ChatGPT ನಿರ್ಮಾತೃ OpenAI ನಿಂದ ಹೊಸ ಸ್ಕ್ರೀನ್‌ಲೆಸ್ AI ಫೋನ್ ತಯಾರಿಕೆ!?
ChatGPT ಯಂತಹ ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್‌ನಂತಹ ಟೆಕ್ ದೈತ್ಯ ಸಂಸ್ಥೆಗೆ ಸೆಡ್ಡುಹೊಡೆದಿದ್ದ ಓಪನ್‌ಎಐ (OpenAI) ಸಂಸ್ಥೆಯು ಇದೀಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸುವ ಮಹತ್ವದ ಯೋಜನೆಯಲ್ಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ChatGPT ಯಂತಹ ಅತ್ಯಾಧುನಿಕ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಈ ಸಂಸ್ಥೆ, ತನ್ನದೇ ಆದ ಸ್ಮಾರ್ಟ್‌ಫೋನ್ ಅನ್ನು ರಚಿಸುವ ಕಾರ್ಯದಲ್ಲಿ ತೊಡಗಿದೆ ಎನ್ನಲಾಗಿದ್ದು, ಈ ಮೂಲಕ ಮೊಬೈಲ್ ಲೋಕದಲ್ಲಿ ಮತ್ತೊಂದು ಮಹತ್ವದ ಘಟನೆಗೆ ಪ್ರಪಂಚವು ಸಾಕ್ಷಿಯಾಗುವ ನಿರೀಕ್ಷೆಯಿದೆ.!
ಹೌದು, ದಿ ಇನ್ಫರ್ಮೇಷನ್‌ನ ವರದಿಯ ಪ್ರಕಾರ, ಓಪನ್‌ಎಐ ತನ್ನದೇ ಆದ ಸ್ಮಾರ್ಟ್‌ಫೋನ್ ಅನ್ನು ತಯಾರಿಸುವ ನಿಟ್ಟಿನಲ್ಲಿ ಆಪಲ್‌ನ ಮಾಜಿ ವಿನ್ಯಾಸದ ಮುಖ್ಯಸ್ಥರಾದ ಜಾನಿ ಐವ್ ಮತ್ತು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಸಹ-ಸ್ಥಾಪಿಸಿದ io ಪ್ರಾಡಕ್ಟ್ಸ್‌ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಅನ್ವೇಷಿಸುತ್ತಿದೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ, ಕಂಪನಿಯು ಪರದೆಯಿಲ್ಲದ (ಸ್ಕ್ರೀನ್‌ಲೆಸ್)ಫೋನ್ ಪರಿಕಲ್ಪನೆ ಮತ್ತು ಇತರ AI-ಚಾಲಿತ ಸಾಧನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಇದಕ್ಕಾಗಿ ಈ ಸ್ಟಾರ್ಟ್‌ಅಪ್ ಸುಮಾರು $1 ಬಿಲಿಯನ್ ಹಣವನ್ನು ಸಂಗ್ರಹಿಸುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಸಹಯೋಗ ಇನ್ನೂ ದೃಢೀಕರಣಗೊಳ್ಳಬೇಕಾಗಿದ್ದರೂ, ಇದು ಮೊಬೈಲ್ ತಂತ್ರಜ್ಞಾನದ ಜಗತ್ತಿನಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯುವ ಸಾಧ್ಯತೆ ಇದೆ. ಈ ಹಿಂದೆ ಸಾರ್ವಜನಿಕವಾಗಿ ಮಾತನಾಡಿದ್ದ ಆಲ್ಟ್‌ಮನ್, ಮಾನವ ಮತ್ತು ಕಂಪ್ಯೂಟರ್ ನಡುವಿನ ಸಂವಹನವನ್ನು ಮರು ವ್ಯಾಖ್ಯಾನಿಸುವಂತಹ ಒಂದು ಸಾಧನವನ್ನು ನಿರ್ಮಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಪರದೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ನೈಸರ್ಗಿಕ ಭಾಷಾ ಸಂಸ್ಕರಣೆಯೊಂದಿಗೆ ಹೆಚ್ಚು ಸಂಯೋಜನೆಗೊಳ್ಳುವಂತಹ ಸಾಧನವನ್ನು ಅವರು ಕಲ್ಪಿಸಿಕೊಂಡಿದ್ದಾರೆ. ಇದರಿಂದ ಈ ಸುದ್ದಿಗೆ ಮತ್ತಷ್ಟು ಮಹತ್ವವು ಬಂದಿದೆ ಎನ್ನಬಹುದು.

