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವವರೇ ಈತನ ಟಾರ್ಗೆಟ್ ಆಗಿದ್ದರು ಎಂದು ವರದಿಯಾಗಿದೆ. ಆದರೆ ಇಲ್ಲಿಯ ತನಕ ಸಿಕ್ಕಿ ಬೀಳದಿದ್ದ ಈ ವಂಚಕ ಇದೀಗ ಪೊಲೀಸರ ವಶವಾಗಿದ್ದಾನೆ. ಅದು ಕೂಡ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ (ಬಿಕೆಸಿ) ಕಂಪನಿಯೊಂದರಲ್ಲಿ ಕೆಲಸ ಮಾಡುವವರು ನೀಡಿದ ದೂರಿನ ಮೇರೆಗೆ ಅನ್ನೊದು ಇಂಟ್ರಸ್ಟಿಂಗ್ ವಿಚಾರ.
ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ (ಬಿಕೆಸಿ) ಕಂಪನಿಯೊಂದರಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು ಅಲಿಬಾಗ್‌ನಲ್ಲಿ ವಿಲ್ಲಾವನ್ನು ಕಾಯ್ದಿರಿಸಲು ಪ್ರಯತ್ನಿಸಿದ್ದಾಳೆ. ಇದಕ್ಕಾಗಿ 'vistarastays.com' ಎಂಬ ವೆಬ್‌ಸೈಟ್ ಅನ್ನು ತೆರೆದಿದ್ದಾಳೆ. ಈ ವೆಬ್‌ಸೈಟ್‌ನಲ್ಲಿ ವಿಲ್ಲಾ ಬುಕ್ ಮಾಡಲು ಮುಂದಾದಾಗ ವಂಚಕ ಆಕೆಯೊಂದಿಗೆ ಸಂಪರ್ಕ ಸಾಧಿಸಿದ್ದಾನೆ. ಅಲ್ಲದೆ ಆಕೆಗೆ ವಿಲ್ಲಾವನ್ನು ಬುಕ್ ಮಾಡಲು 90,000ರೂ ಪಾವತಿಸುವಂತೆ ಹೇಳಿದ್ದಾನೆ. ಆದರೆ ಆಕೆ ಹಾಲಿಡೇ ಸಮಯದಲ್ಲಿ ವಿಲ್ಲಾಗೆ ಹೋಗಲು ಪ್ರಯತ್ನಿಸಿದಾಗ ಆಕೆಯ ಹೆಸರಿನಲ್ಲಿ ವಿಲ್ಲಾ ಬುಕ್ ಆಗದಿರುವುದು ಕಂಡು ಬಂದಿದೆ. ಆಗ ಆಕೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಕೂಡಲೇ ಎಚ್ಚತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇನ್ನು ವಂಚಕನನ್ನು ಪತ್ತೆ ಹಚ್ಚುವುದಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ ಎಂದು ಪ್ರಭಾರಿ ಪೊಲೀಸ್ ಅಧಿಕಾರಿ, ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಗರಾದ್ ಹೇಳಿದ್ದಾರೆ. ಜನರನ್ನು ಮರುಳು ಮಾಡಲು ನಕಲಿ ವೆಬ್‌ಸೈಟ್ ಮೂಲಕ ವಂಚಿಸುತ್ತಿದ್ದ ಅನ್ನೋದು ತಿಳಿದುಬಂದಿದೆ. ಅಷ್ಟೇ ಅಲ್ಲ ಇದೇ ಮಾದರಿಯಲ್ಲಿ ಸುಮಾರು 20 ಬಾರಿ ವಿವಿಧ ಜನರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ವಿಲ್ಲಾ ಬುಕ್ ಮಾಡುವಾಗ ಎಚ್ಚರಿಕೆ ವಹಿಸುವುದು ಹೇಗೆ?
ನೀವು ಯಾವುದೇ ವಸತಿಗಳನ್ನು ಕಾಯ್ದಿರಿಸುವಾಗ ಅಥವಾ ಖರೀದಿಗಳನ್ನು ಮಾಡುವಾಗ ಪ್ರಸಿದ್ಧ ಮತ್ತು ಪ್ರತಿಷ್ಠಿತ ವೆಬ್‌ಸೈಟ್‌ಗಳನ್ನು ಬಳಸುವುದು ಸೂಕ್ತ. ನಿಮಗೆ ವಿಶ್ವಾಸಾರ್ಹವಿಲ್ಲದ ವೆಬ್‌ಸೈಟ್‌ಗಳು ಮತ್ತು ಇಮೇಲ್‌ಗಳ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ. ಇನ್ನು ನೀವು ತೆರೆಯುವ ವೆಬ್‌ಸೈಟ್‌ನ URL ನಲ್ಲಿ "https://" ಮತ್ತು ಅಡ್ರೆಸ್ ಬಾರ್‌ನಲ್ಲಿ ಪ್ಯಾಡ್‌ಲಾಕ್ ಚಿಹ್ನೆ ಇದೆಯಾ ಅನ್ನೊದನ್ನ ಗಮನಿಸಿ. ಈ ವಿವರಗಳು ಕಾಣಿಸದಿದ್ದರೆ ಅದು ನಕಲಿ ವೆಬ್‌ಸೈಟ್ ಅನ್ನೊದನ್ನ ತಿಳಿಯಿರಿ.
ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಭಾರತ ಸರ್ಕಾರವು ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಪರಿಚಯಸಿದೆ. ನಿಮಗೆ ಆನ್‌ಲೈನ್‌ನಲ್ಲಿ ಮೋಸ ಆಗಿದ್ದರೆ ಕೂಡಲೇ ಇದರಲ್ಲಿ ದೂರು ದಾಖಲಿಸಬಹುದಾಗಿದೆ. ಇನ್ನು ನೀವು ಸೈಬರ್ ಹ್ಯಾಕರ್‌ಗಳಿಂದ ವಂಚನೆಗೆ ಒಳಗಾಗಿ ದೂರು ದಾಖಲಿಸಬೇಕಾದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಬಹುದು ಅಥವಾ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ಗೆ ಭೇಟಿ ನೀಡಬಹುದು. ನೀವು ವಂಚನೆಗೆ ಒಳಗಾದ 24 ಗಂಟೆಗಳ ಒಳಗೆ ವರದಿ ಮಾಡಿದರೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಸಾಧ್ಯವಾಗಲಿದೆ. ಆದರಿಂದ ನೀವು ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ವಂಚನೆ ನಡೆದ ತಕ್ಷಣವೇ ರಿಪೋರ್ಟ್ ಮಾಡುವುದು ಉತ್ತಮವಾಗಿದೆ.


Click it and Unblock the Notifications








