ಕಾರ್ಲ್ ಪೀ ಭವಿಷ್ಯ ನುಡಿ: ಭವಿಷ್ಯದ ಸ್ಮಾರ್ಟ್‌ಫೋನ್ ಹೇಗಿರಲಿವೆ ಗೊತ್ತಾ?
ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಪ್ರಸ್ತುತದಂತೆ ಇರುವುದಿಲ್ಲ. ಇಂದು ಸ್ಮಾರ್ಟ್‌ಫೋನ್‌ಗಳಲ್ಲಿರುವ ಅಪ್ಲಿಕೇಶನ್‌ಗಳು ಮಾಯವಾಗುತ್ತವೆ ಮತ್ತು ಇದರ ಸ್ಥಾನವನ್ನು ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳು ತುಂಬುತ್ತವೆ ಎಂದು ಜನಪ್ರಿಯ ಟೆಕ್ ಬ್ರ್ಯಾಂಡ್ ನಥಿಂಗ್ (Nothing) ಕಂಪೆನಿಯ ಸಿಇಒ ಕಾರ್ಲ್ ಪೀ (Carl Pei) ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸ್ಮಾರ್ಟ್‌ಫೋನ್ ಬಳಕೆಯ ರೀತಿಯೇ ಶೀಘ್ರದಲ್ಲಿ ಸಂಪೂರ್ಣವಾಗಿ ಬದಲಾಗಬಹುದು ಎಂಬ ಚರ್ಚೆ ಮತ್ತೆ ತೀವ್ರವಾಗಿದ್ದು, ಕಾರ್ಲ್ ಪೀ ಇತ್ತೀಚೆಗೆ ನೀಡಿದ ಹೇಳಿಕೆಗಳು ಹೊಸ ದಿಕ್ಕನ್ನು ಸೂಚಿಸುತ್ತಿವೆ.
ಇತ್ತೀಚಿಗೆ (SXSW) ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಲ್ ಪೀ ಅವರು, ಇಂದಿನ ಸ್ಮಾರ್ಟ್‌ಫೋನ್ ಇಂಟರ್ಫೇಸ್ ಅನ್ನು "ಹಳೆಯ ಮಾದರಿ" ಎಂದು ವಿವರಿಸಿದ್ದಾರೆ. ಲಾಕ್ ಸ್ಕ್ರೀನ್, ಹೋಮ್ ಸ್ಕ್ರೀನ್, ಆಪ್ ಸ್ಟೋರ್ ಮತ್ತು ಪ್ರತ್ಯೇಕ ಆಪ್‌ಗಳ ಮೂಲಕ ಕೆಲಸ ಮಾಡುವ ವಿಧಾನವು ಸುಮಾರು 20 ವರ್ಷಗಳಿಂದ ಬಹುತೇಕ ಬದಲಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಲೇ ಇಂದಿನ ಫೋನ್ ಬಳಕೆ ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ನಿರ್ವಹಣಾತ್ಮಕ ಕೆಸದಂತಿದೆ ಎಂದು ಅವರು ಸೂಚಿಸಿದರು.
ಇಷ್ಟೇ ಅಲ್ಲದೆ, ಒಂದು ಉದಾಹರಣೆಯ ಮೂಲಕ ಅವರು ಈ ಸಮಸ್ಯೆಯನ್ನು ವಿವರಿಸಿ, ಒಂದು ಸಾಮಾನ್ಯ ಕಾರ್ಯವಾದ ಸ್ನೇಹಿತನೊಂದಿಗೆ ಕಾಫಿಗೆ ಹೋಗುವುದೇ ಹಲವಾರು ಹಂತಗಳನ್ನು ಒಳಗೊಂಡಿದೆ. ಮೊದಲು ಟೇಬಲ್ ಬುಕ್ ಮಾಡಲು ಒಂದು ಆಪ್, ನಂತರ ಮಾಹಿತಿ ಹಂಚಿಕೊಳ್ಳಲು ಮತ್ತೊಂದು ಆಪ್, ನಂತರ ಕ್ಯಾಲೆಂಡರ್‌ನಲ್ಲಿ ದಾಖಲು, ಕೊನೆಯಲ್ಲಿ ಪ್ರಯಾಣಕ್ಕಾಗಿ ಕ್ಯಾಬ್ ಬುಕ್ಕಿಂಗ್. ಈ ಎಲ್ಲ ಹಂತಗಳು ಬಳಕೆದಾರರಿಗೆ ಕಷ್ಟಕರವಾಗುತ್ತವೆ ಮತ್ತು ಅನುಭವವನ್ನು ಸಂಕೀರ್ಣಗೊಳಿಸುತ್ತವೆ ಎಂದು ಅವರು ಹೇಳಿದರು.

