ಭರ್ಜರಿ ಸಿಹಿಸುದ್ದಿ: ಬೆಂಗಳೂರಿನಲ್ಲಿ ಭಾರತದ ಮೊದಲ 'ನಥಿಂಗ್' ಸ್ಟೋರ್!
ನಥಿಂಗ್ ಕಂಪೆನಿಯು ಭಾರತದಲ್ಲಿ ತನ್ನ ಮೊದಲ ಫ್ಲಾಗ್‌ಶಿಪ್ ಸ್ಟೋರ್ ಆರಂಭಿಸುವುದನ್ನು ಈಗಾಗಲೇ ಅಧಿಕೃತವಾಗಿ ದೃಢಪಡಿಸಿದೆ. ಇದೀಗ ಬಹು ನಿರೀಕ್ಷಿತ ಸ್ಟೋರ್ ನಮ್ಮ ರಾಜ್ಯದ ಟೆಕ್ ಹಬ್ ಬೆಂಗಳೂರು ನಗರದಲ್ಲಿ ತೆರೆಯಲಾಗುತ್ತದೆ ಎಂಬ ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಕಂಪನಿ ಇನ್ನೂ ಉದ್ಘಾಟನೆಯ ನಿಖರ ದಿನಾಂಕವನ್ನು ಪ್ರಕಟಿಸದಿದ್ದರೂ, ಭಾರತದಲ್ಲಿ "ಶೀಘ್ರದಲ್ಲೇ" ನಥಿಂಗ್ ಕಂಪೆನಿಯ ಮೊದಲ ಸ್ಟೋರ್ ಆರಂಭವಾಗಲಿದೆ ಎಂಬ ಟೀಸರ್ ಈಗಾಗಲೇ ಗಮನ ಸೆಳೆದಿದೆ.
ನಥಿಂಗ್ ಫ್ಲಾಗ್‌ಶಿಪ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ವಿಶೇಷ ಅನುಭವ ಒದಗಿಸುವ ಉದ್ದೇಶವಿದೆ. ಇಲ್ಲಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು, ಟ್ರೂ ವೈರ್‌ಲೆಸ್ ಸ್ಟೀರಿಯೋ (TWS) ಇಯರ್‌ಬಡ್‌ಗಳು ಮತ್ತು ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಬಹುದು. ಉತ್ಪನ್ನಗಳ ವಿನ್ಯಾಸ, ಹಿಡಿತ, ಬಳಕೆ ಆರಾಮ ಮತ್ತು ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ಮೂಲಕ ಖರೀದಿ ನಿರ್ಧಾರ ಕೈಗೊಳ್ಳಲು ಇದು ಸಹಾಯ ಮಾಡಲಿದೆ.
ನಥಿಂಗ್ ಕಂಪೆನಿಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮಾಹಿತಿಯಂತೆ, ಈ ಸ್ಟೋರ್ ನಥಿಂಗ್‌ನ ಸಂಪೂರ್ಣ ಪ್ರಾಡಕ್ಟ್ ಎಕೋಸಿಸ್ಟಮ್ ಅನ್ನು "ಹ್ಯಾಂಡ್ಸ್-ಆನ್" ರೀತಿಯಲ್ಲಿ ಅನ್ವೇಷಿಸಲು ಅವಕಾಶ ನೀಡಲಿದೆ. ಗಮನಾರ್ಹ ವಿಷಯವೆಂದರೆ, ಇದು ನಥಿಂಗ್ ಕಂಪನಿಯ ಜಗತ್ತಿನ ಎರಡನೇ ಬ್ರ್ಯಾಂಡ್-ಒನ್‌ಡ್ ಫ್ಲಾಗ್‌ಶಿಪ್ ಸ್ಟೋರ್ ಆಗಿದೆ. ಮೊದಲ ಸ್ಟೋರ್ ಲಂಡನ್‌ನ ಸೋಹೋ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.

ಭಾರತದ ಮೇಲಿನ ನಥಿಂಗ್ ಕಂಪನಿಯ ಆಸಕ್ತಿ ದಿನೇದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ನಿರಂತರ ಉತ್ಪನ್ನ ಬಿಡುಗಡೆ ಕಾರ್ಯಕ್ರಮಗಳು, ವಿಶೇಷ ಡ್ರಾಪ್ ಈವೆಂಟ್‌ಗಳು ಮತ್ತು ಗ್ರಾಹಕ ಸಂವಹನ ಚಟುವಟಿಕೆಗಳು ಇದಕ್ಕೆ ಸಾಕ್ಷಿ. ಭಾರತೀಯ ಮಾರುಕಟ್ಟೆಯನ್ನು ದೀರ್ಘಕಾಲಿಕವಾಗಿ ಗುರಿಯಾಗಿಸಿಕೊಂಡಿರುವುದನ್ನು ಕಂಪನಿಯ ಇತ್ತೀಚಿನ ನಿರ್ಧಾರಗಳು ಸ್ಪಷ್ಟಪಡಿಸುತ್ತವೆ.
