ಭಾರತದಲ್ಲಿ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ ಬಿಡುಗಡೆ! ಆಕರ್ಷಕ ಫೀಚರ್ಸ್!
ಒನ್‌ಪ್ಲಸ್ ಭಾರತದ ನಂಬರ್ ಒನ್ ಪ್ರೀಮಿಯಂ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಅಲ್ಲದೆ ಪ್ರತಿಷ್ಠಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ತಯಾರಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಹಣದ ಮೌಲ್ಯಕ್ಕೆ ತಕ್ಕಂತೆ ಹಲವು ಭಿನ್ನ ಮಾದರಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ಒನ್‌ಪ್ಲಸ್ ಇದೀಗ ತನ್ನ ಒನ್‌ಪ್ಲಸ್ 8 ಸರಣಿಯಲ್ಲಿ ಒನ್‌ಪ್ಲಸ್ 8T ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಫ್ಲ್ಯಾಗ್‌ಶಿಪ್‌ನ ''T'' ಸರಣಿಯ ಮಾದರಿಯನ್ನು ಮುಂದುವರೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 8 ಗಿಂತ ಸಾಕಷ್ಟು ಆಪ್ಡೇಟ್ ಫೀಚರ್ಸ್‌ಗಳನ್ನ ಒಳಗೊಂಡಿದೆ.

ಹೌದು, ಒನ್‌ಪ್ಲಸ್ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಪ್ಲ್ಯಾಗ್‌ಶಿಪ್‌ನಲ್ಲಿ ಹೊಸ ಒನ್‌ಪ್ಲಸ್ 8Tಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದು ಒನ್‌ಪ್ಲಸ್ 8 ರಲ್ಲಿ ಇದ್ದ 30W ಚಾರ್ಜಿಂಗ್ ವೇಗಕ್ಕಿಂತ ಹೆಚ್ಚಿನ 65W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ಒನ್‌ಪ್ಲಸ್ 8 ಗೆ ಹೋಲಿಸಿದರೆ ದೊಡ್ಡ ಬ್ಯಾಟರಿ ಮತ್ತು ಟ್ರಿಪಲ್ ಬದಲಿಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ಇದು 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದ್ದು, 6.55-ಇಂಚಿನ ಫುಲ್‌ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 402ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಪ್ರೊಸೆಸರ್ ಬಲ
ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಒಎಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದು 12GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ
ಒನ್‌ಪ್ಲಸ್ 8T ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX586 ಸೆನ್ಸಾರ್, ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್, ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 65 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬ್ಯಾಟರಿಯನ್ನು ಕೇವಲ 39 ನಿಮಿಷಗಳಲ್ಲಿ 100% ಮತ್ತು ಕೇವಲ 15 ನಿಮಿಷಗಳಲ್ಲಿ 58% ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಜಿಪಿಎಸ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ 8T ಭಾರತದಲ್ಲಿ 8GB+ 128GB ಶೇಖರಣಾ ಆಯ್ಕೆಯ ಬೆಲೆ ರೂ. 42,999 ಆಗಿದ್ದರೆ, 12GB + 256GB ಶೇಖರಣಾ ರೂಪಾಂತರದ ಬೆಲೆ 45,999 ರೂ. ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅಕ್ವಾಮರೀನ್ ಗ್ರೀನ್ ಮತ್ತು ಲೂನಾರ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಒನ್‌ಪ್ಲಸ್ 8T ಅಮೆಜಾನ್ ಇಂಡಿಯಾ, ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಚಾನೆಲ್‌ಗಳ ಮೂಲಕ ಅಕ್ಟೋಬರ್ 17 ರಿಂದ ಖರೀದಿಗೆ ಲಭ್ಯವಿರುತ್ತದೆ.


Click it and Unblock the Notifications