ಪೋರ್ನ್‌ಹಬ್ ವೀಕ್ಷಕರಿಗೆ ಬಿಗ್ ಶಾಕ್: ಎಚ್ಚರಿಕೆ ವಹಿಸುವ ಅಗತ್ಯವಿದೆ!
ಅಶ್ಲೀಲ ತಾಣಗಳಿಗೆ ಹೆಸರಾಗಿರುವ ಪೋರ್ನ್‌ಹಬ್ (Pornhub) ಸಂಬಂಧಿಸಿದ ಭಾರೀ ಸೈಬರ್ ಭದ್ರತಾ ಲೋಪ ಎದುರಾಗಿರುವ ಆತಂಕವು ಜಾಗತಿಕ ಮಟ್ಟದಲ್ಲಿ ಎದುರಾಗಿದೆ. ಹ್ಯಾಕರ್ ಗುಂಪೊಂದು ಪೋರ್ನ್‌ಹಬ್ ಪ್ರೀಮಿಯಂ ಬಳಕೆದಾರರ ಅತಿಸೂಕ್ಷ್ಮ ಮಾಹಿತಿಯನ್ನು ಕಳವು ಮಾಡಿಕೊಂಡಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಪೋರ್ನ್‌ಹಬ್ ಪ್ರೀಮಿಯಂ ಸೇವೆಗೆ ಸಂಬಂಧಿಸಿದ 200 ಮಿಲಿಯನ್‌ಗಿಂತ ಹೆಚ್ಚು ಬಳಕೆದಾರ ಮಾಹಿತಿ ಹೊರಬಿದ್ದಿರುವ ಸಾಧ್ಯತೆ ಇದ್ದು, ಡಿಜಿಟಲ್ ಗೌಪ್ಯತೆ, ಆನ್‌ಲೈನ್ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ಹೌದು, ರಾಯಿಟರ್ಸ್ ಸೇರಿದಂತೆ ಇತ್ತೀಚಿನ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, 'ಶೈನಿಹಂಟರ್ಸ್' (ShinyHunters) ಎಂಬ ಕುಖ್ಯಾತ ಸೈಬರ್ ಅಪರಾಧಿ ಗುಂಪು ಈ ದಾಳಿಯ ಹೊಣೆ ಹೊತ್ತಿದೆ. ಈ ಗುಂಪು ತನ್ನ ಬಳಿ ಪೋರ್ನ್‌ಹಬ್ ಪ್ರೀಮಿಯಂ ಸೇವೆಗೆ ಸಂಬಂಧಿಸಿದ 200 ಮಿಲಿಯನ್‌ಗಿಂತ ಹೆಚ್ಚು ಬಳಕೆದಾರ ದಾಖಲೆಗಳಿವೆ ಎಂದು ಹೇಳಿಕೊಂಡಿದೆ. ಹ್ಯಾಕರ್‌ಗಳು ಮಾಧ್ಯಮ ಸಂಸ್ಥೆಗಳಿಗೆ ಹಂಚಿಕೊಂಡಿರುವ ಡೇಟಾದ ಮಾದರಿಯನ್ನು ಪರಿಶೀಲಿಸಿದಾಗ, ಅದು ನಿಜವಾದ ಬಳಕೆದಾರರ ಮಾಹಿತಿಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ದೃಢಪಟ್ಟಿದೆ.
ಇದೀಗ ಲಭ್ಯವಿರುವ ಮಾಹಿತಿಯಂತೆ, ಸುಮಾರು 94 ಜಿಬಿ ಗಾತ್ರದ ಈ ಡೇಟಾ ಸಂಗ್ರಹದಲ್ಲಿ, ಪೋರ್ನ್‌ಹಬ್ ಬಳಕೆದಾರರ ಇಮೇಲ್ ವಿಳಾಸ, ಸ್ಥಳ ಮಾಹಿತಿ, ಹುಡುಕಾಟ ಪದಗಳು, ವೀಕ್ಷಿಸಿದ ವೀಡಿಯೊಗಳ ಲಿಂಕ್‌ಗಳು ಹಾಗೂ ಚಟುವಟಿಕೆಯ ಸಮಯದ ವಿವರಗಳು ಸೇರಿವೆ. ಬ್ಯಾಂಕ್ ಕಾರ್ಡ್ ವಿವರಗಳು ಅಥವಾ ಪಾಸ್‌ವರ್ಡ್‌ಗಳಂತಹ ಹಣಕಾಸು ಮಾಹಿತಿ ಸೇರಿಲ್ಲವೆಂದು ಹೇಳಲಾಗಿದೆಯಾದರೂ, ವೈಯಕ್ತಿಕ ವೀಕ್ಷಣಾ ಅಭ್ಯಾಸಗಳು ಹೊರಬಿದ್ದರೆ ಗಂಭೀರ ಗೌಪ್ಯತಾ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇದು ಕೂಡ ಆತಂಕಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳಾಗಿವೆ.

