ಮಾನವ ಸಹಿತ ಬಾಹ್ಯಾಕಾಶ ಯಾನ..! ಭಾರತ VS ಚೀನಾ ಪ್ರೇರಿತ ಪಾಕಿಸ್ತಾನ..!
ಭಾರತದೊಂದಿಗೆ ಸದಾ ಒಂದಿಲ್ಲೊಂದು ತಂಟೆ ತೆಗೆಯುವ ನೆರೆ ರಾಷ್ಟ್ರ ಪಾಕಿಸ್ತಾನ ಈಗ ಭಾರತಕ್ಕೆ ಎದುರಾಗಿ ಮತ್ತೊಂದು ಯೋಜನೆಯನ್ನುಕೈಗೆತ್ತಿಕೊಂಡಿದೆ. ಈ ಮೂಲಕ ಭಾರತದ ಎದುರು ತಾನು ದೊಡ್ಡವನೆಂದು ಬೀಗುವ ಉತ್ಸಾಹದಲ್ಲಿ ಪಾಕ್ ಇದೆ. ಹೌದು, ಭಾರತದ ಬಹು ಅಪೇಕ್ಷಿತ ಮಾನವ ಸಹಿತ ಗಗನಯಾನಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿರುವ ಮಧ್ಯೆ ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ಇದೇ ಯೋಜನೆಗೆ ಕೈಹಾಕಿದೆ.

ಡ್ರ್ಯಾಗನ್ ರಾಷ್ಟ್ರ ಚೀನಾದ ಸಹಯೊಗದೊಂದಿಗೆ 2022ರ ಹೊತ್ತಿಗೆ ಮೊದಲ ಮಾನವ ಸಹಿತ ಗಗನಯಾನ ಯೋಜನೆ ಕೈಗೊಳ್ಳುತ್ತಿರುವ ಕುರಿತು ಪಾಕಿಸ್ತಾನ ಘೋಷಿಸಿದ್ದು, ರಣರಂಗದ ಕದನ ಗಗನಯಾನದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಮೊದಲು ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ರಾಷ್ಟ್ರ ಯಾವುದಾಗಲಿದೆ ಎಂಬುದಕ್ಕೆ ಸದ್ದಿಲ್ಲದೇ ಸ್ಪರ್ಧೆ ಏರ್ಪಟ್ಟಿದೆ.

ಮಾಹಿತಿ ಸಚಿವರಿಂದ ಘೋಷಣೆ
ಪಾಕಿಸ್ತಾನದ ಮಾಹಿತಿ ಸಚಿವ ಫಹಾದ್ ಚೌಧರಿ ಗುರುವಾರ ಮೊದಲ ಮಾನವಸಹಿತ ಗಗನಯಾನದ ಕುರಿತು ಘೋಷಣೆ ಮಾಡಿದ್ದಾರೆ. ಭಾರತವೂ 2022ಕ್ಕೆ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆ ಹಾಕಿಕೊಂಡಿರುವುದನ್ನು ನೋಡಿಯೇ ಪಾಕಿಸ್ತಾನ ಈ ಯೋಜನೆಯನ್ನು ಘೋಷಿಸಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಹಲವು ಬಗೆಯ ಅಭಿಪ್ರಾಯಗಳು ಹರಿದಾಡುತ್ತಿವೆ.

ಚೀನಾ ಸಹಕಾರ
ಪಾಕಿಸ್ತಾನದ ಈ ಮಹತ್ವದ ಯೋಜನೆಗೆ ಚೀನಾ ಸಹಕಾರವಿದ್ದು, ಎರಡು ಸಹ ಭಾರತಕ್ಕೆ ಒಂದು ಮಟ್ಟಿಗೆ ಶತ್ರು ರಾಷ್ಟ್ರಗಳಾಗಿರುವುದು ಗಮನಿಸಬೇಕಾದ ಅಂಶ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಆಯೋಜಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಮಾನವ ಸಹಿತ ಗಗನಯಾನ ಯೋಜನೆ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 3ಕ್ಕೆ ಇಮ್ರಾನ್ ಖಾನ್ ಬೀಜಿಂಗ್‌ಗೆ ಭೇಟಿ ನೀಡುತ್ತಿದ್ದು, ಮಹತ್ವದ ಯೋಜನೆಗೆ ಚೀನಾದ ಸಹಕಾರದ ಕುರಿತು ಮಾತನಾಡಲಿದ್ದಾರೆ ಎನ್ನಲಾಗಿದೆ.

ಡ್ರ್ಯಾಗನ್ ಜತೆ ಒಪ್ಪಂದ ಫಿಕ್ಸ್
ಈಗಾಗಲೇ ಪಾಕಿಸ್ತಾನ ಬಾಹ್ಯಾಕಾಶ ಸಂಸ್ಥೆ ಮತ್ತು ಚೀನಾದ ಕಂಪನಿ ಜತೆ ಯೋಜನೆ ಕುರಿತ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫಹಾದ್ ಚೌಧರಿ ತಿಳಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿನ್ನಡೆ ಉಂಟು ಮಾಡಲು ಎರಡು ಶತ್ರು ರಾಷ್ಟ್ರಗಳ ಸೇರಿ ಕಾರ್ಯನಿರ್ವಹಿಸುತ್ತಿರುವುದು ಹೊರಬಿದ್ದಿದೆ.

