ಸೆಪ್ಟೆಂಬರ್ 15 ರಿಂದ UPI ನಲ್ಲಿ ಮಹತ್ವದ ಬದಲಾವಣೆ: ಹೆಚ್ಚಿದ ಮಿತಿಗಳು!
ಇದೇ ಸೆಪ್ಟೆಂಬರ್ 15, 2025 ರಿಂದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ವ್ಯವಹಾರಗಳ ಮಿತಿಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ರಾಷ್ಟ್ರೀಯ ಪಾವತಿ ನಿಗಮ (NPCI) ಜಾರಿಗೊಳಿಸಿರುವ ಈ ಹೊಸ ನಿಯಮಗಳು, ಹೆಚ್ಚಿನ ಮೌಲ್ಯದ ಡಿಜಿಟಲ್ ಪಾವತಿಗಳನ್ನು ಗ್ರಾಹಕರಿಗೆ ಮತ್ತು ವ್ಯಾಪಾರಸ್ಥರಿಗೆ ಇನ್ನಷ್ಟು ಸುಲಭ ಮತ್ತು ವೇಗಗೊಳಿಸುತ್ತವೆ. ಈ ಬದಲಾವಣೆಗಳು ಡಿಜಿಟಲ್ ಇಂಡಿಯಾ ಕನಸಿಗೆ ಇನ್ನಷ್ಟು ವೇಗ ನೀಡುವ ಭರವಸೆಯನ್ನು ತಂದಿವೆ. ಹಾಗಾದರೆ, ಸೆಪ್ಟೆಂಬರ್ 15, 2025 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಏನು ಬದಲಾಗುತ್ತಿದೆ?
ಹೊಸ ನಿಯಮಗಳ ಪ್ರಕಾರ, ಸೆಪ್ಟೆಂಬರ್ 15 ರಿಂದ ವಿಮೆ, ಬಂಡವಾಳ ಮಾರುಕಟ್ಟೆ ಹೂಡಿಕೆಗಳು (Capital market investments and insurance), ವರ್ಗಗಳಿಗೆ ಪಾವತಿ ಮಿತಿಯನ್ನು ರೂ. 2 ಲಕ್ಷದಿಂದ ರೂ. 5 ಲಕ್ಷಕ್ಕೆ ಏರಿಸಲಾಗಿದೆ. 24 ಗಂಟೆಗಳಲ್ಲಿ ಗರಿಷ್ಠ 10 ಲಕ್ಷ ರೂ. ಆಗಿದೆ. ಸರ್ಕಾರಿ ಇ-ಮಾರುಕಟ್ಟೆ ಮತ್ತು ತೆರಿಗೆ ಪಾವತಿಗಳ(Government e-marketplace and tax payments) ಮಿತಿಯನ್ನು ರೂ. 1 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಟ್ರಾವೆಲ್ ಬುಕ್ಕಿಂಗ್‌ನ ಪ್ರತಿ ವಹಿವಾಟಿಗೆ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಹಾಗೆಯೇ, ಇದೀಗ ಕ್ರೆಡಿಟ್ ಕಾರ್ಡ್ ಬಿಲ್ (Credit card bill payments) ಪಾವತಿಗಳನ್ನು ಒಂದೇ ಬಾರಿಗೆ ರೂ. 5 ಲಕ್ಷದವರೆಗೆ ಮಾಡಬಹುದು, ಮತ್ತು ದಿನಕ್ಕೆ ರೂ. 6 ಲಕ್ಷದ ಗರಿಷ್ಠ ಮಿತಿ ಇರುತ್ತದೆ. ಸಾಲ ಮತ್ತು EMI ಸಂಗ್ರಹಣೆಗಳಿಗೆ (Loan and EMI collections) ಪ್ರತಿ ವ್ಯವಹಾರಕ್ಕೆ ರೂ. 5 ಲಕ್ಷ ಮತ್ತು ದಿನಕ್ಕೆ ರೂ. 10 ಲಕ್ಷದ ಮಿತಿ ಇದೆ. ಟರ್ಮ್ ಡೆಪಾಸಿಟ್‌ಗೆ (ಡಿಜಿಟಲ್ ಆನ್‌ಬೋರ್ಡಿಂಗ್):ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಬದಲಾವಣೆಗಳು ಯುಪಿಐ ಅನ್ನು ದೊಡ್ಡ ಮೊತ್ತದ ಪಾವತಿಗಳಿಗೆ ಹೆಚ್ಚು ಸೂಕ್ತವನ್ನಾಗಿಸಿವೆ.

