Nothing Phone 3: ನಕಲಿ ಫೋಟೋಗಳ ವಿವಾದ!..ಕಂಪೆನಿ ಹೇಳಿದ್ದೇನು?..ಪೂರ್ಣ ಮಾಹಿತಿ!
ಮೊಬೈಲ್ ಮಾರುಕಟ್ಟೆಯ ಕುರಿತು ಹೆಚ್ಚು ಮಾಹಿತಿ ಒದಗಿಸಲು ಇಷ್ಟಪಡುವ ನಮಗೆ, ಇಲ್ಲಿ ವಿವಾದಗಳನ್ನು ಸುದ್ದಿ ಮಾಡುವ ಆಸಕ್ತಿ ಇಲ್ಲ. ಆದರೆ, ಕೆಲವೊಮ್ಮೆ ಇಂತಹ ಸುದ್ದಿಗಳನ್ನು ಮಾಡಲೇಬೇಕಾಗುತ್ತದೆ. ಇದೀಗ ಇಂತಹ ಸುದ್ದಿಗೆ ಒಳಗಾಗಿರುವುದು ಹಲವಾರು ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಥಿಂಗ್ ಫೋನ್ 3!. ಹೌದು, ನ್ಯೂಜಿಲೆಂಡ್‌ನಲ್ಲಿನ ಚಿಲ್ಲರೆ ಮಾರಾಟದ ಅಂಗಡಿಯೊಂದರಲ್ಲಿ ಈ ಫೋನ್‌ನ ಪ್ರದರ್ಶನ ಘಟಕದಿಂದ ತೆಗೆದ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮತ್ತು ಇದು ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ವಿವಾದಕ್ಕೆ ಒಳಗಾಗಿದೆ.!
ಹೌದು, ನಥಿಂಗ್ ಫೋನ್ 3 ಸಾಧನದಿಂದ ತೆಗೆದ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದರಲ್ಲಿ ಫೋನ್‌ನ ಕ್ಯಾಮೆರಾದಿಂದಲೇ ತೆಗೆದ ಚಿತ್ರಗಳ ಮಾದರಿಗಳನ್ನು ತೋರಿಸಲಾಗಿದೆ. ಆದರೆ, ಈ ಚಿತ್ರಗಳು ನಥಿಂಗ್ ಫೋನ್‌ನಿಂದ ತೆಗೆದ ಚಿತ್ರಗಳಲ್ಲ, ಬದಲಾಗಿ ಅವುಗಳನ್ನು ವಿವಿಧ ಸ್ಟಾಕ್ ಫೋಟೋ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾಗಿದೆ ಎಂಬುದು ನಂತರ ತಿಳಿದುಬಂದಿದೆ. ಈ ಘಟನೆಯನ್ನು ನಥಿಂಗ್ ಕಂಪನಿಯ ಸಹ-ಸಂಸ್ಥಾಪಕರು ಒಪ್ಪಿಕೊಂಡಿದ್ದಾರೆ. ಮತ್ತು ಇದನ್ನು ಇದು "ದುರದೃಷ್ಟಕರ ಮೇಲ್ವಿಚಾರಣೆ" ಎಂದು ಹೇಳಿದ್ದಾರೆ.
ನಥಿಂಗ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಭಾರತದ ಮುಖ್ಯಸ್ಥರಾದ ಅಕಿಸ್ ಇವಾಂಜೆಲಿಡಿಸ್ ಅವರು, X (ಹಿಂದಿನ ಟ್ವಿಟರ್) ನಲ್ಲಿ ಈ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ನಥಿಂಗ್ ಫೋನ್ 3 ಗಾಗಿ ಪ್ರದರ್ಶನ ಘಟಕಗಳನ್ನು ಫೋನ್ ಬಿಡುಗಡೆಯಾಗುವ ಸುಮಾರು ನಾಲ್ಕು ತಿಂಗಳ ಮೊದಲೇ ಸಿದ್ಧಪಡಿಸಲಾಗಿತ್ತು. ಆ ಸಮಯದಲ್ಲಿ, ಫೋನ್ ಸಾಮೂಹಿಕ ಉತ್ಪಾದನೆಯ ಹಂತದಲ್ಲಿದ್ದ ಕಾರಣ, ತಾತ್ಕಾಲಿಕವಾಗಿ ಸ್ಟಾಕ್ ಚಿತ್ರಗಳನ್ನು "ಪ್ಲೇಸ್‌ಹೋಲ್ಡರ್" ಗಳಾಗಿ ಬಳಸಲಾಗಿತ್ತು. ನಂತರ ಫೋನ್ ಉತ್ಪಾದನೆಗೆ ಬಂದಾಗ, ಈ ಚಿತ್ರಗಳನ್ನು ಫೋನ್‌ನ ಕ್ಯಾಮರಾ ಬಳಸಿ ತೆಗೆದ ನಿಜವಾದ ಚಿತ್ರಗಳೊಂದಿಗೆ ಬದಲಾಯಿಸಲು ಯೋಜಿಸಲಾಗಿತ್ತು.