ಸ್ವಾತಂತ್ರ್ಯ ಸಂಭ್ರಮದಲ್ಲಿ ನಮೋ ಘೋಷಣೆ
ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ 4ನೇ ರಾಷ್ಟ್ರ ಭಾರತವಾಗಲಿದೆ. 2022ಕ್ಕೆ ಮಾನವನನ್ನು ಕಳುಹಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಸ್ತಾಪ ಮಾಡಿ ಗಗನಯಾನ ಯೋಜನೆಯನ್ನು ಘೋಷಿಸಿದ್ದರು. ಈಗ ಅದಕ್ಕೆ ವಿರುದ್ಧವಾಗಿ ಪಾಕಿಸ್ತಾನ ಕೂಡ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಚಾಲನೆ ನೀಡಿದೆ.

ಜಿದ್ದಿಗೆ ಬಿದ್ದಿರುವ ಚೀನಾ
2003ರಲ್ಲಿಯೇ ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಚೀನಾ ಕೈಗೊಂಡಿತ್ತು. ಈ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ವಿಶ್ವದ 3ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಈಗ ತನ್ನ ನಂತರದ ಸ್ಥಾನವನ್ನು ಭಾರತಕ್ಕೆ ಬಿಟ್ಟುಕೊಡದ ಚೀನಾ ಪಾಕಿಸ್ತಾನವನ್ನು ಭಾರತಕ್ಕಿಂತ ಹೆಚ್ಚು ಶ್ರೇಷ್ಟ ಎಂದು ಬಿಂಬಿಸಲು ಪಾಕಿಸ್ತಾನದ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಬೆಂಬಲ ನೀಡಿ ತನ್ನ ಜಿದ್ದನ್ನು ಮುಂದುವರೆಸಿದೆ.

ಪಾಕ್‌ಗೆ ಚೀನಾ ಕರ್ಮಭೂಮಿ
ಇತ್ತೀಚೆಗೆ ತಾನೇ ಪಾಕಿಸ್ತಾನ ತನ್ನ ಸ್ವನಿರ್ಮಿತ ಉಪಗ್ರಹಗಳನ್ನು ಚೀನಾದ ರಾಕೆಟ್ 'ಚೈನೀಸ್ ಲಾಂಗ್ ಮಾರ್ಚ್ (LM-2C) ಮೂಲಕ ಉಡಾವಣೆ ಮಾಡಿತ್ತು. ಚೀನಾದ ಗೋಬಿ ಮರುಭೂಮಿಯಲ್ಲಿರುವ ಉಡಾವಣಾ ಕೇಂದ್ರದಿಂದ ಪಾಕ್ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು.

ಟ್ವಿಟ್ಟರ್‌ನಲ್ಲಿ ಟ್ರೋಲ್
ಪಾಕಿಸ್ತಾನದ ಈ ನಿರ್ಧಾರ ಟ್ವಿಟ್ಟರ್‌ನಲ್ಲಿ ಸಖತ್ ಟ್ರೋಲ್ ಆಗಿದ್ದು, ಬಹಳಷ್ಟು ಜನರ ಟೀಕೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಗುರಿಯಾಗಿದೆ. @harrydelhi ಎನ್ನುವವರು "ಪಾಕಿಸ್ತಾನದ ಜನ ಸ್ವತ: ಇಮ್ರಾನ್ ಖಾನ್‌ರನ್ನೇ ಬಾಹ್ಯಾಕಾಶಕ್ಕೆ ಕಳುಹಿಸಬೇಕು. ಏಕೆಂದರೆ 2022ರ ಹೊತ್ತಿಗೆ ಪಾಕಿಸ್ತಾನದಲದಲಿ ಒಂದಿಷ್ಟು ನ್ಯೂಕ್ಲಿಯರ್ ವಾರ್‌ಹೆಡ್‌ಗಳು ಬಿಟ್ಟರೆ ಮತ್ತೇನು ಇರುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ @asiopenup1 ಎಂಬಾತ "2022ಕ್ಕೆ ಮೊದಲ ಮಾನವಸಹಿತ ಗಗನಯಾನ ಮಾಡಲು ಪಾಕ್ ಯೋಜನೆ ಹಾಕಿಕೊಂಡಿದ್ದು, ಸೌದಿ ಅರೇಬಿಯಾ ಅಥವಾ ಚೀನಾದ ಸಹಾಯವನ್ನು ಇಮ್ರಾನ್ ಖಾನ್ ಬೇಡುತ್ತಿದ್ದಾರೆಯೇ..? ಪಾಕಿಸ್ತಾನ ಆರ್ಥಿಕವಾಗಿ ಬಲಗೊಳ್ಳುವ ತನಕ ಕಾದು ಆಮೇಲೇ ಗಗನಯಾನಕ್ಕೆ ಮಾನವನನ್ನು ಕಳುಹಿಸಬಹುದಲ್ಲವೇ" ಎಂದಿದ್ದಾರೆ,.


Click it and Unblock the Notifications








