₹23,400 ಮೌಲ್ಯದ AI Pro ಯೋಜನೆ: ಮೂರು Pixel 10 ಫೋನ್‌ಗಳೊಂದಿಗೆ ಉಚಿತ!
ಟೆಕ್ ದೈತ್ಯ ಗೂಗಲ್ ಬುಧವಾರ ಆಯೋಜಿಸಿದ್ದ ವಾರ್ಷಿಕ 'ಮೇಡ್ ಬೈ ಗೂಗಲ್' ಕಾರ್ಯಕ್ರಮದಲ್ಲಿ, ಗೂಗಲ್ ತನ್ನ ಬಹುನಿರೀಕ್ಷಿತ Pixel 10 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಸರಣಿಯು ನಾಲ್ಕು ವಿಭಿನ್ನ ಮಾದರಿಗಳನ್ನು ಒಳಗೊಂಡಿದೆ: ಸ್ಟ್ಯಾಂಡರ್ಡ್ Pixel 10, Pixel 10 pro, Pixel 10 pro XL ಮತ್ತು Pixel 10 pro Fold. ಈ ಹೊಸ ಸ್ಮಾರ್ಟ್‌ಫೋನ್‌ಗಳು ಕೇವಲ ಸುಧಾರಿತ ಹಾರ್ಡ್‌ವೇರ್‌ಗಾಗಿ ಮಾತ್ರವಲ್ಲದೆ, ಗೂಗಲ್‌ನ ಹೊಸ AI (ಕೃತಕ ಬುದ್ಧಿಮತ್ತೆ) ಸಾಮರ್ಥ್ಯಗಳೊಂದಿಗೆ ಸಂಯೋಜನೆಗೊಂಡಿರುವುದು ಗಮನಾರ್ಹವಾಗಿದೆ.
ಹೌದು, ಗೂಗಲ್ ಹೊಸ Pixel 10 ಸರಣಿಯಲ್ಲಿ ತನ್ನ AI pro ಯೋಜನೆಯನ್ನು ಉಚಿತವಾಗಿ ಸೇರಿಸಿದೆ. Pixel 10 pro, Pixel 10 pro XL ಮತ್ತು Pixel 10 pro Fold ಮೂರು ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ವರ್ಷದ AI pro ಯೋಜನೆಗೆ ಉಚಿತ ಚಂದಾದಾರಿಕೆ ಲಭ್ಯವಾಗಲಿದೆ. ಆದರೆ, ಸ್ಟ್ಯಾಂಡರ್ಡ್ Pixel 10 ಮಾದರಿಗೆ ಈ ಕೊಡುಗೆ ಸಿಗುವುದಿಲ್ಲ ಎಂದು ತಿಳಿಸಿದೆ. ಗೂಗಲ್‌ನ ಈ AI ಚಂದಾದಾರಿಕೆಯು ಮೊತ್ತ ಮೊದಲ ಬಾರಿಗೆ, ಅದರ ಪ್ರಮುಖ ಹಾರ್ಡ್‌ವೇರ್ ಉತ್ಪನ್ನದ ಜೊತೆಗೆ ಪ್ಯಾಕ್ ಮಾಡಲಾಗಿದೆ ಎಂಬುದನ್ನು ನಾವು ಗಮನಿಸಬಹುದು.

