ಬಹಿರಂಗವಾಯ್ತು ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಡೇಟ್! ಏನಿದೆ ಫೀಚರ್ಸ್!
ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಒಪ್ಪೋ ಕಂಪೆನಿ ಸೈ ಎನಿಸಿಕೊಂಡಿದೆ. ರಿಯರ್ ಪ್ಯಾನಲ್ ಡಿಸೈನ್ ಹಾಗೂ ಸ್ಮಾರ್ಟ್‌ಫೋನ್ ಲುಕ್‌ನಿಂದ ಒಪ್ಪೋ ಫೋನ್‌ಗಳು ಗಮನಸೆಳೆಯುತ್ತವೆ. ಅಲ್ಲದೆ ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳಿಂದಲೂ ಒಪ್ಪೋ ಫೋನ್‌ಗಳು ನೆಚ್ಚಿನ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿವೆ. ಇದೇ ಕಾರಣಕ್ಕೆ ಒಪ್ಪೋ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ಗಳ ಎಂಟ್ರಿಯ ಬಗ್ಗೆ ನಿರೀಕ್ಷೆ ಇದ್ದೆ ಇರುತ್ತದೆ. ಇದೀಗ ಒಪ್ಪೋ ಕಂಪೆನಿ ಹೊಸ ಒಪ್ಪೋ A1 ಪ್ರೊ ಫೋನ್ ಬಿಡುಗಡೆ ತಯಾರಿಯಲ್ಲಿದೆ.

ಹೌದು, ಒಪ್ಪೋ ಕಂಪೆನಿ ಹೊಸ ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಫಿಕ್ಸ್ ಆಗಿದೆ. ಈ ಸ್ಮಾರ್ಟ್‌ಫೋನ್ ಇದೇ ನವೆಂಬರ್ 16 ಕ್ಕೆ ಬಿಡುಗಡೆಯಾಗಲಿದೆ ಎಂದು ಒಪ್ಪೋ ಕಂಪೆನಿ ದೃಡಪಡಿಸಿದೆ. ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಬೆಂಬಲಿಸುವ OLED ಡಿಸ್‌ಪ್ಲೇಯಲ್ಲಿ ಬರಲಿದೆ ಎನ್ನಲಾಗಿದೆ. ಆದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದ, 108-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆ ಪಡೆದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?
ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದ್ದು, 393 ppi ಸಾಂದ್ರತೆ ಪಡೆದಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ.

ಪ್ರೊಸೆಸರ್ ಯಾವುದು?
ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗವನ್ನು ಪಡೆದಿರಲಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಕೂಡ ನೀಡಲಿದೆ.

ಕ್ಯಾಮೆರಾ ಸೆಟ್‌ಅಪ್ ಏನಿರಲಿದೆ?
ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿರಲಿದೆ ಎಂದು ವರದಿಯಾಗಿದೆ.

ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ?
ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ 67W ವೇಗದ ಚಾರ್ಜಿಂಗ್ ಬೆಂಬಲಿಸುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 200% 'ಸೂಪರ್ ವಾಲ್ಯೂಮ್' ಫೀಚರ್ಸ್ ಒಳಗೊಂಡಿರುವ ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A1 ಪ್ರೊ ಸ್ಮಾರ್ಟ್‌ಫೋನ್ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗುವ ದಿನಾಂಕ ಬಹಿರಂಗವಾಗಿದೆ. ಚೀನಾದಲ್ಲಿ ಬಿಡುಗಡೆಯಾದ ಕೆಲವು ದಿನಗಳ ನಂತರ ಭಾರತಕ್ಕೂ ಕೂಡ ಕಾಲಿಡುವ ಸೂಚನೆ ನೀಡಿದೆ. ಆದರೆ ಈ ಸ್ಮಾರ್ಟ್‌ಫೋನ್ ಬೆಲೆ ಏನಿರಲಿದೆ? ಯಾವ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ. ಜೊತೆಗೆ ಇದರ ಸೇಲ್ ಡೇಟ್ ಕೂಡ ಇನ್ನು ಬಹಿರಂಗವಾಗಿಲ್ಲ.


Click it and Unblock the Notifications








