ಗೂಗಲ್ 'ಪಿಕ್ಸೆಲ್ 9a' ಖರೀದಿಸಬೇಕು ಎಂದುಕೊಂಡಿದ್ದೀರಾ?..ನಿಮಗಿದು ಕಹಿ ಸುದ್ದಿ!
ಟೆಕ್ ದೈತ್ಯ ಗೂಗಲ್ ತನ್ನ ಇತ್ತೀಚಿನ ಕೈಗೆಟುಕುವ "a" ಸರಣಿಯ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ 'ಗೂಗಲ್ ಪಿಕ್ಸೆಲ್ 9a' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿ ಮೊಬೈಲ್ ಪ್ರಿಯರ ಗಮನ ಸೆಳೆದಿರುವ ಬಹುನಿರೀಕ್ಷಿತ 'ಗೂಗಲ್ ಪಿಕ್ಸೆಲ್ 9a' ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಶೀಘ್ರವೇ ಲಭ್ಯವಾಗುವ ನಿರೀಕ್ಷೆ ಇತ್ತು. ಆದರೆ ಗೂಗಲ್ ಪಿಕ್ಸೆಲ್ 9 ಗ್ರಾಹಕರಿಗೆ ತಲುಪಲು ಮತ್ತಷ್ಟು ವಿಳಂಬವಾಗಲಿದೆ ಎಂದು ವರದಿಯಾಗಿದೆ. ಹೌದು, ಕೆಲವು ಪಿಕ್ಸೆಲ್ 9a ಸಾಧನಗಳಲ್ಲಿ ಕಂಡುಬಂದ ಸಮಸ್ಯೆಗಳ ಕಾರಣದಿಂದಾಗಿ, 'ಗೂಗಲ್ ಪಿಕ್ಸೆಲ್ 9a' ಸ್ಮಾರ್ಟ್‌ಫೋನ್‌ಗಳ ವಿತರಣೆಯಲ್ಲಿ ತಡವಾಗಲಿದೆ ಎಂದು ಗೂಗಲ್ ಕಂಪನಿಯು ತಿಳಿಸಿದೆ. "ನಾವು ಪ್ರಸ್ತುತ ಕಡಿಮೆ ಸಂಖ್ಯೆಯ ಪಿಕ್ಸೆಲ್ 9a ಸಾಧನಗಳಲ್ಲಿ ಗುಣಮಟ್ಟದ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ಗೂಗಲ್ ಹೇಳಿದೆ. ಆದರೆ, ಈ ಸಮಸ್ಯೆ ಯಾವುದು ಎಂಬುದರ ಕುರಿತು ಕಂಪನಿಯು ಯಾವುದೇ ವಿವರ ನೀಡಿಲ್ಲ.

ಗೂಗಲ್‌ನ ಪಿಕ್ಸೆಲ್ 9 ಸರಣಿಯ ಉನ್ನತ ಮಾದರಿ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಹೊಸ ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಿ ಕಾಣುತ್ತಿದೆ. ಇದರಿಂದಾಗಿ ಹಲವಾರು ಗ್ರಾಹಕರು ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ, ಗೂಗಲ್ ತನ್ನ ಪಿಕ್ಸೆಲ್ 9a ಸ್ಮಾರ್ಟ್‌ಫೋನಿನ ಮಾರಾಟ ದಿನಾಂಕವನ್ನು ಏಪ್ರಿಲ್‌ಗೆ ವಿಳಂಬಗೊಳಿಸಿದೆ. ಸಮಾಧಾನದ ಸುದ್ದಿ ಏನೆಂದರೆ, ಈ ಸಮಸ್ಯೆಯು ಕಡಿಮೆ ಸಂಖ್ಯೆಯ ಯೂನಿಟ್‌ಗಳಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ, ಮತ್ತು ಮುಂದಿನ ಕೆಲವು ವಾರಗಳಲ್ಲಿ ಗೂಗಲ್ ಅವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. ಪಿಕ್ಸೆಲ್ 9a ಮಾರಾಟಕ್ಕಾಗಿ ಕಂಪನಿಯ ಹೊಸ ಏಪ್ರಿಲ್ ಟೈಮ್‌ಲೈನ್ ಇನ್ನೂ ನಿರ್ದಿಷ್ಟ ದಿನಾಂಕವನ್ನು ಹೊಂದಿಲ್ಲ, ಆದರೆ ಅದು ಶೀಘ್ರದಲ್ಲೇ ಸ್ಪಷ್ಟವಾಗಲಿದೆ.