ಮೂಲಗಳ ಪ್ರಕಾರ, ಕಂಪನಿಯ ಗುರಿಯು ಹೆಚ್ಚು ಅರ್ಥಗರ್ಭಿತ, "ಐಫೋನ್‌ಗಿಂತ ಕಡಿಮೆ ಅಡ್ಡಿಪಡಿಸುವ" ಸ್ಮಾರ್ಟ್‌ಫೋನ್‌ನಂತಹ ಉತ್ಪನ್ನವನ್ನು ರಚಿಸುವುದಾಗಿದೆ. ಇತ್ತೀಚೆಗೆ ಬಿಡುಗಡೆಯಾದ GPT-4o ಯಶಸ್ಸು ಮತ್ತು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಬಳಕೆದಾರರನ್ನು ಪಡೆದುಕೊಂಡಿರುವುದು, ಓಪನ್‌ಎಐ ಹಾರ್ಡ್‌ವೇರ್ ಅನ್ನು ತನ್ನ ಮುಂದಿನ ದೊಡ್ಡ ಬೆಳವಣಿಗೆಯ ಹೆಜ್ಜೆಯಾಗಿ ಪರಿಗಣಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದಾಗ್ಯೂ, ಕಂಪೆನಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಮತ್ತು AI-ಚಾಲಿತ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸುತ್ತಿರುವ ವದಂತಿಗಳನ್ನು ನಿರಾಕರಿಸಿದೆ.
ಒಂದು ವೇಳೆ ಓಪನ್‌ಎಐ ಸಂಸ್ಥೆ ನಿಜವಾಗಿಯೂ AI-ಚಾಲಿತ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅದು 2007 ರಲ್ಲಿ ಆಪಲ್ ಫೋನ್‌ಗಳನ್ನು ಕ್ರಾಂತಿಗೊಳಿಸಿದ ರೀತಿಯಲ್ಲಿಯೇ ಐಫೋನ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಕೆಲವರು ಇದನ್ನು "ಇಂಟೆಲಿಜೆನ್ಸ್‌ನ ಐಫೋನ್" ಎಂದೂ ಕರೆಯುತ್ತಿದ್ದಾರೆ.ಆಪಲ್ ಇಂಟೆಲಿಜೆನ್ಸ್ ಬಿಡುಗಡೆಯ ವಿಳಂಬ, ಹೆಚ್ಚುತ್ತಿರುವ ಆಮದು ಸುಂಕಗಳು ಮತ್ತು ಐಫೋನ್ 17 ರ ಬೆಲೆಯ ಬಗ್ಗೆ ಗ್ರಾಹಕರ ಆತಂಕಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಓಪನ್‌ಎಐ ತನ್ನ ನಡೆಯನ್ನು ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿರಬಹುದು.
ಕೆಲವು ದಿನಗಳ ಹಿಂದೆಯಷ್ಟೇ, ಲಾರೆನ್ ಪೊವೆಲ್ ಜಾಬ್ಸ್ ಸೇರಿದಂತೆ ಪ್ರಮುಖ ಹೂಡಿಕೆದಾರರ ಬೆಂಬಲದೊಂದಿಗೆ, ಓಪನ್‌ಎಐ ಒಡೆತನದ ಈ ಸ್ಟಾರ್ಟ್‌ಅಪ್ ಸುಮಾರು $1 ಬಿಲಿಯನ್ ಹಣವನ್ನು ಸಂಗ್ರಹಿಸುವ ಹಂತದಲ್ಲಿದೆ ಎಂದು ಹೇಳಲಾಗಿತ್ತು. ಇದೀಗ ಬಂದಿರುವ ಸುದ್ದಿಗಳು ಈ ವದಂತಿಯ ಸುದ್ದಿಯು ನಿಜ ಇರಬಹುದು ಎಂದು ಹೇಳುತ್ತಿವೆ. ಒಂದು ವೇಳೆ ChatGPT ಮತ್ತು ಇತರ ಸುಧಾರಿತ AI ತಂತ್ರಜ್ಞಾನಗಳನ್ನು ಆಧರಿಸಿದ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.


Click it and Unblock the Notifications








