ಗೂಗಲ್‌ಗೆ ಠಕ್ಕರ್: AI ವೆಬ್ ಬ್ರೌಸರ್ ಬಿಡುಗಡೆ ಮಾಡಲಿದೆ OpenAI!
ಜಾಗತಿಕ ಸರ್ಚ್ ಇಂಜಿನ್ ದೈತ್ಯ ಗೂಗಲ್‌ಗೆ ಸ್ಪರ್ಧೆ ನೀಡಲು, ಚಾಟ್‌ಜಿಪಿಟಿಯ ಮಾತೃ ಸಂಸ್ಥೆ 'ಓಪನ್ ಎಐ' (OpenAI) ಶೀಘ್ರದಲ್ಲೇ ಗೂಗಲ್ ಕ್ರೋಮ್‌ಗೆ ಪರ್ಯಾಯವಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವೆಬ್ ಬ್ರೌಸರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ರಾಯಿಟರ್ಸ್ ವರದಿಯ ಪ್ರಕಾರ, ಓಪನ್ ಎಐ ಸಂಸ್ಥೆ ಗೂಗಲ್ ಕ್ರೋಮ್ ಮತ್ತು ಇತರ ಪ್ರಮುಖ ಬ್ರೌಸರ್‌ಗಳಿಗೆ ಸವಾಲು ಹಾಕಲು, AI ಸಾಮರ್ಥ್ಯಗಳನ್ನು ಬೆಂಬಲಿಸುವ ಮತ್ತು ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುವ ಹೊಸ ಮಾರ್ಗವನ್ನು ಪರಿಚಯಿಸಲು ಮುಂದಾಗಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಓಪನ್ ಎಐ ತನ್ನ ವೆಬ್ ಬ್ರೌಸರ್ ಅನ್ನು ಬಿಡುಗಡೆ ಮಾಡಲು ಬಹಳ ಹತ್ತಿರವಾಗಿದೆ. ಈ ವಿಷಯದ ಬಗ್ಗೆ ಪರಿಚಿತರಾಗಿರುವ, ಆದರೆ ಹೆಸರಿಸದ ಮೂಲಗಳ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ AI-ಚಾಲಿತ ಬ್ರೌಸರ್ ಬಿಡುಗಡೆಗೊಳ್ಳಬಹುದು. ಈ ಬ್ರೌಸರ್, ಸಾಮಾನ್ಯ ವೆಬ್ ಬ್ರೌಸರ್‌ಗಿಂತ ವಿಭಿನ್ನವಾಗಿ, AI ಅನ್ನು ಸ್ಥಳೀಯವಾಗಿ ಬಳಸುತ್ತದೆ ಮತ್ತು ವೆಬ್ ಸರ್ಫಿಂಗ್ ಅನುಭವವನ್ನು ಸುಧಾರಿಸಲು ವಿಶೇಷ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಈ ಬ್ರೌಸರ್‌ನಲ್ಲಿ ಯಾವುದೇ AI ವೈಶಿಷ್ಟ್ಯಗಳನ್ನು ವಿವರಿಸದಿದ್ದರೂ, ಇದು ಬ್ರೌಸಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸುವ ಉದ್ದೇಶವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಓಪನ್ ಎಐನ ಬ್ರೌಸರ್, ಗೂಗಲ್‌ನ ಸ್ವಂತ ಓಪನ್ ಸೋರ್ಸ್ ಬ್ರೌಸರ್ ಕೋಡ್ ಕ್ರೋಮಿಯಂ ಮೇಲೆ ನಿರ್ಮಿತವಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಕ್ರೋಮಿಯಂ ಗೂಗಲ್ ಕ್ರೋಮ್‌ಗೆ ಮೂಲ ಕೋಡ್ ಆಗಿದ್ದು, ಮೈಕ್ರೋಸಾಫ್ಟ್ ಎಡ್ಜ್ ಮತ್ತು ಒಪೇರಾ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಬ್ರೌಸರ್‌ಗಳಿಗೆ ಸಹ ಮೂಲವಾಗಿದೆ. ಜಾಗತಿಕ ಇಂಟರ್‌ನೆಟ್ ಪ್ರಪಂಚದಲ್ಲಿ ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಏಕಸ್ವಾಮ್ಯವನ್ನು ಸೃಷ್ಟಿಸುವ ಹಂತದಲ್ಲಿದೆ ಅಥವಾ ಸೃಷ್ಟಿಸಿದೆ ಎಂಬ ಆರೋಪಗಳಿವೆ. ಇಂತಹ ಸಮಯದಲ್ಲಿ ಸರ್ಚ್ ಎಂಜಿನ್ ಮಾರುಕಟ್ಟೆಗೆ ಓಪನ್ ಎಐ ಆಗಮನವು ವಿಶೇಷ ಆಗಮನವನ್ನು ಸೂಚಿಸುವ ಸಾಧ್ಯತೆ ಇದೆ.

