ಗೂಗಲ್‌ನ ಟಾಪ್ ಹುದ್ದೆಗೆ ಆಯ್ಕೆಯಾದ ಬೆಂಗಳೂರಿಗ!..ಐಟಿ ಕಂಪನಿಗಳಲ್ಲಿ ಭಾರತೀಯರ ಶಕ್ತಿ!!
ಜಗದ್ವಿಖ್ಯಾತ ಕಂಪನಿಗಳಲ್ಲಿ ಭಾರತೀಯ ಮೂಲದವರು ಕಂಪನಿಗಳ ಆಯಕಟ್ಟಿನ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿರುವ ಪ್ರಕ್ರಿಯೆಗೆ ಹೊಸದೊಂದು ಸೇರ್ಪಡೆಯಾಗಿದೆ. ಸುಂದರ್ ಪಿಚೈ ಅವರ ನಂತರ ಜನಪ್ರಿಯ ಜಾಲತಾಣ ಹಾಗೂ ಸಾಫ್ಟ್‌ವೇರ್ ದೈತ್ಯ ಕಂಪೆನಿ ಗೂಗಲ್‌ನಲ್ಲಿ ಮತ್ತೋರ್ವ ಭಾರತೀಯ ಆಯಕಟ್ಟಿನ ಹುದ್ದೆಯನ್ನು ಅಲಂಕರಿಸಿರುವುದನ್ನು ಕಂಪೆನಿ ಸ್ಪಷ್ಟಪಡಿಸಿದೆ.
ತಂತ್ರಜ್ಞಾನ ಪ್ರಪಂಚದಲ್ಲಿ ಭಾರತೀಯರ ಸಾಧನೆ ಉತ್ತಿಂಗಕ್ಕೇರುತ್ತಿದ್ದು, ಒರಾಕಲ್ ಕಾರ್ಪ್‌ನ ಪ್ರಾಡಕ್ಟ್ ಚೀಫ್ ಆಗಿ ಕಾರ್ಯನಿರ್ವಸಿದ್ದ ಬೆಂಗಳೂರಿನ ಥಾಮಸ್ ಕುರಿಯನ್ ಅವರು ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. 2019 ವರ್ಷಾರಂಭದಲ್ಲಿ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ಕೆಲಸ ಆರಂಭಿಸಲಿದ್ದಾರೆ ಎಂದು ಗೂಗಲ್ ಕಂಪೆನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಸೇಂಟ್ ಜೋಸೆಫ್ಸ್ ಬಾಲಕರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಕುರಿಯನ್ ಅವರು ಒರಾಕಲ್‌ನ ನಾನಾ ಉತ್ಪನ್ನಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಿ ಈಗ ಗೂಗಲ್ ಕದವನ್ನು ತಟ್ಟಿದ್ದಾರೆ. ಹಾಗಾದರೆ, ಗೂಗಲ್ ಸೇರಿಕೊಳ್ಳುತ್ತಿರುವ ಕುರಿಯನ್ ಅವರ ಸಾಧನೆಗಳು ಯಾವುವು? ಅವರು ಗೂಗಲ್ ಸೇರಿದ್ದು ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

ಯಾರು ಈ ಥಾಮಸ್ ಕುರಿಯನ್?
ಬಹುತೇಕರಿಗೆ ಚಿರಪರಿಚಿತವಾಗಿರುವ ಥಾಮಸ್ ಕುರಿಯನ್ ಅವರು ಪ್ರತಿಷ್ಠಿತ ಒರಾಕಲ್ ಕಂಪೆನಿಯ ದಾರಿಹೋಕ ಎಂದೇ ಹೆಸರಾಗಿದ್ದವರು. 1996ರಲ್ಲಿ ಒರಾಕಲ್ ಕಂಪೆನಿಗೆ ಸೇರಿಕೊಂಡಿದ್ದ ಕುರಿಯನ್ ಅವರು ಸುಮಾರು 22 ವರ್ಷ ಅಲ್ಲಿ ಸೇವೆ ಸಲ್ಲಿಸಿದ್ದರು. ಒರಾಕಲ್ ಕಂಪೆನಿ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ಆಪ್ತ ವಲಯದಲ್ಲೂ ಸಹ ಇವರು ಗುರುತಿಸಿಕೊಂಡಿದ್ದರು.

ನ.26ರಂದು ಗೂಗಲ್ ಸೇರ್ಪಡೆ!
ಪ್ರಸ್ತುತ ಡಯಾನ್ ಗ್ರೀನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿದ್ದು, ಅವರು 2019 ಜನವರಿವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ತದನಂತರ ಈ ಜವಾಬ್ದಾರಿಯನ್ನು ಕುರಿಯನ್ ಹೆಗಲಿಗೆ ಹೊರಿಸಲಾಗಿದೆ. ನ.26ರಂದು ಗೂಗಲ್ ಸೇರಲಿರುವ ಕುರಿಯನ್, 2019 ವರ್ಷಾರಂಭದಲ್ಲಿ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ಕೆಲಸ ಆರಂಭಿಸಲಿದ್ದಾರೆ ಎಂದು ಗೂಗಲ್ ಪ್ರಕಟಿಸಿದೆ.