ಇನ್ನು ನಮ್ಮ ಟೆಕ್ ಬೆಂಗಳೂರು ನಗರವನ್ನು ಆಯ್ಕೆ ಮಾಡಿರುವುದು ಯಾದೃಚ್ಛಿಕವಲ್ಲ. ಭಾರತದ ಸ್ಟಾರ್ಟ್‌ಅಪ್, ಇನೋವೇಶನ್ ಮತ್ತು ಪ್ರೀಮಿಯಂ ಗ್ರಾಹಕ ಮಾರುಕಟ್ಟೆಯ ಕೇಂದ್ರವಾಗಿರುವ ಬೆಂಗಳೂರು, ನಥಿಂಗ್ ಬ್ರ್ಯಾಂಡ್‌ನ ವಿನ್ಯಾಸ ಕೇಂದ್ರೀತ ತತ್ವಕ್ಕೆ ಸೂಕ್ತ ವೇದಿಕೆಯಾಗಿದೆ. ಈ ಫ್ಲಾಗ್‌ಶಿಪ್ ಸ್ಟೋರ್ ಮೂಲಕ ಕಂಪನಿ ಭಾರತೀಯ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಲು ಮುಂದಾಗಿದೆ.
ಈ ನಡುವೆ, ನಥಿಂಗ್‌ನ ಉಪಬ್ರ್ಯಾಂಡ್ CMF ಭಾರತದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹೊಸ ಅಧ್ಯಾಯ ಆರಂಭಿಸಿದೆ. ಡಿಸೆಂಬರ್ 2025ರಲ್ಲಿ CMF ಕಾನೂನುಬದ್ಧವಾಗಿ ಭಾರತದಲ್ಲಿ ನೋಂದಾಯಿತ ಕಂಪನಿಯಾಗಿದ್ದು, ಈಗ ಇದು CMF India Private Limited ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಕಂಪನಿಯ ಕಾರ್ಯಾಚರಣೆ ಕೇಂದ್ರವನ್ನೂ ಭಾರತಕ್ಕೆ ಸ್ಥಳಾಂತರಿಸಲಾಗಿದೆ.
ನಥಿಂಗ್ ಸಹ-ಸ್ಥಾಪಕ ಮತ್ತು ಇಂಡಿಯಾ ಅಧ್ಯಕ್ಷರಾದ ಆಕಿಸ್ ಎವಾಂಜಿಲಿಡಿಸ್, ಭಾರತ ಜಾಗತಿಕ ಗ್ರಾಹಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗೆ ಬರುತ್ತಿರುವ ಸಂದರ್ಭದಲ್ಲಿ CMF ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. ಸ್ಮಾರ್ಟ್‌ಫೋನ್ ಹಾಗೂ ವೆರಿಯಬಲ್ ಸಾಧನಗಳ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೇಲೆ ವಿಶೇಷ ಗಮನ ಹರಿಸುವುದು ಕಂಪನಿಯ ಪ್ರಮುಖ ಗುರಿಯಾಗಿದೆ.
ಒಟ್ಟಾರೆಯಾಗಿ, ಬೆಂಗಳೂರಿನಲ್ಲಿ ಆರಂಭವಾಗಲಿರುವ ನಥಿಂಗ್‌ನ ಮೊದಲ ಫ್ಲಾಗ್‌ಶಿಪ್ ಸ್ಟೋರ್ ಭಾರತದಲ್ಲಿನ ಪ್ರೀಮಿಯಂ ಟೆಕ್ ರಿಟೇಲ್ ಅನುಭವಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ಇದೆ. ಇದು ನಥಿಂಗ್ ಬ್ರ್ಯಾಂಡ್‌ಗೆ ಮಾತ್ರವಲ್ಲ, ಭಾರತೀಯ, ಕರ್ನಾಟಕ ಗ್ರಾಹಕರಿಗೂ ವಿಭಿನ್ನ ಮತ್ತು ಅನುಭವಾಧಾರಿತ ಶಾಪಿಂಗ್ ಅವಕಾಶವನ್ನು ತೆರೆದಿಡಲಿದೆ ಎಂಬುದು ನಮ್ಮ ಅಭಿಪ್ರಾಯ. ಇದಕ್ಕೆ ನೇವೆಂನತಿರಾ?..ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