ಅಂದರೆ, ಸ್ಮಾರ್ಟ್‌ಫೋನ್‌ಗಳಿಗೆ ಅಪ್ಲಿಕೇಶನ್-ರಹಿತ ಅನುಭವದ ಬಗ್ಗೆ ಹೇಳಿದ್ದಾರೆ. ಇದಕ್ಕೆ ಪರ್ಯಾಯವಾಗಿ, AI ಏಜೆಂಟ್ ಆಧಾರಿತ ವ್ಯವಸ್ಥೆಯನ್ನು ಅವರು ಮುಂದಿಟ್ಟಿದ್ದಾರೆ. ಬಳಕೆದಾರರು ತಮ್ಮ ಅಗತ್ಯವನ್ನು ಒಂದೇ ಬಾರಿ ಹೇಳಿದರೆ, AI ಏಜೆಂಟ್ ಅದನ್ನು ಅರ್ಥಮಾಡಿಕೊಂಡು ಎಲ್ಲಾ ಹಂತಗಳನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸುತ್ತದೆ. ಉದಾಹರಣೆಗೆ, ಕಾಫಿ ಮೀಟಿಂಗ್‌ಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು AI ನಿರ್ವಹಿಸಿ, ಬಳಕೆದಾರರು ಕೇವಲ ಅಂತಿಮ ಫಲಿತಾಂಶವನ್ನು ಅನುಭವಿಸುವಂತಾಗುತ್ತದೆ ಎಂದಿದ್ದಾರೆ.
AI ತಂತ್ರಜ್ಞಾನ ಮುಂದುವರಿದಂತೆ, ಇದು ಇನ್ನಷ್ಟು ಗಂಭೀರ ಹಾಗೂ ವೈಯಕ್ತಿಕ ಕಾರ್ಯಗಳನ್ನು ಕೂಡ ನಿರ್ವಹಿಸಬಹುದು. ಆರೋಗ್ಯ ಕಾಳಜಿ, ತೂಕ ಇಳಿಕೆ, ದಿನನಿತ್ಯದ ಯೋಜನೆಗಳು ಸೇರಿದಂತೆ ಹಲವು ವಿಷಯಗಳಲ್ಲಿ AI ಏಜೆಂಟ್‌ಗಳು ಸಹಾಯ ಮಾಡಬಹುದು. ಕಾಲಕ್ರಮೇಣ, ಈ ವ್ಯವಸ್ಥೆಗಳು ಬಳಕೆದಾರರ ಅಭಿರುಚಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಸೂಕ್ತ ಸಲಹೆಗಳನ್ನು ನೀಡುವ ಮಟ್ಟಕ್ಕೆ ಬೆಳೆಯುತ್ತವೆ ಎಂಬ ವಿಶ್ವಾಸವನ್ನು ಕಾರ್ಲ್ ಪೀ ಅವರು ವ್ಯಕ್ತಪಡಿಸಿದ್ದಾರೆ. ಇದು ಏಜೆಂಟ್ ಇಂಟರ್‌ಫೇಸ್‌ಗಳ ಏರಿಕೆಯೊಂದಿಗೆ, ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ.
ಈ ಬದಲಾವಣೆಯ ಹಿನ್ನೆಲೆಯಲ್ಲಿ, ಆಪ್ ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಅವರು ಮಹತ್ವದ ಸೂಚನೆ ನೀಡಿದ್ದಾರೆ. AI ಏಜೆಂಟ್‌ಗಳು ಸೇವೆಗಳನ್ನು ನೇರವಾಗಿ ಬಳಸಲು ಸಾಧ್ಯವಾಗಬೇಕಾದರೆ, ಕಂಪನಿಗಳು ತಮ್ಮ APIಗಳು ಮತ್ತು ಸಂಪರ್ಕ ವ್ಯವಸ್ಥೆಗಳನ್ನು ತೆರೆಯಬೇಕು. ಸಂಸ್ಥೆಯ MCP (Model Context Protocol) ಮಾದರಿಯಂತಹ ತಂತ್ರಜ್ಞಾನಗಳು ಭವಿಷ್ಯದಲ್ಲಿ ಮುಖ್ಯ ಪಾತ್ರವಹಿಸಬಹುದು ಎಂದು ಅವರು ಸೂಚಿಸಿದ್ದಾರೆ. ಕೊನೆಯಲ್ಲಿ, "ಮಾನವರಿಗಾಗಿ ವಿನ್ಯಾಸಗೊಳಿಸಿದ ಇಂಟರ್ಫೇಸ್‌ಗಿಂತ, AI ಏಜೆಂಟ್‌ಗಳಿಗೆ ಅನುಕೂಲವಾಗುವ ಇಂಟರ್ಫೇಸ್‌ಗಳೇ ಭವಿಷ್ಯ" ಎಂದು ಕಾರ್ಲ್ ಪೇ ಹೇಳಿದ್ದಾರೆ.
ಒಟ್ಟಿನಲ್ಲಿ, ಆಪ್‌ಗಳ ಆಧಾರಿತ ವ್ಯವಸ್ಥೆಯಿಂದ AI ಏಜೆಂಟ್‌ಗಳ ಆಧಾರಿತ ವ್ಯವಸ್ಥೆಗೆ ಸಾಗುವ ಈ ಪರಿವರ್ತನೆ ಸ್ಮಾರ್ಟ್‌ಫೋನ್ ಬಳಕೆಯ ಅನುಭವವನ್ನು ಮೂಲಭೂತವಾಗಿ ಬದಲಾಯಿಸುವ ಸಾಧ್ಯತೆ ಇದೆ. ಈ "ಆಪ್-ರಹಿತ" ಭವಿಷ್ಯವನ್ನು ಬದಲಾಯಿಸುವ ಜಗತ್ತೂ ಕೂಡ ಕಾತುರದಿಂದ ಓಡುತ್ತಿದೆ.


Click it and Unblock the Notifications