ಓಪನ್ ಎಐ ಸರ್ಚ್ ಎಂಜಿನ್ ಮತ್ತು ವೆಬ್ ಬ್ರೌಸರ್‌ಗಳೊಂದಿಗೆ ಗೂಗಲ್‌ನಂತೆ ಸಮಗ್ರ ವ್ಯವಸ್ಥೆಯನ್ನು ನಿರ್ಮಿಸಲು ಉದ್ದೇಶಿಸುತ್ತಿದೆ. ದಶಕಗಳಿಂದ, ಗೂಗಲ್ ತನ್ನ ಸಂಯೋಜಿತ ಉತ್ಪನ್ನಗಳ ಮೂಲಕ ಸರ್ಚ್ ಮತ್ತು ಬ್ರೌಸರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ನಿರಂತರವಾಗಿ ಉತ್ಪನ್ನಗಳನ್ನು ಸುಧಾರಿಸಲು, ಅದು ದೊಡ್ಡ ಬಳಕೆದಾರ ಡೇಟಾವನ್ನು ಹೊಂದಿದೆ. ಆದರೆ, ಪ್ರಸ್ತುತ ಓಪನ್ ಎಐನ ಚಾಟ್‌ಜಿಪಿಟಿ ಈಗ 500 ಮಿಲಿಯನ್ ಸಾಪ್ತಾಹಿಕ ಬಳಕೆದಾರರನ್ನು ಹೊಂದಿದೆ. ಈ ಬಳಕೆದಾರರು ಓಪನ್ ಎಐ ವೆಬ್ ಬ್ರೌಸರ್ ಅನ್ನು ಬಳಸಿದರೆ, ಗೂಗಲ್‌ನಂತಹ ದೊಡ್ಡ ಸರ್ಚ್ ಎಂಜಿನ್‌ಗೆ ದೊಡ್ಡ ಪೆಟ್ಟು ಬೀಳಬಹುದು.!
ಓಪನ್ ಎಐನ ಬ್ರೌಸರ್, ವೆಬ್‌ಸೈಟ್‌ಗಳಿಗೆ ಕ್ಲಿಕ್ ಮಾಡುವ ಬದಲು, ಚಾಟ್‌ಜಿಪಿಟಿಯಂತಹ ಸ್ಥಳೀಯ ಚಾಟ್ ಇಂಟರ್‌ಫೇಸ್‌ನಲ್ಲಿ ಬಳಕೆದಾರರ ಸಂವಹನವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಗ್ರಾಹಕರು ತಮ್ಮ ವೈಯಕ್ತಿಕ ಮತ್ತು ಕೆಲಸದ ಜೀವನದಲ್ಲಿ ಸೇವೆಗಳನ್ನು ಬಳಸಲು ಓಪನ್ ಎಐನ ವಿಶಾಲ ಕಾರ್ಯತಂತ್ರದ ಭಾಗವಾಗಿ ಈ ಬ್ರೌಸರ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಆದರೆ, ಓಪನ್ ಎಐ ಈ ವಿಷಯದಲ್ಲಿ ಕಾಮೆಂಟ್ ಮಾಡಲು ನಿರಾಕರಿಸಿದೆ. ಇತ್ತ ಮಾಹಿತಿ ನೀಡುವ ಜನರು ಕೂಡ ಸಾರ್ವಜನಿಕವಾಗಿ ಮಾತನಾಡಲು ಅಧಿಕಾರವಿಲ್ಲ ಎಂದು ವರದಿಯು ಹೇಳಿದೆ.
ಕೆಲವು ವರದಿಗಳು ಹೇಳುವೆಂತೆ, ಜಾಗತಿಕ ಇಂಟರ್‌ನೆಟ್ ಪ್ರಪಂಚದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆಯಾ?, ಸರ್ಚ್ ಎಂಜಿನ್ ಮಾರುಕಟ್ಟೆಗೆ ಓಪನ್ ಎಐ ಆಗಮನವು ಬದಲಾವಣೆ ತರಲು ಸಾಧ್ಯವೇ?, ಈ ಕುರಿತಂತೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