ಗೂಗಲ್ ಕಂಪೆನಿಯ ಬಹುನಿರೀಕ್ಷಿತ 'ಪಿಕ್ಸೆಲ್ 9a' ಸ್ಮಾರ್ಟ್‌ಫೋನ್ ಭಾರತದಲ್ಲಿ 8GB + 128GB. 256GB ಮಾದರಿಯಲ್ಲಿ 49,999 ರೂ.ಗಳಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿರುವ 6.3-ಇಂಚಿನ ಆಕ್ಟುವಾ pOLED ಡಿಸ್‌ಪ್ಲೇ, ಟೆನ್ಸರ್ G4 ಚಿಪ್‌ಸೆಟ್ ಜೊತೆಗೆ ಉತ್ತಮ Android ಅನುಭವವನ್ನು ನೀಡುತ್ತದೆ ಮತ್ತು Pixel 9 ಶ್ರೇಣಿಯಲ್ಲಿ ಅತಿದೊಡ್ಡ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಹೀಗಿವೆ.
ಡಿಸ್ಪ್ಲೇ
ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ 6.3 ಇಂಚಿನ pOLED ಡಿಸ್ಪ್ಲೇ ಹೊಂದಿದ್ದು, 2,424 × 1,080 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ದರ, ಎಚ್‌ಡಿಆರ್ ಬೆಂಬಲ, 1800 ನಿಟ್ಸ್ ಎಚ್‌ಡಿಆರ್ ಮತ್ತು 2,700 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಇದರಲ್ಲಿ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯು ಇದೆ.
ಪ್ರೊಸೆಸರ್ ಸಾಮರ್ಥ್ಯ
ಗೂಗಲ್ ಪಿಕ್ಸೆಲ್ 9a ಫೋನ್ ಗೂಗಲ್ ಟೆನ್ಸರ್ G4 ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಪಿಕ್ಸೆಲ್ 9 ಸರಣಿಯಲ್ಲಿಯೂ ಲಭ್ಯವಿದೆ. ಈ ಪ್ರೊಸೆಸರ್ ಟೈಟಾನ್ M2 ಭದ್ರತಾ ಪ್ರೊಸೆಸರ್ ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಆಂಡ್ರಾಯ್ಡ್ 15 ಓಎಸ್ ಅನ್ನು ಬಳಸುತ್ತದೆ. ಇದು ಏಳು ವರ್ಷಗಳ ಓಎಸ್, ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ನವೀಕರಣಗಳನ್ನು ಒದಗಿಸುತ್ತದೆ.
ಕ್ಯಾಮೆರಾ ಸೆಟಪ್
ಗೂಗಲ್ ಪಿಕ್ಸೆಲ್ 9a ಮೊಬೈಲ್ OIS ಬೆಂಬಲದೊಂದಿಗೆ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ 8x ವರೆಗೆ ಸೂಪರ್ ರೆಸಲ್ಯೂಷನ್ ಜೂಮ್, 0.5 ನಲ್ಲಿ ಆಪ್ಟಿಕಲ್ ಗುಣಮಟ್ಟ ಮತ್ತು 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಗೂಗಲ್ ಪಿಕ್ಸೆಲ್ 9a 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ ಫೋನ್ IP68 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಿತವಾಗಿದೆ. ಇದರಲ್ಲಿ ಸ್ಟೀರಿಯೊ ಸ್ಪೀಕರ್‌ಗಳು, ಕಾರು ಅಪಘಾತ ಪತ್ತೆ ವೈಶಿಷ್ಟ್ಯ ಮತ್ತು ವೈ-ಫೈ 6E, ಎನ್‌ಎಫ್‌ಸಿ ಮತ್ತು eSIM ಬೆಂಬಲವಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಗೂಗಲ್ ಪಿಕ್ಸೆಲ್ 9a 8GB RAM + 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಮೂಲ ಮಾದರಿಯ ಬೆಲೆ 49,999 ರೂ.ನಿಂದ ಆರಂಭವಾಗುತ್ತದೆ. ಇದು ಅಬ್ಸಿಡಿಯನ್, ಪಿಂಗಾಣಿ ಮತ್ತು ಐರಿಸ್ ಬಣ್ಣಗಳಲ್ಲಿ ದೊರಕುತ್ತದೆ. ಈ ಮೊಬೈಲ್ ಏಪ್ರಿಲ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಕಂಪನಿಯು ಖರೀದಿಯ ಮೇಲೆ ಕೆಲವು ಆಫರ್‌ಗಳನ್ನು ಘೋಷಿಸಿದ್ದು, ನೀವು 3,000 ರೂ.ಗಳ ಕ್ಯಾಶ್‌ಬ್ಯಾಕ್ (ಸೀಮಿತ ಅವಧಿ) ಮತ್ತು 24 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು. ಇದು ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್ ಸೇರಿದಂತೆ ಆಯ್ದ ಬ್ಯಾಂಕುಗಳಿಗೆ ಲಭ್ಯವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಯಬಹುದು.


Click it and Unblock the Notifications