ಗ್ರಾಹಕರಿಗೆ ಲಾಭಗಳು
ಈ ಬದಲಾವಣೆಗಳು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ತರುತ್ತವೆ. ಮೊದಲು, ವಿಮೆ ಪ್ರೀಮಿಯಂ, ದೊಡ್ಡ ಹೂಡಿಕೆಗಳು, ಅಥವಾ ಪ್ರವಾಸ ಪ್ಯಾಕೇಜ್‌ಗಳಿಗೆ ದೊಡ್ಡ ಮೊತ್ತದ ಹಣ ಪಾವತಿಸಲು ಬೇರೆ ಪಾವತಿ ವಿಧಾನಗಳನ್ನು ಹುಡುಕಬೇಕಾಗಿಲ್ಲ. ಯುಪಿಐನ ಸರಳ ಮತ್ತು ಸುಭದ್ರ ವ್ಯವಸ್ಥೆಯಿಂದ ಈ ಎಲ್ಲಾ ಪಾವತಿಗಳನ್ನು ಸುಲಭವಾಗಿ ಮಾಡಬಹುದು. ಎರಡನೆಯದಾಗಿ, ಯುಪಿಐನ ಡಬಲ್-ಲೇಯರ್ ಭದ್ರತೆಯು ವಂಚನೆಗಳಿಂದ ರಕ್ಷಣೆ ನೀಡುತ್ತದೆ. ಮೂರನೆಯದಾಗಿ, ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಥವಾ ನೆಟ್ ಬ್ಯಾಂಕಿಂಗ್‌ನ ಪ್ರಕ್ರಿಯೆಗಳನ್ನು ಅನುಸರಿಸುವ ಅಗತ್ಯ ಇಲ್ಲದೇ ಸಮಯ ಉಳಿತಾಯವಾಗುತ್ತದೆ.
ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ
ಈ ಬದಲಾವಣೆಗಳು ಭಾರತದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ (SMEs) ವಿಶೇಷವಾಗಿ ಅನುಕೂಲಕರವಾಗಿವೆ. ಗ್ರಾಹಕರು ಹೆಚ್ಚಿನ ಮೊತ್ತದ ವಸ್ತುಗಳನ್ನು ಯುಪಿಐ ಮೂಲಕ ನೇರವಾಗಿ ಪಾವತಿಸಲು ಸಾಧ್ಯವಾಗುವುದರಿಂದ, ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ. ಉದಾಹರಣೆಗೆ, ಗ್ರಾಹಕರು ಆಭರಣ, ಎಲೆಕ್ಟ್ರಾನಿಕ್ಸ್ ಅಥವಾ ವಿಮೆ ಖರೀದಿಸುವಾಗ ಯುಪಿಐ ಬಳಸುವುದರಿಂದ ಹಣದ ಹರಿವು ವೇಗವಾಗುತ್ತದೆ. ಇನ್ನು, ಗ್ರಾಮೀಣ ಭಾಗಗಳಲ್ಲಿರುವ ಜನರಿಗೆ ಬ್ಯಾಂಕ್ ಶಾಖೆಗಳ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಹೆಚ್ಚಿದ ಮಿತಿಗಳಿಂದ ದೊಡ್ಡ ಮೊತ್ತದ ಪಾವತಿಗಳನ್ನು ಮೊಬೈಲ್‌ನಿಂದಲೇ ನಡೆಸಲು ಸಹಕಾರಿ.
ಒಟ್ಟಾರೆಯಾಗಿ, ಈ ಹೊಸ ಯುಪಿಐ ನಿಯಮಗಳು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತವೆ ಎಂದು ಹೇಳಲಾಗಿದೆ. ಇದರಿಂದ ಗ್ರಾಹಕರಿಗೂ, ವ್ಯಾಪಾರಸ್ಥರಿಗೂ ಹೆಚ್ಚಿನ ಸ್ವಾತಂತ್ರ್ಯ, ಭದ್ರತೆ, ಮತ್ತು ವೇಗ ದೊರೆಯಲಿದೆ. ಮುಂದಿನ ದಿನಗಳಲ್ಲಿ, ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳಿಗೂ ಯುಪಿಐ ಪ್ರಮುಖ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ. ಈ ಬದಲಾವಣೆಗಳು ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಕುರತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








