ಬೃಹತ್ ಬ್ಯಾಟರಿ: ಪವರ್‌ಹೌಸ್ OnePlus 13T ಫೋನಿನ ಸಾಮರ್ಥ್ಯ ನೋಡಿ!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus ಕಂಪೆನಿಯು ತನ್ನ ಮುಂಬರುವ OnePlus 13T ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿದೆ. ಇತ್ತೀಚೆಗಷ್ಟೇ OnePlus 13T ಸ್ಮಾರ್ಟ್‌ಫೋನಿನ ಕ್ಯಾಮೆರಾ ವಿಶೇಷಣಗಳನ್ನು ಖಚಿತಪಡಿಸಿದ ನಂತರ, ಕಂಪನಿಯು ಇದೀಗ ಈ ಸ್ಮಾರ್ಟ್‌ಫೋನ್ ಬೃಹತ್ 6260mAh ಸಾಮರ್ಥ್ಯದ ಗ್ಲೇಸಿಯರ್ ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ಅಧಿಕೃತವಾಗಿ ಘೋಷಿಸಿದೆ. ವಿಶೇಷವೆಂದರೆ, 6K mAh ಗಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಮೊದಲ ಮತ್ತು ಏಕೈಕ ಸಣ್ಣ ಪರದೆಯ ಮೊಬೈಲ್ ಸ್ಮಾರ್ಟ್‌ಫೋನ್ ಇದಾಗಿದ್ದು, ಸಣ್ಣ ಪರದೆಯ ಫೋನ್‌ಗಳ ಬ್ಯಾಟರಿ ಸಾಮರ್ಥ್ಯದ ಯುಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ ಎಂದು ಕಂಪನಿ OnePlus ಹೇಳಿಕೊಂಡಿದೆ.
ಕೇವಲ 6.32-ಇಂಚಿನ ಸಣ್ಣ ಪರದೆಯನ್ನು ಹೊಂದಿರುವ OnePlus 13T ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಮುಖ್ಯವಾಹಿನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿದ OnePlus ಚೀನಾ ಮುಖ್ಯಸ್ಥ ಲೂಯಿಸ್ ಜೀ ಅವರು, 6260mAh ಗ್ಲೇಸಿಯರ್ ಬ್ಯಾಟರಿಯೊಂದಿಗೆ OnePlus 13T ಬಳಕೆದಾರರು ದಿನಕ್ಕೆ ಒಮ್ಮೆ ಮಾತ್ರ ಚಾರ್ಜ್ ಮಾಡಿದರೂ ಇಡೀ ದಿನ ಬಾಳಿಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೇಮಿಂಗ್‌ನಂತಹ ಹೆಚ್ಚಿನ ಬ್ಯಾಟರಿ ಬಳಕೆಯ ಚಟುವಟಿಕೆಗಳಲ್ಲಿಯೂ ಸಹ ಕನಿಷ್ಠ 7 ಗಂಟೆಗಳ ಕಾಲ ನಿರಂತರ ಬಳಕೆಯನ್ನು ಇದು ನೀಡುತ್ತದೆ. ಪವರ್ ಬ್ಯಾಂಕ್‌ನ ಅಗತ್ಯವಿಲ್ಲದೆ ಅಥವಾ ಪವರ್ ಸೇವಿಂಗ್ ಮೋಡ್ ಅನ್ನು ಆನ್ ಮಾಡದೆಯೇ ಇಡೀ ದಿನ ಹೊರಗೆ ಪ್ರಯಾಣಿಸುವವರಿಗೆ ಇದು ಅತ್ಯಂತ ಅನುಕೂಲಕರವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತರ ಸಣ್ಣ-ಪರದೆಯ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ OnePlus 13T ನ ಬ್ಯಾಟರಿ ಬಾಳಿಕೆಯ ಕಾರ್ಯಕ್ಷಮತೆ ಗಮನಾರ್ಹವಾಗಿ ಉತ್ತಮವಾಗಿರುತ್ತದೆ ಎಂದು ಲೂಯಿಸ್ ಜೀ ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಐಫೋನ್ 16 ಪ್ರೊ ಮ್ಯಾಕ್ಸ್‌ನಂತಹ ದೊಡ್ಡ ಪರದೆಯ ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳಿಗಿಂತಲೂ OnePlus 13T ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇನ್ನು