ಈ ಡೇಟಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿರಲು ಹ್ಯಾಕರ್ ಗುಂಪು ಬಿಟ್‌ಕಾಯಿನ್‌ನಲ್ಲಿ ಪರಿಹಾರ ಹಣ ನೀಡುವಂತೆ ಬೇಡಿಕೆ ಇಟ್ಟಿದೆ ಎಂದು ವರದಿಯಾಗಿದೆ. ಈ ನಡುವೆ, ಪೋರ್ನ್‌ಹಬ್‌ನ ಮಾತೃಸಂಸ್ಥೆಯಾಗಿರುವ ಕೆನಡಾದ ಖಾಸಗಿ ಇಕ್ವಿಟಿ ಸಂಸ್ಥೆ 'ಎಥಿಕಲ್ ಕ್ಯಾಪಿಟಲ್ ಪಾರ್ಟ್ನರ್ಸ್' ಸೈಬರ್ ಭದ್ರತಾ ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದೆ. ಆದರೆ ಕಂಪನಿಯ ಆಂತರಿಕ ವ್ಯವಸ್ಥೆಗಳು ನೇರವಾಗಿ ಹ್ಯಾಕ್ ಆಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಅವರ ಹೇಳಿಕೆಯಂತೆ, ಈ ಡೇಟಾ ಸೋರಿಕೆ ಮೂರನೇ ಪಕ್ಷದ ಅನಾಲಿಟಿಕ್ಸ್ ಸೇವೆಯೊಂದಕ್ಕೆ ಸಂಬಂಧಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಆರೋಪ ಎದುರಿಸುತ್ತಿರುವ ಅನಾಲಿಟಿಕ್ಸ್ ಸಂಸ್ಥೆ ಮಿಕ್ಸ್‌ಪ್ಯಾನೆಲ್ (Mixpanel) ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದೆ. ತನ್ನ ವ್ಯವಸ್ಥೆಗಳಲ್ಲಿ ನಡೆದ ಪರಿಶೀಲನೆಯ ವೇಳೆ ಪೋರ್ನ್‌ಹಬ್‌ಗೆ ಸಂಬಂಧಿಸಿದ ಯಾವುದೇ ಡೇಟಾಕ್ಕೆ ಅನಧಿಕೃತ ಪ್ರವೇಶ ಕಂಡುಬಂದಿಲ್ಲ ಎಂದು ಸಂಸ್ಥೆ ಹೇಳಿದೆ. ದಾಖಲೆಗಳ ಪ್ರಕಾರ, ಈ ಡೇಟಾವನ್ನು 2023ರಲ್ಲಿ ಪೋರ್ನ್‌ಹಬ್ ಮಾತೃಸಂಸ್ಥೆಯ ಉದ್ಯೋಗಿಯ ಖಾತೆಯಿಂದ ಕಾನೂನಾತ್ಮಕವಾಗಿ ಪ್ರವೇಶಿಸಲಾಗಿದೆ ಎಂಬ ಮಾಹಿತಿಯನ್ನೂ ಮಿಕ್ಸ್‌ಪ್ಯಾನೆಲ್ ಉಲ್ಲೇಖಿಸಿದೆ.
ಗಮನಾರ್ಹವಾಗಿ, ಶೈನಿಹಂಟರ್ಸ್ ಎಂಬ ಹ್ಯಾಕರ್ ಗುಂಪು 2020ರಿಂದಲೇ ಹಲವು ದೊಡ್ಡ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಗಳನ್ನು ನಡೆಸಿದ ಆರೋಪಗಳನ್ನು ಎದುರಿಸುತ್ತಿದೆ. ಟಿಕೆಟ್‌ಮಾಸ್ಟರ್, ದೂರಸಂಪರ್ಕ ಸಂಸ್ಥೆಗಳು ಹಾಗೂ ಕ್ಲೌಡ್ ಆಧಾರಿತ ಕಂಪನಿಗಳ ಡೇಟಾ ಸೋರಿಕೆ ಪ್ರಕರಣಗಳಲ್ಲಿ ಈ ಗುಂಪಿನ ಹೆಸರು ಕೇಳಿಬಂದಿದೆ. ಈ ಹಿನ್ನೆಲೆ, ಇತ್ತೀಚಿನ ಬೆಳವಣಿಗೆಯೂ ಗಂಭೀರ ಸೈಬರ್ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಒಟ್ಟಾರೆಯಾಗಿ, ಈ ಘಟನೆ ಆನ್‌ಲೈನ್ ಸೇವೆಗಳನ್ನು ಬಳಸುವ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯ ಭದ್ರತೆ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಹಾಗಾಗಿ, ಇಂತಹ ಸೈಟ್‌ಗಳಿಂದ ದೂರವಿರುವುದು ಒಳಿತು.


Click it and Unblock the Notifications








