PhonePe: ಫೋನ್‌ಪೇ ಬಳಕೆದಾರರೇ ಈ ಸುದ್ದಿ ಗಮನಿಸಿ! ಇಲ್ಲದಿದ್ದರೆ ಪಶ್ಚಾತಾಪ ಗ್ಯಾರಂಟಿ!
ಫೋನ್‌ಪೇ ಮೂಲಕ ಹಣ ಕಳುಹಿಸಿದ ನಂತರ ಕ್ಯಾಶ್‌ಬ್ಯಾಕ್ ಬಂದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ. ಬಹುತೇಕ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ವಿವಿಧ ರೀತಿಯ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತಲೇ ಬಂದಿದೆ. ಆದರೆ ಕ್ಯಾಶ್‌ಬ್ಯಾಕ್ ಪಡೆಯುವ ಆಸೆಯಲ್ಲಿ ಸ್ವಲ್ಪ ಯಾಮಾರಿದರೆ ನಿಮಗೆ ಆಗುವ ನಷ್ಟ ಅಷ್ಟಿಷ್ಟಲ್ಲ.
ಹೌದು, ಫೋನ್‌ಪೇ (PhonePe) ಕ್ಯಾಶ್‌ಬ್ಯಾಕ್ ಹೆಸರಿನಲ್ಲಿ ಸ್ಕ್ಯಾಮ್ ನಡೆಸುತ್ತಿರುವ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿವೆ. ಅದರಲ್ಲೂ ದೆಹಲಿಯ ಪೊಲೀಸ್ ASI ಅವರಿಗೆ ವಂಚಕರು ಫೋನ್‌ಪೇ ಕ್ಯಾಶ್‌ಬ್ಯಾಕ್ ಹೆಸರಿನಲ್ಲಿ 2 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಹಾಗಾದ್ರೆ ಫೋನ್‌ಪೇ ಕ್ಯಾಶ್‌ಬ್ಯಾಕ್ ಸ್ಕ್ಯಾಮ್ ಹೇಗೆ ನಡೆಯುತ್ತಿದೆ. ಫೋನ್‌ಪೇ ಬಳಕೆದಾರರು ಎಚ್ಚರಿಕೆ ವಹಿಸಬೇಕಿರುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ ಬಳಕೆದಾರರಿಗೆ ವಂಚನೆ ಮಾಡುವ ಹೊಸ ದಾರಿಯನ್ನು ಇದೀಗ ಸ್ಕ್ಯಾಮರ್‌ಗಳು ಕಂಡುಕೊಂಡಿದ್ದಾರೆ. ಫೋನ್‌ಪೇ ಮೂಲಕ ಹಣ ಕಳುಹಿಸಿದ ತಕ್ಷಣವೇ ವಂಚಕರು ನಿಮಗೆ ಕ್ಯಾಶ್‌ಬ್ಯಾಕ್ ಬಂದಿದೆ ಇದಕ್ಕಾಗಿ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅಂತಾ ಹೇಳಿ ವಂಚಿಸುತ್ತಿರುವ ಪ್ರಕರಣ ದೆಹಲಿಯಲ್ಲಿ ವರದಿಯಾಗಿದೆ. ಇಲ್ಲಿ ವಂಚಕರಿಂದ ಮೋಸ ಹೋಗಿರುವುದು ಸಾಮಾನ್ಯ ಪ್ರಜೆಯಲ್ಲ. ಬದಲಿಗೆ ದೆಹಲಿ ಪೊಲೀಸ್ ASI ಅನ್ನೊದು ಇಂಟ್ರೆಸ್ಟಿಂಗ್ ವಿಚಾರ.
ದೆಹಲಿ ಪೊಲೀಸ್ ASI ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ವಂಚಕರು ಫೋನ್‌ಪೇ ಕ್ಯಾಶ್‌ಬ್ಯಾಕ್ ಹೆಸರಿನಲ್ಲಿ ಬರೋಬ್ಬರಿ 2 ಲಕ್ಷ ರೂ. ವಂಚನೆ ಮಾಡಿದ್ದಾರೆ. ಸದ್ಯ ವಂಚಕರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ವಂಚಕರಿಂದ ಹಣ ವಸೂಲಿ ಮಾಡಿ ಸಂತ್ರಸ್ತ ವ್ಯಕ್ತಿಗೆ ಹಿಂದಿರುಗಿಸಲಾಗಿದೆ. ಇಲ್ಲಿ ವಂಚಕರು ದೆಹಲಿ ಪೊಲೀಸ್ ಅಧಿಕಾರಿಗೆ ನೀವು ಫೋನ್‌ಪೇ ಬಳಸಿ ಮಾಡಿದ ವಹಿವಾಟಿನ ಮೇಲೆ ಕ್ಯಾಶ್‌ಬ್ಯಾಕ್ ಗೆದ್ದಿದ್ದೀರಿ. ಕ್ಯಾಶ್‌ಬ್ಯಾಕ್ ಪಡೆಯಲು ನಾವು ಕಳುಹಿಸಿರುವ ಲಿಂಕ್ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದ್ದಾರೆ.
