ಇದೇ 16ರಿಂದ ಆರ್‌ಬಿಐನಿಂದ ಹೊಸ ನಿಯಮ..! ಆನ್‌ಲೈನ್ ವರ್ಗಾವಣೆಯಿಲ್ಲದ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಷ್ಕ್ರಿಯ
ಮಾರ್ಚ್ 16ರಿಂದ ಆರ್‌ಬಿಐನ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಬಹುದೊಡ್ಡ ಪ್ರಭಾವ ಬೀರಲಿದೆ. ಇದುವರೆಗೂ ಆನ್‌ಲೈನ್ ವ್ಯವಹಾರಕ್ಕಾಗಿ ಒಂದು ಬಾರಿಯು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸದಿದ್ದರೆ ಸ್ವಯಂಚಾಲಿತಾಗಿ ಕಾರ್ಡ್‌ಗಳು ಸ್ಥಗಿತಗೊಳ್ಳಲಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜನವರಿ 15ರ ಸುತ್ತೋಲೆಯಲ್ಲಿ ತಿಳಿಸಿದಂತೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಅನುಕೂಲತೆಗಳನ್ನು ಹೆಚ್ಚು ಮಾಡಲು ಅನೇಕ ಕ್ರಮಗಳನ್ನು ಆರ್‌ಬಿಐ ಕೈಗೊಳ್ಳುತ್ತಿದ್ದು, ಆ ಕ್ರಮಗಳಲ್ಲಿ ಇದು ಕೂಡ ಒಂದಾಗಿದೆ.

ಕಾರ್ಡ್ ವಿತರಣೆ, ಮರುಹಂಚಿಕೆ ಸಮಯದಲ್ಲಿ ಭಾರತದಲ್ಲಿನ ಎಟಿಎಂ ಮತ್ತು ಪಿಒಎಸ್ ಟರ್ಮಿನಲ್‌ಗಳಲ್ಲಿ ದೇಶೀಯ ಕಾರ್ಡ್ ವಹಿವಾಟುಗಳನ್ನು ಮಾತ್ರ ಅನುಮತಿಸುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದೆ. ಅಂತರರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್ ವಹಿವಾಟುಗಳು, ಕಾರ್ಡ್-ಇಲ್ಲದ ವ್ಯವಹಾರಗಳು ಮತ್ತು ಸಂಪರ್ಕವಿಲ್ಲದ ವಹಿವಾಟುಗಳಿಗಾಗಿ ಗ್ರಾಹಕರು ತಮ್ಮ ಕಾರ್ಡ್‌ನಲ್ಲಿ ಪ್ರತ್ಯೇಕವಾಗಿ ಸೇವೆಗಳನ್ನು ಹೊಂದಿಸಬೇಕಾಗುತ್ತದೆ.

ಈ ನಿಯಮಗಳು ಹೊಸ ಕಾರ್ಡ್‌ಗಳಿಗೆ ಮಾರ್ಚ್ 16, 2020 ರಿಂದ ಅನ್ವಯವಾಗುತ್ತವೆ. ಹಳೆಯ ಕಾರ್ಡ್‌ಗಳನ್ನು ಹೊಂದಿರುವವರು ಈ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಬಹುದು.

ಅಸ್ತಿತ್ವದಲ್ಲಿರುವ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಬೇಕಾ? ಬೇಡವಾ? ಎಂಬುವ ನಿರ್ಧಾರವನ್ನು ಬ್ಯಾಂಕ್‌ಗಳು ತಮ್ಮ ಗ್ರಹಿಕೆಯ ಮೇಲೆ ತೆಗೆದುಕೊಳ್ಳಬಹುದು. ಆನ್‌ಲೈನ್, ಅಂತರರಾಷ್ಟ್ರೀಯ, ಸಂಪರ್ಕವಿಲ್ಲದ ವಹಿವಾಟುಗಳಿಗೆ ಎಂದಿಗೂ ಬಳಸದ ಅಸ್ತಿತ್ವದಲ್ಲಿರುವ ಕಾರ್ಡ್‌ಗಳನ್ನು ಕಡ್ಡಾಯವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.

ಮೊಬೈಲ್ ಅಪ್ಲಿಕೇಶನ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂಗಳು,ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್)ನಂತಹ ಲಭ್ಯವಿರುವ ಎಲ್ಲಾ ಚಾನಲ್‌ಗಳ ಮೂಲಕ ಬಳಕೆದಾರರು ವಹಿವಾಟು ಮಿತಿಗಳನ್ನು ಆನ್ / ಆಫ್ ಮಾಡಲು ಅಥವಾ ಬದಲಾಯಿಸಲು 24x7 ಅನುಮತಿ ಹೊಂದಿರುತ್ತಾರೆ.

ಬ್ಯಾಂಕ್‌ಗಳು ಎಲ್ಲಾ ರೀತಿಯ ವಹಿವಾಟುಗಳಿಗೆ (ದೇಶೀಯ ಮತ್ತು ಅಂತರರಾಷ್ಟ್ರೀಯ, ಪಿಒಎಸ್, ಎಟಿಎಂಗಳು, ಆನ್‌ಲೈನ್ ವಹಿವಾಟುಗಳಲ್ಲಿ) ವಹಿವಾಟು ಮಿತಿಗಳನ್ನು ಆನ್ / ಆಫ್ ಮಾಡಲು ಮತ್ತು ಹೊಂದಿಸಲು ಅಥವಾ ಮಾರ್ಪಡಿಸುವ ಸೌಲಭ್ಯವನ್ನು ನೀಡಬೇಕು.

ಆದಾಗ್ಯೂ, ಪ್ರಿಪೇಯ್ಡ್ ಉಡುಗೊರೆ ಕಾರ್ಡ್‌ಗಳಿಗೆ ಮತ್ತು ಸಾಮೂಹಿಕ ಸಾರಿಗೆ ವ್ಯವಸ್ಥೆಗಳಲ್ಲಿ ಬಳಸುವ ಕಾರ್ಡ್‌ಗಳಿಗೆ ನಿಬಂಧನೆಗಳು ಕಡ್ಡಾಯವಲ್ಲ. ಸೈಬರ್ ವಂಚನೆಗಳ ಹೆಚ್ಚುತ್ತಿರುವ ನಿದರ್ಶನಗಳ ನಡುವೆ ಈ ಸೂಚನೆಗಳು ಮಹತ್ವ ಪಡೆದುಕೊಳ್ಳುತ್ತವೆ.


Click it and Unblock the Notifications








