'ಪಬ್‌ಜಿ' ಮೊಬೈಲ್ ಚಾಲೆಂಜ್ ಗೆಲ್ಲುವ ತಂಡಕ್ಕೆ 2.9 ಕೋಟಿ ರೂ.ಬಹುಮಾನ!!
ಕಳೆದ ಕೆಲವು ತಿಂಗಳುಗಳಿಂದ ಮೊಬೈಲ್ ಗೇಮಿಂಗ್ ಪ್ರಪಂಚದಲ್ಲಿ ಭಾರೀ ಹೈಪ್ ಸೃಷ್ಟಿಸಿರುವ ಪಬ್‌ಜಿ (PUBG) ಪ್ರಿಯರಿಗೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಇತ್ತೀಚಿಗಷ್ಟೇ 50 ಲಕ್ಷದ ಬಂಪರ್ ಬಹುಮಾನದ ಚಾಲೆಂಜ್ ಅನ್ನು ಘೋಷಿಸಿದ್ದ ಪಬ್‌ಜಿ (PUBG) ಸಂಸ್ಥೆ ಈಗ ಮತ್ತೊಂದು ಬಹುದೊಡ್ಡ ಬಹುಮಾನದ ಚಾಲೆಂಜ್ ಅನ್ನು ಸ್ವೀಕರಿಸಲು ಆಟಗಾರರನ್ನು ಆಹ್ವಾನಿಸಿದೆ.
ಹೌದು, ಗೇಮ್ನಲ್ಲಿ ಎದುರಿಗೆ ಬರುವ ಶತ್ರುಗಳನ್ನು ಹೊಡೆದುರುಳಿಸುತ್ತಾ ಎದುರಿದ್ದರವನ್ನೇ ಮರೆಯುವಂತೆ ಪಬ್ಜಿಯಲ್ಲಿ ಮುಳುಗಿರುವವರಿಗಾಗಿ ಟೆನ್ಸೆಂಟ್ ಗೇಮ್ಸ್ ಮತ್ತು ಪಬ್‌ಜಿ ಕಾರ್ಪೋರೇಷನ್ ಸಹಯೋಗದಲ್ಲಿ 'ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್' ಅನ್ನು ಆಯೋಜಿಸಲಾಗಿದೆ. ಈ ಗೇಮ್ ಫೆಸ್ಟಿವಲ್ ವಿಶ್ವದ ಮೊದಲ ಇ-ಸ್ಪೋರ್ಟ್ಸ್ ಫೆಸ್ಟಿವಲ್ ಎಂಬ ಖ್ಯಾತಿಗಳಿಸಿದೆ.

ಗೇಮ್ ಪ್ರಿಯರ ಇತ್ತೀಚಿನ ಅತ್ಯಂತ ನೆಚ್ಚಿನ ಆಟವಾಗಿರುವ ಪಬ್‌ಜಿ (PUBG) ಜನಪ್ರಿಯತೆಯನ್ನ ಗಮನದಲ್ಲಿಟ್ಟುಕೊಂಡು ಪಬ್‌ಜಿ ಆಟಗಾರಿಗಾಗಿ ಹೊಸ ವೇದಿಕೆಯೊಂದು ಸೃಷ್ಟಿಯಾಗಿದೆ. ಇಲ್ಲಿ ನೀವು ಪಬ್‌ಜಿ ಆಡುವ ಮೂಲಕ ಕೋಟಿಗಳನ್ನು ಗಳಿಸಬಹುದಾಗಿದೆ. ಹಾಗಾದರೆ, ಪಬ್‌ಜಿ ಆಯೋಜಿಸಿರುವ ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್' ಹೇಗಿದೆ ಎಂದು ಮುಂದೆ ಓದಿ ತಿಳಿಯಿರಿ.

