ಬೆಂಗಳೂರಿನಲ್ಲಿ ನಥಿಂಗ್ ಫ್ಲ್ಯಾಗ್‌ಶಿಪ್ ಸ್ಟೋರ್ ಉದ್ಘಾಟನೆ ದಿನಾಂಕ ಪ್ರಕಟ!
ಕಾರ್ಲ್ ಪೇ ನೇತೃತ್ವದ, ಯುಕೇ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ ನಥಿಂಗ್ (Nothing) ಕಂಪನಿಯು ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ತನ್ನ ಮೊದಲ ಫ್ಲ್ಯಾಗ್‌ಶಿಪ್ ಸ್ಟೋರ್ ಆರಂಭಿಸುವುದು ಈಗಾಗಲೇ ಖಚಿತವಾಗಿತ್ತು. ಇದೀಗ ಬೆಂಗಳೂರಿನಲ್ಲಿ ತನ್ನ ಮೊದಲ ಅಧಿಕೃತ ಫ್ಲ್ಯಾಗ್‌ಶಿಪ್ ಅನುಭವ ಕೇಂದ್ರವನ್ನು ಆರಂಭಿಸುವ ದಿನಾಂಕವನ್ನು ಪ್ರಕಟಿಸಿದೆ. ಭಾರತೀಯ ಮಾರುಕಟ್ಟೆಗೆ ಫ್ಲಾಗ್‌ಶಿಪ್‌ನ ಸ್ಪಷ್ಟ ಸಂದೇಶವನ್ನು ಹೊತ್ತು ಬರುತ್ತಿರುವ ನಥಿಂಗ್ ಕಂಪೆನಿಯ ಹೊಸ ಆರಂಭಕ್ಕೆ ಸಮಯ ನಿಗದಿಯಾಗಿದೆ.
ನಥಿಂಗ್ ಕಂಪೆನಿಯು ಇದೇ ಫೆಬ್ರವರಿ 14ರಂದು ಬೆಂಗಳೂರಿನಲ್ಲಿ ತನ್ನ ಮೊದಲ ಅಧಿಕೃತ ಫ್ಲ್ಯಾಗ್‌ಶಿಪ್ ಅನುಭವ ಕೇಂದ್ರವನ್ನು ಉದ್ಘಾಟಿಸಲಿದೆ. ಲಂಡನ್ ನಂತರ ಜಗತ್ತಿನಲ್ಲಿ ತೆರೆಯಲಾಗುತ್ತಿರುವ ಎರಡನೇ ಫ್ಲ್ಯಾಗ್‌ಶಿಪ್ ಸ್ಟೋರ್ ಇದಾಗಿದ್ದು, ಬೆಂಗಳೂರಿನ ಈ ಹೊಸ ಫ್ಲ್ಯಾಗ್‌ಶಿಪ್ ಸ್ಟೋರ್‌ನಲ್ಲಿ ಗ್ರಾಹಕರು ನಥಿಂಗ್‌ನ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ನೇರವಾಗಿ ಅನುಭವಿಸಬಹುದು ಎಂದು ಕಂಪೆನಿ ತಿಳಿಸಿದೆ. ಇದು ಭಾರತಕ್ಕೆ ನಥಿಂಗ್ ಕಂಪನಿ ನೀಡುತ್ತಿರುವ ಮುಖ್ಯ ಆದ್ಯತೆಯನ್ನು ತೋರಿಸುತ್ತದೆ.