ಗೂಗಲ್ ಕದ ತಟ್ಟಿದ್ದು ಹೇಗೆ?
ಸುಮಾರು 22 ವರ್ಷಗಳ ಕಾಲ ಒರಾಕಲ್‌ನಲ್ಲಿ ಸೇವೆ ಸಲ್ಲಿಸಿದ್ದ ಕುರಿಯನ್ ಅವರು ಒರಾಕಲ್‌ನ ‘ಕ್ಲೌಡ್' ವಿಭಾಗವನ್ನು ವಿಸ್ತರಿಸಲು ಸಾಕಾಷ್ಟು ಶ್ರಮಪಟ್ಟಿದ್ದರು.ಆದರೆ, ಇತ್ತೀಚಿನ ಉದ್ಯಮ ವಿಸ್ತರಣೆ ವಿಚಾರವಾಗಿ ಎಲಿಸನ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಕಳೆದ ಸಪ್ಟೆಂಬರ್‌ನಲ್ಲಿ ಒರಾಕಲ್‌ಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ ಗೂಗಲ್ ಇವರನ್ನು ಸೆಳೆದುಕೊಂಡಿದೆ.

ಸ್ವಾಗತಿಸಿದ ಸುಂದರ್ ಪಿಚೈ!
ಗೂಗಲ್ ಸಂಸ್ಥೆಗೆ ಕುರಿಯನ್ ನೇಮಕಾತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗೂಗಲ್ ಸಿಇಓ ಸುಂದರ್ ಪಿಚೈ ಅವರು, ಥಾಮಸ್ ಕುರಿಯನ್ ಅವರ ದೂರದೃಷ್ಟಿ, ಗ್ರಾಹಕ ಕೇಂದ್ರಿತ ಸೇವೆ, ಹಾಗೂ ಅಗಾಧ ಅನುಭವ ಗೂಗಲ್‌ನ ಕ್ಲೌಡ್ ವ್ಯವಹಾರಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಗೂಗಲ್‌ಗೆ ಸ್ವಾಗತವನ್ನು ತಿಳಿಸಿರುವುದಾಗಿ ಹೇಳಿದ್ದಾರೆ.

ಕುರಿಯನ್ ಅವರ ಸಾಧನೆಗಳು ಯಾವುವು?
ಸುಮಾರು 22 ವರ್ಷಗಳ ಕಾಲ ಒರಾಕಲ್‌ನಲ್ಲಿ ಸೇವೆ ಸಲ್ಲಿಸಿರುವ ಕುರಿಯನ್ ಅವರು ಸುಮಾರು 13 ವರ್ಷ ಒರಾಕಲ್‌ನ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರಾಗಿದ್ದರು. ನಂತರ ಒರಾಕಲ್‌ನ ಸಾಫ್ಟ್‌ವೇರ್ ಅಭಿವೃದ್ಧಿ ಅಧ್ಯಕ್ಷ ಹುದ್ದೆಗೆ ನೇಮಕವಾಗಿ ಸುಮಾರು 32 ದೇಶಗಳಿಗೆ ವಿಸ್ತರಿಸಿರುವ ಕಂಪೆನಿಯ 35 ಸಾವಿರ ಮಂದಿಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಕುರಿಯನ್ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ!
ಕುರಿಯನ್ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಬಾಲಕರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ನಂತರ ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವ ವಿದ್ಯಾಲಯದಿಂದ ಎಂಬಿಎ ಗಳಿಸಿದ್ದಾರೆ. ಒರಾಕಲ್‌ನ ನಾನಾ ಉತ್ಪನ್ನಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಐಟಿ ಕಂಪನಿಗಳಲ್ಲಿ ಭಾರತೀಯರ ಶಕ್ತಿ!
ಈಗಾಗಲೇ ಹಲವಾರು ಐಟಿ ಕಂಪನಿಗಳಲ್ಲಿ ಭಾರತೀಯರು ಉನ್ನತ ಹುದ್ದೆಗೆ ನಿಯುಕ್ತಿಯಾಗಿದ್ದಾರೆ. ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾಡೆಳ್ಳಾ, ಗೂಗಲ್‌ನ ಉತ್ಪನ್ನ ವಿಭಾಗದ ಮುಖ್ಯಸ್ಥ ಸುಂದರ್ ಪಿಚೈ, ಅಸೆಂಚರ್‌ನ ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಭಾಸ್ಕರ್ ಘೋಷ್ ಮುಂತಾದವರ ಸಾಲಿಗೆ ಈಗ ಕರುನಾಡಿನ ಕಣ್ಮಣಿ ಅವರ ಹೆಸರು ಸೇರಿಕೊಂಡಿದೆ.


Click it and Unblock the Notifications








