'Pe' ಹೆಸರಿಗಾಗಿ ಫೈಟ್: ಕೊನೆಗೂ PhonePe ಮತ್ತು BharatPe ನಡುವಿನ ಕಿತ್ತಾಟ ಅಂತ್ಯ
ನಾವೆಲ್ಲರೂ ಫೋನ್‌ಪೇ(PhonePe) ಮತ್ತು ಭಾರತ್‌ಪೇ (BharatPe) ಬಳಸಿರುತ್ತೇವೆ. ಈ ಎರಡೂ ಕಂಪನಿಗಳ ಹೆಸರಿನ ಕೊನೆಯಲ್ಲಿ 'ಪೇ' ಎಂಬ ಅಕ್ಷರವಿದೆ. ಬಹುತೇಕರು ಈ ಎರಡೂ ಕಂಪನಿಗಳು ಒಂದೇ ಸಂಸ್ಥೆಗೆ ಸೇರಿವೆ ಅಂತ ಭಾವಿಸಿರುತ್ತೀರಿ. ನಿಮ್ಮ ಊಹೆ ಖಂಡಿತವಾಗಿಯೂ ತಪ್ಪು. 'Pe' ಎಂಬ ಹೆಸರಿಗಾಗಿಯೇ ಎರಡೂ ಕಂಪನಿಗಳು ಫೈಟ್ ಮಾಡಿರುವ ವಿಚಾರ ನಿಮಗೆ ಗೊತ್ತೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಫೋನ್‌ಪೇ ಮತ್ತು ಭಾರತ್‌ಪೇ ಸಂಸ್ಥೆಗಳು ತಮ್ಮ ಕಂಪನಿ ಮತ್ತು ಉತ್ಪನ್ನಗಳ ಟ್ರೇಡ್‌ಮಾರ್ಕ್‌ಗಳಲ್ಲಿರುವ 'ಪೇ' ಹೆಸರಿಗಾಗಿ ನಡೆಸುತ್ತಿದ್ದ ಸಂಘರ್ಷವನ್ನು ಇತ್ಯರ್ಥ ಮಾಡಿಕೊಂಡಿವೆ. 2015ರಲ್ಲಿ ಫೋನ್‌ಪೇ ಪ್ರಾರಂಭವಾದರೆ, ಭಾರತ್ ಪೇ 2018ರಲ್ಲಿ ಆರಂಭವಾಗಿದೆ. 2018ರಿಂದಲೂ 'ಪೇ' ಹೆಸರಿಗಾಗಿ ಫೋನ್‌ಪೇ ಗ್ರೂಪ್ ಸಂಸ್ಥೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ, ಎರಡೂ ಕಂಪನಿಗಳು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಂಡಿವೆ.

ಈ ಸಂಬಂಧ ಭಾರತ್‌ಪೇ ಮತ್ತು ಫೋನ್‌ಪೇ ಗ್ರೂಪ್ ಸಂಸ್ಥೆಗಳು ಜಂಟಿಯಾಗಿ ಹೇಳಿಕೆ ನೀಡಿವೆ. 'Pe' ಹೆಸರಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಎರಡೂ ಕಂಪನಿಯ ನಡುವಿನ ವ್ಯಾಜ್ಯವನ್ನು ಪರಿಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣಗಳು ಅಂತ್ಯಗೊಳ್ಳಲಿವೆ ಎಂದು ಸ್ಪಷ್ಟಪಡಿಸಿವೆ. ಈ ಮೂಲಕ ಹಲವು ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ಕೊನೆಗೂ ಅಂತ್ಯಕಂಡಿದೆ.
ಭಾರತ್‌ಪೇ ಛೇರ್ಮನ್ ರಜನೀಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಯಮಕ್ಕೆ ಇದು ಸಕಾರಾತ್ಮಕ ಬೆಳವಣಿಗೆ ಎನಿಸುತ್ತದೆ. ಎರಡೂ ಕಂಪನಿಗಳ ಆಡಳಿತ ಮಂಡಳಿ (ಮ್ಯಾನೇಜ್ಮೆಂಟ್) ತೋರಿದ ಪಕ್ವತೆ ಮತ್ತು ವೃತ್ತಿಪರತೆಯನ್ನು ನಾನು ಮೆಚ್ಚುತ್ತೇನೆ. ಎಲ್ಲಾ ಕಾನೂನು ತೊಡಕನ್ನು ನಿವಾರಿಸಿಕೊಂಡು ಒಳ್ಳೆಯ ಡಿಜಿಟಲ್ ಪೇಮೆಂಟ್ ಇಕೋಸಿಸ್ಟಂ ನಿರ್ಮಿಸಲು, ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಲಿವೆ ಎಂದು ರಜನೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
'Pe' ಫೈಟ್ ಪ್ರಕರಣದ ಹಿನ್ನೆಲೆ ಏನು?
