OPPO Reno 13 ಸರಣಿ ಬಿಡುಗಡೆಗೆ ಸಿದ್ಧ; ಒಂದಲ್ಲ.. ಎರಡು ಹೊಸ ಫೋನ್! ವಿಶೇಷತೆಗಳೇನು?
ಒಪ್ಪೋ (OPPO) ತನ್ನ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿಯು ಇತ್ತೀಚೆಗೆ ಒಪ್ಪೋ ಫೈಂಡ್ X8 (OPPO Find X8) ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ, ಮತ್ತೆ ಒಪ್ಪೋ ರೆನೋ 13 (OPPO Reno 13) ಸರಣಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದರಲ್ಲಿ ಒಪ್ಪೋ ರೆನೋ 13 (Oppo Reno 13) ಮತ್ತು ಒಪ್ಪೋ ರೆನೋ 13 ಪ್ರೊ (Oppo Reno 13 Pro) ಹೆಸರಿನ ಎರಡು ಹೊಸ ಮೊಬೈಲ್‌ಗಳನ್ನು ಲಾಂಚ್ ಮಾಡಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಒಪ್ಪೋ ರೆನೋ 13 ಸರಣಿ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಕಂಪನಿಯು ಒಪ್ಪೋ ರೆನೋ 13 ಸರಣಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ತಾತ್ಕಾಲಿಕ ಬಿಡುಗಡೆ ದಿನಾಂಕವು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈಗಾಗಲೇ ಒಪ್ಪೋ ರೆನೋ 13 ಪ್ರೊ ಮೊಬೈಲ್‌ನ ನಿರೀಕ್ಷಿತ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ರೆನೋ 13 ಸರಣಿಯನ್ನು ಯಾವಾಗ ಬಿಡುಗಡೆ ಮಾಡಬಹುದು ಮತ್ತು ಮುಂಬರುವ ಫೋನ್‌ಗಳ ವಿಶೇಷತೆಗಳೇನು? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಒಪ್ಪೋ ರೆನೋ 13 ಸರಣಿಯ ಬಿಡುಗಡೆ ದಿನಾಂಕ (ನಿರೀಕ್ಷಿತ)
ಒಪ್ಪೋ ರೆನೋ 13 ಸರಣಿಯನ್ನು ನವೆಂಬರ್ 25 ರಂದು ಚೀನಾದಲ್ಲಿ ಬಿಡುಗಡೆ ಮಾಡಬಹುದು ಎಂದು ಚೀನಾದ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ (ಡಿಸಿಎಸ್) ವೈಬೊದಲ್ಲಿ ವರದಿ ಮಾಡಲಾಗಿದೆ. ಇದು ತಾತ್ಕಾಲಿಕ ದಿನಾಂಕವಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಅಧಿಕೃತ ದಿನಾಂಕವನ್ನು ಘೋಷಿಸಲಿದೆ.
ಒಪ್ಪೋ ಕಂಪನಿಯು ಪ್ರತಿ 6 ತಿಂಗಳಿಗೊಮ್ಮೆ ಹೊಸ ರೆನೋ ಸರಣಿಯನ್ನು ಪ್ರಾರಂಭಿಸುತ್ತದೆ. ಈ ಹಿಂದೆ ಒಪ್ಪೋ ರೆನೋ 12 (Oppo Reno 12) ಸರಣಿಯನ್ನು ಮೇ 2024ರಲ್ಲಿ ಬಿಡುಗಡೆ ಮಾಡಲಾಯಿತು. ಒಪ್ಪೋ ರೆನೋ 11 (Oppo Reno 11) ಸರಣಿಯನ್ನು ನವೆಂಬರ್ 2023ರಲ್ಲಿ ಪರಿಚಯಿಸಿತು. ಅದರಂತೆ, ನವೆಂಬರ್‌ನಲ್ಲಿ ಒಪ್ಪೋ ರೆನೋ 13 (OPPO Reno 13) ಸರಣಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಒಪ್ಪೋ ರೆನೋ 13 ಪ್ರೊ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಒಪ್ಪೋ ರೆನೋ 13 ಪ್ರೊ ಮೊಬೈಲ್ 6.78 ಇಂಚಿನ ಕ್ವಾಡ್ ಕರ್ವ್ಡ್ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಡಿಸ್ಪ್ಲೇಯು 1.5K ರೆಸಲ್ಯೂಶನ್ (2780 × 1264 ಪಿಕ್ಸೆಲ್‌ಗಳು) ಬೆಂಬಲ ಹೊಂದಿರುತ್ತದೆ. ಇದು LTPO ತಂತ್ರಜ್ಞಾನವನ್ನು ಒಳಗೊಂಡಿದೆ. ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಪಡೆದಿತ್ತು.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒಪ್ಪೋ ರೆನೋ 13 ಪ್ರೊ ಅನ್ನು ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕ್ಯಾಮೆರಾ ಸೆಟಪ್
ಮುಂಬರುವ ಒಪ್ಪೋ ರೆನೋ 13 ಪ್ರೊ ಫೋನ್ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿರಲಿದೆ. ಇದು 3x ಆಪ್ಟಿಕಲ್ ಜೂಮ್ ಹೊಂದುವ ನಿರೀಕ್ಷೆಯಿದೆ. ಇದು ಒಪ್ಪೋ ರೆನೋ 12 ಪ್ರೊಗಿಂತ ಉತ್ತಮವಾಗಿರುತ್ತದೆ. ಫೋನಿನ ಪ್ರಾಥಮಿಕ ಕ್ಯಾಮೆರಾವು ಸುಮಾರು 12.6 ಮೆಗಾಪಿಕ್ಸೆಲ್ ರೆಸಲ್ಯೂಶನ್ (4096 x 3072 ವಿಡಿಯೋ ರೆಸಲ್ಯೂಶನ್) ಹೊಂದಿರುವ ಸಾಧ್ಯತೆಯಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಈ ಫೋನ್ 5,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಇದು ಒನ್‌ಪ್ಲಸ್ 13 (OnePlus 13) ಫೋನಿನಂತೆಯೇ ಮ್ಯಾಗ್ನೆಟಿಕ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿರಲಿದೆ.
ಇತರೆ ವೈಶಿಷ್ಟ್ಯಗಳು
ಒಪ್ಪೋ ರೆನೋ 13 ಪ್ರೊ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68/69 ರೇಟಿಂಗ್ ಹೊಂದಿದೆ. ಕಂಪನಿಯು ಮುಂಬರುವ ಹೊಸ ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ. ಈ ಮೇಲೆ ತಿಳಿಸಿರುವ ಮಾಹಿತಿಯನ್ನು ನಿರೀಕ್ಷಿತ ಎಂದು ಪರಿಗಣಿಸಲಾಗಿದೆ.


Click it and Unblock the Notifications