ಕ್ಯಾಶ್‌ಬ್ಯಾಕ್ ಆಫರ್ ಕರೆ ಸ್ವೀಕರಿಸಿದ ಪೊಲೀಸ್ ಅಧಿಕಾರಿ ಅವರ ವಹಿವಾಟುಗಳ ಬಗ್ಗೆ ಒಮ್ಮೆ ಚೆಕ್ ಮಾಡಿದ್ದಾರೆ. ವಂಚಕರು ಹೇಳಿದ ದಿನಾಂಕದಂದು ತಾವು ವಹಿವಾಟು ನಡೆಸಿರುವುದು ಪಕ್ಕಾ ಆಗಿರುವುದರಿಂದ ಕ್ಯಾಶ್‌ಬ್ಯಾಕ್ ಬಂದಿರುವುದು ಸತ್ಯವೆಂದು ನಂಬಿ ವಂಚಕರ ಮಾತನ್ನು ಅನುಸರಿಸಿದ್ದಾರೆ. ಅದರಂತೆ ವಂಕರು ಹೇಳಿದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಅಪ್ಲಿಕೇಶನ್ ಡೌನ್‌ಲೋಡ್ ಆಗಿ ಅಧಿಕಾರಿ ಲಾಗಿನ್ ಆದ ಕೂಡಲೇ ವಂಚಕರು ಸ್ಮಾರ್ಟ್‌ಫೋನ್ ಮೇಲೆ ನಿಯಂತ್ರಣ ತೆಗೆದುಕೊಂಡಿದ್ದು, ಅಧಿಕಾರಿಯ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ನಿಂದ 2,12,000 ರೂ. ಹಣವನ್ನು ವಂಚಕರು ಎಗರಿಸಿದ್ದಾರೆ.
ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ಕೂಡಲೇ ಎಚ್ಚತ್ತ ದೆಹಲಿ ಪೊಲೀಸ್ ASI ತ್ವರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ತ್ವರಿತಗತಿಯಲ್ಲಿ ವಂಚಕರನ್ನು ಪತ್ತೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ದಂಪತಿಗಳು ಸೇರಿದಂತೆ ಒಟ್ಟು ನಾಲ್ಕು ವ್ಯಕ್ತಿಗಳ ಗುಂಪನ್ನು ಬಂಧಿಸಲಾಗಿದೆ. ಇದರಲ್ಲಿ ವಂಚಕರನ್ನು ಕುರ್ಬನ್ ಅಲಿ (29 ವರ್ಷ), ಸನಾ ಪರ್ವೀನ್ (27 ವರ್ಷ), ಸೌವಿಕ್ ಪಂಜಾ (27 ವರ್ಷ), ಮತ್ತು ಅಜಯ್ ಜಾನಾ (27 ವರ್ಷ) ಎಂದು ಗುರುತಿಸಲಾಗಿದೆ.

ಈ ವಂಚಕರು ಐದು ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಡಿಜಿಟಲ್ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಸದ್ಯ ವಂಚಕರು ಎಗರಿಸಿದ್ದ ಹಣವನ್ನು ದೆಹಲಿ ಪೊಲೀಸ್ ಅಧಿಕಾರಿಗೆ ಹಿಂತಿರುಗಿಸಲಾಗಿದೆ. ಅಲ್ಲದೆ ವಂಚಕರಿಗೆ ಸೇರಿದ ಚೆಕ್‌ಬುಕ್‌ಗಳು, ಎಟಿಎಂ ಕಾರ್ಡ್‌ಗಳು ಮತ್ತು ಪಾಸ್‌ಬುಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಈ ಮೂಲಕ ಇವರು ಇನ್ನು ಯಾರಿಗಾದರೂ ಮೋಸ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಫೋನ್‌ಪೇ ಸೇರಿದಂತೆ ಹಲವು ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡುತ್ತಾ ಬಂದಿವೆ. ಈ ಆಫರ್‌ಗಳು ನೀವು ವಹಿವಾಟು ನಡೆಸಿದ ತಕ್ಷಣವೇ ಅಪ್ಲಿಕೇಶನ್‌ನಲ್ಲಿ ಡಿಸ್‌ಪ್ಲೇ ಆಗಲಿದೆ. ಆದರೆ ಕ್ಯಾಶ್‌ಬ್ಯಾಕ್ ಹೆಸರಿನಲ್ಲಿ ನಿಮಗೆ ಯಾವುದೇ ಕರೆ ಹಾಗೂ ಎಸ್‌ಎಂಸ್ ಬರುವುದಿಲ್ಲ ಅನ್ನೊದನ್ನ ನಾವು ನಿವೆಲ್ಲಾ ಗಮನಿಸಬೇಕಿದೆ. ಹಾಗೊಂದು ವೇಳೆ ಕ್ಯಾಶ್‌ಬ್ಯಾಕ್ ಹೆಸರಿನಲ್ಲಿ ನಿಮಗೆ ಯಾವುದೇ ಕರೆ ಬಂದರು ಅವುಗಳನ್ನು ನಿರ್ಲ್ಯಕ್ಷಿಸುವುದು ಒಳ್ಳೆಯದು.


Click it and Unblock the Notifications