ಈ ಸಾಧನೆಯ ಹಿಂದೆ ಬ್ಯಾಟರಿ ತಂತ್ರಜ್ಞಾನದಲ್ಲಿ OnePlus ಮಾಡಿರುವ ದೀರ್ಘಕಾಲೀನ ಹೂಡಿಕೆ ಮತ್ತು ಅಭಿವೃದ್ಧಿ ಇದೆ ಎಂದು ಕಂಪನಿ ತಿಳಿಸಿದೆ. ಗ್ಲೇಸಿಯರ್ ಬ್ಯಾಟರಿಯು ಹೆಚ್ಚಿನ ಕಾರ್ಯಕ್ಷಮತೆಯ ಮೊಬೈಲ್ ಫೋನ್‌ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಗರಿಷ್ಠ ಕಾರ್ಯಕ್ಷಮತೆಯ ಸಂದರ್ಭದಲ್ಲೂ ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಇದರೊಂದಿಗೆ, ಸ್ನಾಪ್‌ಡ್ರಾಗನ್ 8 ಎಲೈಟ್‌ನ ಶಕ್ತಿ ದಕ್ಷತೆ, ಹೊಸ 8T LTPO ಸಣ್ಣ ನೇರ ಪರದೆ ಮತ್ತು ನವೀಕರಿಸಿದ ColorOS 15 ನಂತಹ ತಂತ್ರಜ್ಞಾನಗಳು OnePlus 13T ಸ್ಮಾರ್ಟ್‌ಫೋನಿನ ಬ್ಯಾಟರಿ ಬಾಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಕಂಪೆನಿ ತಿಳಿಸಿದೆ. ದೊಡ್ಡ ಬ್ಯಾಟರಿಯನ್ನು ಹೊಂದಿದ್ದರೂ ಸಹ, OnePlus 13T ಸ್ಮಾರ್ಟ್‌ಫೋನ್ ಕೇವಲ 185 ಗ್ರಾಂ ತೂಗುತ್ತದೆ ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ. ಈ ವಿಭಾಗದಲ್ಲಿರುವ ಇತರ ಫ್ಲ್ಯಾಗ್‌ಶಿಪ್ ಫೋನ್‌ಗಳಾದ Xiaomi 15 Proಮತ್ತು vivo X200 Pro, (213 ಗ್ರಾಂ) ಮತ್ತು (223 ಗ್ರಾಂ) ಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಹಗುರವಾಗಿದೆ. ಈ ಹಿಂದೆ ಬಹಿರಂಗಗೊಂಡ ಮಾಹಿತಿಯ ಪ್ರಕಾರ, OnePlus 13T ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಇದರಿಂದ ಗ್ರಾಹಕರಿಗೆ ಬ್ಯಾಟರಿ ಬಾಳಿಕೆ ಕುರಿತು ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ.!
ಒಟ್ಟಾರೆಯಾಗಿ, OnePlus 13T ಸ್ಮಾರ್ಟ್‌ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಬೃಹತ್ ಬ್ಯಾಟರಿ ಸಾಮರ್ಥ್ಯದೊಂದಿಗೆ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಸಂಯೋಜಿಸುವ ಭರವಸೆ ನೀಡುತ್ತಿದೆ. ಇದೇ ಏಪ್ರಿಲ್ 24 ರಂದು ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್, ಸಣ್ಣ ಪರದೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಈ ವರೆಗೂ ಬೆಲೆಯ ಕುರಿತಂತೆ ಯಾವುದೇ ಮಾಹಿತಿ ಲಬ್ಯವಾಗದಿದ್ದರೂ ಸಹ, ಈ ಸ್ಮಾರ್ಟ್‌ಫೋನ್ 40 ರಿಂದ 45 ಸಾವಿರ ಬೆಲೆ ಹೊಂದಿರಬಹುದಾದ ಸಾಧ್ಯತೆ ಇದೆ. ನೀವು ಕೂಡ ಈ ಕುರಿತಂತೆ ಸಾಕಷ್ಟು ಅಪ್‌ಡೇಟ್ ಪಡೆಯಲು ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.


Click it and Unblock the Notifications