ದುರದೃಷ್ಟವಶಾತ್, ಕೆಲವು ಪ್ರದರ್ಶನ ಘಟಕಗಳಲ್ಲಿ ಈ ನಿಯಮವನ್ನು ಪಾಲಿಸಲಾಗಿಲ್ಲ. ಇದರಿಂದಾಗಿ ಹಳೆಯ ಸ್ಟಾಕ್ ಚಿತ್ರಗಳು ಹಾಗೆಯೇ ಉಳಿದುಕೊಂಡಿವೆ. ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸುತ್ತಿರುವುದಾಗಿ ಇವಾಂಜೆಲಿಡಿಸ್ ಹೇಳಿದ್ದಾರೆ ಮತ್ತು ಭವಿಷ್ಯದಲ್ಲಿ ಇಂತಹ ತಪ್ಪುಗಳು ಸಂಭವಿಸದಂತೆ ನೋಡಿಕೊಳ್ಳಲು ಕಂಪನಿಯು ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ಆದರೆ, ಈ ಒಂದು ಸಣ್ಣ ತಪ್ಪು ನಥಿಂಗ್ ಕಂಪೆನಿಯ ವಿಶ್ವಾಸಾರ್ಹತೆಯ ಮೇಲೆ ಪರಿನಾಮ ಬೀರಿದೆ. ಕಳೆದ ಎರಡು ದಿನಗಳಿಂದ ವಿಶ್ವದಾದ್ಯಮತ ಮೊಬೈಲ್ ಮಾರುಕಟ್ಟೆಯ ಬಹುಚರ್ಚಿತ ವಿಷಯಗಳಲ್ಲಿ ಇಂದು ಕೂಡ ಒಂದಾಗಿದೆ.
ವಿವಾದಕ್ಕೆ ಕಾರಣವಾಗಿದ್ದು ಏನು?
ಛಾಯಾಗ್ರಾಹಕರೊಬ್ಬರು ಅನಾಮಧೇಯವಾಗಿ ಆಂಡ್ರಾಯ್ಡ್ ಅಥಾರಿಟಿ (Android Authority) ಗೆ ಮಾಹಿತಿ ನೀಡಿ, ತಮ್ಮ ಚಿತ್ರವನ್ನು ಈ ಫೋನ್‌ನ ಕ್ಯಾಮರಾ ಮಾದರಿಯಾಗಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ಸ್ಟಿಲ್ಸ್ ಎಂಬ ಸ್ಟಾಕ್ ಫೋಟೋ ಮಾರುಕಟ್ಟೆಯಿಂದ ಡೌನ್‌ಲೋಡ್ ಮಾಡಲಾಗಿದೆ. ಇದೇ ರೀತಿಯಾಗಿ ಮತ್ತೊಬ್ಬ ಛಾಯಾಗ್ರಾಹಕ ರೋಮನ್ ಫಾಕ್ಸ್ (Roman Fox) ಸಹ, ನಥಿಂಗ್ ಫೋನ್ 3 ರ ಕ್ಯಾಮೆರಾ ಮಾದರಿಗಳೆಂದು ತೋರಿಸಿದ ಚಿತ್ರಗಳಲ್ಲಿ ಒಂದು ತಮ್ಮ ಚಿತ್ರ ಎಂದು ಹೇಳಿದ್ದಾರೆ
ಈ ಚಿತ್ರವನ್ನು ಅವರು ಫ್ಯೂಜಿಫಿಲ್ಮ್ XH2S ಕ್ಯಾಮೆರಾದಲ್ಲಿ ಪ್ಯಾರಿಸ್‌ನಲ್ಲಿ 2023 ರಲ್ಲಿ ತೆಗೆದಿದ್ದಾರೆ. ಅಂದರೆ ಈ ನಥಿಂಗ್ ಫೋನ್ 3 ಬಿಡುಗಡೆಗೂ ಬಹಳ ಹಿಂದೆಯೇ ಈ ಚಿತ್ರವನ್ನು ಚಿತ್ರಿಸಿದ್ದಾರೆ. ಇನ್ನು ನಂಥಿಂಗ್ ಕಂಪನಿಯು ಸಹ ಈ ಚಿತ್ರಗಳನ್ನು ಪರವಾನಗಿ ಪಡೆಯಲು ಹಣ ಪಾವತಿಸಿರುವುದು ಸಹ ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ, ಆದರೆ ಅವುಗಳನ್ನು ಫೋನ್‌ನ ಕ್ಯಾಮರಾ ಮಾದರಿಗಳೆಂದು ತಪ್ಪು ದಾರಿಗೆ ಎಳೆಯುವ ರೀತಿಯಲ್ಲಿ ಬಳಸಲಾಗಿದೆ. ಅಥವಾ ಕಂಪೆನಿ ಹೇಳಿಕೊಂಡಂತೆ, ಪ್ರದರ್ಶನ ಘಟಕಗಳಲ್ಲಿನ ನಿಯಮವನ್ನು ಪಾಲನೆ ಲೋಪ ಕೂಡ ಇರಬಹುದು.
ಒಟ್ಟರೆಯಾಗಿ, ಈ ವಿವಾದವು, ನಥಿಂಗ್ ಫೋನ್ 3 ರ ಬಿಡುಗಡೆಯ ಸಂದರ್ಭದಲ್ಲಿ ಕಂಪನಿಯ ಪ್ರಚಾರ ಕಾರ್ಯತಂತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾವು ಗಮನಿಸುವುದಾದರೆ, ನಥಿಂಗ್ ಫೋನ್ 3 ಭಾರತದಲ್ಲಿ ಜುಲೈ 1 ರಂದು ಬಿಡುಗಡೆಯಾಯಿತು. ಈ ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 4 ಚಿಪ್‌ಸೆಟ್‌ಮತ್ತು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಒಳಗೊಂಡಿದೆ. ಅವುಗಳಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ (3x ಆಪ್ಟಿಕಲ್ ಜೂಮ್ ಸಹಿತ) ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾಗಳಿವೆ.


Click it and Unblock the Notifications








