'ವಾಟ್ಸ್ಆಪ್'ಗೆ ಆಧಾರ್ ಲಿಂಕ್?..ಸಂದೇಶದ ಮೂಲ ತಿಳಿಯಲು ಕಸರತ್ತು!
ಬಳಕೆದಾರರು ಯಾವುದೇ ಅನುಮತಿಯಿಲ್ಲದೆ ಯಾವುದೇ ಸಂದೇಶಗಳನ್ನು ಮುಕ್ತವಾಗಿ ಫಾರ್ವರ್ಡ್ ಮಾಡುತ್ತಿರುವಾಗ, ನಮ್ಮದು 'ಗೌಪ್ಯತೆ ಬಗ್ಗೆ ಕಾಳಜಿ' ವಹಿಸುತ್ತಿರುವ ಸಂಸ್ಥೆ ಎಂದು ವಾಟ್ಸ್ಆಪ್ ಹೇಳಿಕೊಳ್ಳುವಂತಿಲ್ಲ ಎಂದು ಐಐಟಿ ಮದ್ರಾಸ್ ಪ್ರೊಫೆಸರ್ ಆಗಿರುವ ವಿ.ವಿ. ಕಾಮಕೋಟಿ ಅವರು ಹೇಳಿದ್ದಾರೆ. ಇದರಿಂದ ವಾಟ್ಸ್ಆಪ್ ಸಂದೇಶ ಮೂಲ ಪತ್ತೆ ಹಚ್ಚುವ ಸರ್ಕಾರದ ಎಲ್ಲ ಪ್ರಯತ್ನಗಳನ್ನೂ ವಿರೋಧಿಸುತ್ತಲೇ ಬಂದಿರುವ ವಾಟ್ಸ್ಆಪ್ ಸಂಸ್ಥೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು, ಸಂದೇಶ ಮೂಲ ಪತ್ತೆ ಹಚ್ಚುವ ಸರ್ಕಾರದ ಎಲ್ಲ ಪ್ರಯತ್ನಗಳನ್ನೂ ವಾಟ್ಸ್ಆಪ್ ವಿರೋಧಿಸುತ್ತಲೇ ಬಂದಿದೆ. ಇದು ಎನ್‌ಕ್ರಿಪ್ಟ್ ಆಗಿದೆ, ಸುರಕ್ಷಿತವಾಗಿದೆ ಮತ್ತು ಈ ಕಾರಣದಿಂದ ಅದರ ಮೂಲ ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದು ವಾಟ್ಸ್ಆಪ್ ಹೇಳಿದೆ. ಆದರೆ, ವಾಟ್ಸ್ಆಪ್‌ನ ಎನ್‌ಕ್ರಿಪ್ಷನ್ ಮೇಲೆ ಯಾವುದೇ ತೊಂದರೆಯಾಗದಂತೆ ಮತ್ತು ಅದರ ನೀತಿಗೂ ಧಕ್ಕೆಯಾಗದಂತೆ 'ಮೂಲ' ಎಂಬ ಐಡೆಂಟಿಟಿ ಟ್ಯಾಗ್ ಸೇರಿಸಬಹುದು ಎಂದು ಕಾಮಕೋಟಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಾಟ್ಸ್ಆಪ್ ಸಂದೇಶಗಳನ್ನು ಫಾರ್ವರ್ಡ್ ಮಾಡಿದಾಗ, ಅದರಲ್ಲಿ ಫಾವರ್ಡ್ ಎಂಬ ಟ್ಯಾಗ್ ಕಾಣಿಸುತ್ತದೆ. ಇದೇ ರೀತಿ, ಯಾವುದೇ ಸಂದೇಶವು ಫಾರ್ವರ್ಡ್ ಆಗುವಾಗ ಅದನ್ನು ಸೃಷ್ಟಿಸಿದವರ ಸಂಖ್ಯೆಯೊಂದಿಗೆ Originator ಎಂಬ ಟ್ಯಾಗ್ ಸೇರಿಸುವುದು ಸಾಧ್ಯ ಎಂದು ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ಪ್ರೊಫೆಸರ್ ಅವರು ಸಲಹೆ ನೀಡಿದ್ದಾರೆ. ಇದರಿಂದ ಯಾವುದೇ ಹಂತದಲ್ಲಿಯೂ ವಾಟ್ಸ್ಆಪ್ ಸಂದೇಶದ ಮೂಲವನ್ನು ಕಂಡುಹಿಡಿಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆಧಾರ್ ಜತೆ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬೆಸೆಯಬೇಕೆಂದು ಆಂಟನಿ ಕ್ಲೆಮೆಂಟ್ ರುಬಿನ್ ಎಂಬವರು ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಈ ವೇಳೆ ಸಾಮಾಜಿಕ ಜಾಲ ತಾಣಗಳ ಪ್ರೊಫೈಲ್ ಬಳಸುವುದಕ್ಕೆ ಆಧಾರ್ ಲಿಂಕ್ ಸಂಬಂಧಿಸಿದ ಮೇಲ್ಮನವಿ ಅರ್ಜಿಯೊಂದರ ವಿಚಾರಣೆ ಸಂದರ್ಭ ನ್ಯಾಯಾಲಯವು ಪರಿಶೀಲನೆ ನಡೆಸಿ, ಈ ಕುರಿತು ಮಾಹಿತಿ ಸಂಗ್ರಹಿಸುವಂತೆ ಕೋರ್ಟ್ ಕಾಮಕೋಟಿ ಅವರಿಗೆ ತಿಳಿಸಿದೆ.
ಭಾರತದಲ್ಲಿ ಸುಮಾರು 40 ಕೋಟಿ ಮಂದಿ ವಾಟ್ಸ್ಆಪ್ ಅನ್ನು ಬಳಸುತ್ತಿದ್ದಾರೆ. ಇದು ಅತಿದೊಡ್ಡ ಮೆಸೇಜಿಂಗ್ ಕಿರು ತಂತ್ರಾಂಶವಾಗಿ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಹಾಗಾಗಿ, ಸಂದೇಶಗಳ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ವಾಟ್ಸ್ಆಪ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ವಾದ. ಆದರೆ, ವಾಟ್ಸ್ಆಪ್ ತನ್ನ ಗ್ರಾಹಕರ ಸಂದೇಶಗಳನ್ನು ಪತ್ತೆ ಮಮಾಡುವುದು ಅವರಿಗೆ ಮಾಡುವ ದ್ರೋಹ ಎಂದು ಹೇಳಿಕೊಳ್ಳುತ್ತಿದೆ. ಹಾಗಾಗಿ, ಈ ಕಥೆ ಎಲ್ಲಿ ಮುಗಿಯುತ್ತದೆ ಎಂಬುದೇ ಕುತೂಹಲ.!


Click it and Unblock the Notifications