ಫೋನ್‌ಪೇ ಮತ್ತು ಭಾರತ್‌ಪೇ ಭಾರತದ ಎರಡು ಪ್ರಮುಖ ಹಣಕಾಸು ತಂತ್ರಜ್ಞಾನ ಕಂಪನಿ. ಎರಡೂ ಕಂಪನಿಗಳ ಹೆಸರಿನಲ್ಲಿರುವ ಸಾಮ್ಯತೆ ನಿಮ್ಮ ಗಮನಕ್ಕೆ ಬಂದಿರುತ್ತದೆ. ಹೆಸರಿನ ಕೊನೆಯಲ್ಲಿರುವ 'ಪೇ' ಅಕ್ಷರ ಇದೆ. ಹೀಗಾಗಿ, ಈ ಕಂಪನಿಗಳು ಒಂದೇ ಗ್ರೂಪ್‌ಗೆ ಸೇರಿವೆಯೇ? ಎಂಬ ಅನುಮಾನ ಹುಟ್ಟುಹಾಕುತ್ತದೆ. ಆದರೆ, 'ಪೇ' ಹೆಸರಿಗಾಗಿ ಎರಡೂ ಕಂಪನಿಗಳು ದಾಯಾದಿಗಳಂತೆ ಕೋರ್ಟ್ ಮೆಟ್ಟಿಲೇರಿದ್ದವು. ನ್ಯಾಯಾಲಯದಲ್ಲಿ ಈವರೆಗೆ ಪರಿಹಾರ ಸಿಕ್ಕಿಲ್ಲ. ಇದೀಗ, ಎರಡೂ ಕಂಪನಿಗಳು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡಿವೆ.
ಒಪ್ಪಂದದ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟಿಲ್ಲ
ಫೋನ್‌ಪೇ ಮತ್ತು ಭಾರತ್‌ಪೇ ಕಂಪನಿಗಳು ಟ್ರೇಡ್‌ಮಾರ್ಕ್ ನೊಂದಣಿಗೆ ವಿರೋಧಿಸಿ ಹಾಕಿದ್ದ ಎಲ್ಲಾ ಕೇಸ್‌ಗಳನ್ನು ಹಿಂಪಡೆಯಲು ನಿರ್ಧರಿಸಿವೆ. ದೆಹಲಿ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಅಂಶಗಳನ್ನು ಪಾಲಿಸಲು ಎರಡೂ ಸಂಸ್ಥೆಗಳು ಬದ್ಧವಾಗಿವೆ. ಆದರೆ, ಎರಡು ಕಂಪನಿಗಳ ನಡುವಿನ ಈ ಶೀತಲ ಸಮರ ಪರಿಹಾರಕ್ಕೆ ಯಾವ ರೀತಿಯ ಒಪ್ಪಂದ ಆಗಿದೆ ಎನ್ನುವುದು ಬಹಿರಂಗ ಪಡಿಸಿಲ್ಲ. ಎರಡೂ ಕಂಪನಿಗಳು ತಮ್ಮ ಟ್ರೇಡ್‌ಮಾರ್ಕ್‌ಗಳ ನೊಂದಣಿ ಮಾಡಿಸುವುದನ್ನು ಮುಂದುವರಿಸಲಿವೆ ಎಂದು ತಿಳಿದುಬಂದಿದೆ.
ಫೋನ್‌ಪೇ 2015ರಲ್ಲಿ ಸ್ಥಾಪನೆಯಾಗಿದ್ದು, ಬಳಿಕ ಅಮೆರಿಕದ ವಾಲ್ಮಾರ್ಟ್ ಎಂಬ ರೀಟೇಲ್ ವ್ಯಾಪಾರ ಮಳಿಗೆ ಕಂಪನಿಯು ಫೋನ್‌ಪೇಯನ್ನು ಖರೀದಿಸಿದೆ. ಫೋನ್‌ಪೇ ಈಗ ದೇಶದ ನಂಬರ್ ಒನ್ ಯುಪಿಐ ಸರ್ವಿಸ್ ಪ್ರೊವೈಡರ್ ಆಗಿದೆ. ಇನ್ನೂ, ಭಾರತ್‌ಪೇ ಸಂಸ್ಥೆಯನ್ನು ಅಶ್ನೀರ್ ಗ್ರೋವರ್ ಅವರು 2018ರಲ್ಲಿ ಆರಂಭಿಸಿದ್ದಾರೆ.


Click it and Unblock the Notifications