ಪ್ರಸ್ತುತ ಭಾರತದಲ್ಲಿ Pixel 10 pro ಮತ್ತು Pixel 10 pro XL ಖರೀದಿದಾರರಿಗೆ ಈ ಕೊಡುಗೆ ಲಭ್ಯವಿದ್ದು, ದೇಶದಲ್ಲಿ ಇನ್ನೂ Pixel 10 pro Fold ಬಿಡುಗಡೆಯಾಗಿಲ್ಲ. ಹಾಗಾಗಿ, ಬಿಡುಗಡೆಯ ನಂತರ ಈ ಕೊಡುಗೆಯು ಲಭ್ಯವಾಗಲಿದೆ. ಗೂಗಲ್ ಪ್ರಕಾರ, ಈ ಒಂದು ವರ್ಷದ AI pro ಚಂದಾದಾರಿಕೆಯ ಮೌಲ್ಯವು ಸುಮಾರು ₹23,400 ಆಗಿದ್ದು, ಉಚಿತ ಅವಧಿ ಮುಗಿದ ನಂತರ ಬಳಕೆದಾರರು ಸೇವೆಯನ್ನು ಮುಂದುವರಿಸಲು ಬಯಸಿದರೆ ಚಂದಾದಾರಿಕೆ ಶುಲ್ಕ ಪಾವತಿಸಬೇಕಾಗುತ್ತದೆ. ಅಂದರೆ, ಒಂದು ವರ್ಷ ಮಾತ್ರ ಈ ಉಚಿತ ಕೊಡುಗೆಯು ಫೋನ್‌ನೊಂದಿಗೆ ಲಭ್ಯವಾಗಲಿದೆ.
ಏನಿದು ಗೂಗಲ್ AI pro ಯೋಜನೆ?, ಏನೆಲ್ಲಾ ಲಾಭಗಳು?
ಗೂಗಲ್‌ನ ಈ AI pro ಯೋಜನೆಯು ಗೂಗಲ್‌ನ ಅತ್ಯಾಧುನಿಕ AI ಟೂಲ್‌ಗಳ ಒಗ್ಗೂಡುವಿಕೆಯಾಗಿದೆ. ಈ ಯೋಜನೆಯಲ್ಲಿ ಜೆಮಿನಿ 2.5 pro ಮತ್ತು ಡೀಪ್ ರಿಸರ್ಚ್ ಸಾಮರ್ಥ್ಯಗಳಿಗೆ ಪ್ರವೇಶ ಸಿಗುತ್ತದೆ. ಇದು ಪಠ್ಯ, ಚಿತ್ರ ಮತ್ತು ವೀಡಿಯೋಗಳನ್ನು ರಚಿಸುವಂತಹ ವಿವಿಧ ಕಾರ್ಯಗಳಿಗೆ ಉಪಯುಕ್ತವಾಗಿದೆ. ವೀಡಿಯೋ ಉತ್ಪಾದನೆಗೆ Veo 3 ಮಾದರಿ ಮತ್ತು Veo 2 ಆಧಾರಿತ ಇಮೇಜ್-ಟು-ವೀಡಿಯೋ ಪರಿಕರಗಳನ್ನು ಹೆಚ್ಚಿನ ಮಿತಿಗಳೊಂದಿಗೆ ಬಳಸಲು ಅವಕಾಶವಿದೆ. ಜೊತೆಗೆ, ಬಳಕೆದಾರರಿಗೆ ಪಠ್ಯ, ಚಿತ್ರ ಅಥವಾ ವೀಡಿಯೋ ಉತ್ಪಾದನೆಗೆ ಪ್ರತಿ ತಿಂಗಳು 1,000 AI ಕ್ರೆಡಿಟ್‌ಗಳು ಸಿಗುತ್ತವೆ.

ಇದಲ್ಲದೆ, ಈ ಯೋಜನೆಯು NoteBookLM ನಲ್ಲಿ ಹೆಚ್ಚಿನ ಸಂಗ್ರಹಣೆ ಸ್ಥಳಾವಕಾಶವನ್ನು ನೀಡುತ್ತದೆ. ಇದು ಸಾಮಾನ್ಯ ಬಳಕೆದಾರರಿಗಿಂತ ಐದು ಪಟ್ಟು ಹೆಚ್ಚು ಆಡಿಯೋ ಅವಲೋಕನಗಳು ಮತ್ತು ಟಿಪ್ಪಣಿಗಳನ್ನು ಸೇರಿಸಲು ಅವಕಾಶ ಮಾಡಿಕೊಡುತ್ತದೆ. ಗೂಗಲ್ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳಲ್ಲಿ ಜೆಮಿನಿ ಎಐನ ತಡೆರಹಿತ ಏಕೀಕರಣವನ್ನು ಇದು ಒಳಗೊಂಡಿದೆ. ಇದರೊಂದಿಗೆ, ಗೂಗಲ್ ಡ್ರೈವ್, ಜಿಮೇಲ್ ಮತ್ತು ಫೋಟೋಗಳಂತಹ ಪ್ರಮುಖ ಗೂಗಲ್ ಅಪ್ಲಿಕೇಶನ್‌ಗಳಿಗಾಗಿ 2TB ಕ್ಲೌಡ್ ಸಂಗ್ರಹಣೆಯೂ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ಗೂಗಲ್‌ನ ಇತ್ತೀಚಿನ ಎಲ್ಲಾ AI ಸೇವೆಗಳು ಸಿಗುತ್ತವೆ.
ಗೂಗಲ್‌ನ ಈ AI pro ಯೋಜನೆಯು ಕೇವಲ ಒಂದು ಪ್ರಚಾರದ ಆಕರ್ಷಣೆಯಲ್ಲ, ಬದಲಾಗಿ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಎಲ್ಲಾ ವೈಶಿಷ್ಟ್ಯಗಳು ಬಳಕೆದಾರರಿಗೆ ಕೇವಲ ಒಂದು ಸ್ಮಾರ್ಟ್‌ಫೋನ್‌ನಿಂದಲೇ ತಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡಲಿವೆ ಎಂದು ಹೇಳಬಹುದು. ಭಾರತದಲ್ಲಿ Pixel 10 ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಪೂರ್ವ-ಆರ್ಡರ್‌ಗೆ ಲಭ್ಯವಿದ್ದು, ಇದರ ಹೊಸ ತಂತ್ರಜ್ಞಾನಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ನಮ್ಮ ಹಿಂದಿನ ಲೇಖನಗಳಲ್ಲಿ Pixel 10 ಸರಣಿ ಫೋನ್‌ಗಳ ಕುರಿತು ನಿಮಗೆ ಸಂಪೂರ್ಣ ಮಾಹಿತಿ ದೊರೆಯಲಿದೆ.


Click it and Unblock the Notifications