ನಥಿಂಗ್ ತನ್ನ ವಿಶಿಷ್ಟ "ಡಿಸೈನ್ ಫಸ್ಟ್" ತತ್ವವನ್ನು ಬೆಂಗಳೂರಿನ ಈ ಫ್ಲ್ಯಾಗ್‌ಶಿಪ್ ಸ್ಟೋರ್ ಮೂಲಕ ಪ್ರದರ್ಶಿಸಲು ಉದ್ದೇಶಿಸಿದೆ ಎಂದು ವರದಿಗಳು ಹೇಳಿವೆ. ನಥಿಂಗ್ ಉತ್ಪನ್ನಗಳು ಹೇಗೆ ಪರಸ್ಪರ ಸಂಪರ್ಕ ಹೊಂದಿವೆ, ದಿನನಿತ್ಯದ ಜೀವನದಲ್ಲಿ ಅವು ಯಾವ ರೀತಿಯ ಅನುಭವ ನೀಡುತ್ತವೆ ಎಂಬುದನ್ನು ಗ್ರಾಹಕರು ಇಲ್ಲಿ ಸ್ವತಃ ಪರೀಕ್ಷಿಸಬಹುದು. ಈ ಅನುಭವಾತ್ಮಕ ವಾತಾವರಣವು ಖರೀದಿ ನಿರ್ಧಾರವನ್ನು ಸುಲಭಗೊಳಿಸುವುದರ ಜೊತೆಗೆ ನಥಿಂಗ್ ಬ್ರ್ಯಾಂಡ್ ಮೇಲೆ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಈ ನಥಿಂಗ್ ಫ್ಲ್ಯಾಗ್‌ಶಿಪ್ ಸ್ಟೋರ್ನಲ್ಲಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು, ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ (TWS), ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇತರೆ ಎಲ್ಲಾ ಸ್ಮಾರ್ಟ್ ಸಾಧನಗಳನ್ನು ಕೈಯಲ್ಲಿ ಹಿಡಿದು ಬಳಸುವ ಅವಕಾಶ ಇಲ್ಲಿ ಲಭ್ಯವಾಗಲಿದೆ. ಇದರಿಂದ ಆನ್‌ಲೈನ್ ಖರೀದಿಗೆ ಮುನ್ನ ಉತ್ಪನ್ನದ ವಿನ್ಯಾಸ, ಆರಾಮ ಮತ್ತು ನೈಜ ಬಳಕೆ ಅನುಭವವನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ಸಹಾಯವಾಗಲಿದೆ. ಫೆಬ್ರವರಿ 14ರಂದು ವ್ಯಾಲೆಂಟೀನ್ ಡೇ ಇರುವುದರಿಂದ ಅಂದು ಮೊದಲ ದಿನವೇ ಭರ್ಜರಿ ಅನುಭವಕ್ಕೆ ಕಾರಣವಾಗುವ ನಿರೀಕ್ಷೆ ಇದೆ.
ನಾವು ಈಗಾಗಲೇ ತಿಳಿದಿರುವಂತೆ, ಭಾರತದಲ್ಲಿ ನಥಿಂಗ್‌ನ ಹೂಡಿಕೆ ಮತ್ತು ಚಟುವಟಿಕೆಗಳು ಇತ್ತೀಚೆಗೆ ವೇಗ ಪಡೆದುಕೊಂಡಿವೆ. 2025ರ ಡಿಸೆಂಬರ್‌ನಲ್ಲಿ, ಕಂಪನಿಯ ಉಪಬ್ರ್ಯಾಂಡ್ ಆಗಿರುವ CMF ಅನ್ನು ಭಾರತದಲ್ಲಿ ಕಾನೂನಾತ್ಮಕವಾಗಿ ಸ್ವತಂತ್ರ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಇದರ ಜೊತೆಗೆ, CMF ತನ್ನ ಪ್ರಧಾನ ಕಚೇರಿಯನ್ನು ಭಾರತಕ್ಕೆ ಸ್ಥಳಾಂತರಿಸಿರುವುದು ದೇಶದ ಮೇಲೆ ಕಂಪನಿಯ ದೀರ್ಘಕಾಲೀನ ಯೋಜನೆಯನ್ನು ಸ್ಪಷ್ಟಪಡಿಸುತ್ತದೆ.
ಇದಕ್ಕೂ ಮುಂದುವರಿಯಾಗಿ, ನಥಿಂಗ್ ತನ್ನ ಪ್ರಮುಖ ಕಾರ್ಯಾಚರಣೆಗಳನ್ನು ಭಾರತಕ್ಕೆ ಕೇಂದ್ರೀಕರಿಸಿದೆ. ಸ್ಮಾರ್ಟ್‌ಫೋನ್ ಮತ್ತು ವೇರೇಬಲ್‌ಗಳ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಹಾಗೂ ಕಾರ್ಯಾಚರಣೆಗಳ ಬಹುಪಾಲು ಈಗ ಭಾರತದಲ್ಲೇ ನಡೆಯುತ್ತಿದೆ. ಇದು "ಮೇಕ್ ಇನ್ ಇಂಡಿಯಾ" ದೃಷ್ಟಿಕೋನಕ್ಕೂ ಪೂರಕವಾಗಿದ್ದು, ಸ್ಥಳೀಯ ಉದ್ಯೋಗ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ನಥಿಂಗ್‌ನ ಮೊದಲ ಫ್ಲ್ಯಾಗ್‌ಶಿಪ್ ಸ್ಟೋರ್ ಭಾರತೀಯ ಮತ್ತು ಕನ್ನಡಿಗ ಗ್ರಾಹಕರಿಗೆ ಹೊಸ ರೀತಿಯ ಟೆಕ್ ಅನುಭವವನ್ನು ನೀಡಲಿದೆ. ಜೊತೆಗೆ, ಭಾರತವನ್ನು ನಥಿಂಗ್‌ನ ಜಾಗತಿಕ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ರೂಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನೀವು ಕೂಡ ನಥಿಂಗ್ ಫ್ಲ್ಯಾಗ್‌ಶಿಪ್ ಸ್ಟೋರ್ ಬೇಟಿ ನೀಡಲು ಕಾರುರರಾಗಿದ್ದೀರಾ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