ವಿಶ್ವದ ಮೊದಲ ಇ-ಸ್ಪೋರ್ಟ್ಸ್ ಫೆಸ್ಟಿವಲ್!
ಟೆನ್ಸೆಂಟ್ ಗೇಮ್ಸ್ ಮತ್ತು ಪಬ್‌ಜಿ ಕಾರ್ಪೋರೇಷನ್ ಸಹಯೋಗದಲ್ಲಿ ದುಬೈನಲ್ಲಿ 'ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್' ಅನ್ನು ಏರ್ಪಡಿಸಲಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿರುವ ಈ ಗೇಮ್ ಫೆಸ್ಟಿವಲ್ ವಿಶ್ವದ ಮೊದಲ ಇ-ಸ್ಪೋರ್ಟ್ಸ್ ಫೆಸ್ಟಿವಲ್ ಎಂಬ ಖ್ಯಾತಿಗಳಿಸಿದೆ. ಇಲ್ಲಿ ಗೆಲ್ಲುವವರಿಗೆ ಕೋಟ್ಯಾಂತರ ರೂ.ಬಹುಮಾನವನ್ನು ನೀಡಲಾಗುತ್ತಿದೆ.

ಬಹುಮಾನ ಮೊತ್ತ 4 ಲಕ್ಷ ಡಾಲರ್
'ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್' ಸ್ವೀಕರಿಸಿದ ತಂಡಗಳಲ್ಲಿ ಗೆದ್ದ 20 ತಂಡಗಳು ದುಬೈನಲ್ಲಿ ನಡೆಯಲಿರುವ ಫೈನಲ್ ಗೇಮ್ನಲ್ಲಿ ಭಾಗವಹಿಸಲಿವೆ. ಇಲ್ಲಿ ಎಲ್ಲರನ್ನು ಹೊಡೆದುರುಳಿಸಿದ ತಂಡಕ್ಕೆ 4 ಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 2 ಕೋಟಿ 91 ಲಕ್ಷವನ್ನು 'ಪಬ್‌ಜಿ ಸ್ಟಾರ್ ಚಾಲೆಂಜ್' ತಂಡ ಗೆಲ್ಲಬಹುದು.

ಚಾಲೆಂಜ್ ಮಾಡಬಹುದು!
ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್ನಲ್ಲಿ ನೀವೂ ಕೂಡ ಪಾಲ್ಗೊಳ್ಳಬಹುದು. ಇದಕ್ಕಾಗಿ ನಿಮಗೆ ಈ ಗೇಮಿಂಗ್ ಆಪ್ನಲ್ಲಿ 1 ಸಾವಿರ ಫ್ಯಾನ್ಸ್ ಅಥವಾ ಫಾಲೋವರ್ಸ್ ಇರಬೇಕಾಗುತ್ತದೆ. ಅದೇ ರೀತಿ ನಿಮ್ಮ ತಂಡದಲ್ಲಿ ಕನಿಷ್ಠ 3 ಮಂದಿ ಆಟಗಾರರು ಕಾಣಿಸಿಕೊಳ್ಳಬೇಕು. ಪಬ್‌ಜಿಯ ನೀಡಿರುವ ಆನ್‌ಲೈನ್ ವೆಬ್‌ಸೈಟ್ ಮೂಲಕ ನೀವು ನೊಂದಾಯಿಸಿಕೊಳ್ಳಲು ಅವಕಾಶವಿದೆ.

ಈಗಾಗಲೇ 20 ಸಾವಿರ ತಂಡಗಳು!
'ಪಬ್‌ಜಿ ಮೊಬೈಲ್ ಸ್ಟಾರ್ ಚಾಲೆಂಜ್' ಸ್ವೀಕರಿಸಲು ಈಗಾಗಲೇ ಭಾರತ ಸೇರಿದಂತೆ, ಯುರೋಪ್, ಏಷ್ಯಾ, ಉತ್ತರ ಅಮೆರಿಕ, ದಕ್ಷಿಣ ಆಫ್ರಿಕಾ, ಜಪಾನ್, ಕೊರಿಯಾ ಮತ್ತು ಚೀನಾ ದೇಶಗಳ ಲ್ಲಿನ ಸುಮಾರು 20 ಸಾವಿರ ತಂಡಗಳು ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದೆ. ನೀವು ಕೂಡ ಪಬ್‌ಜಿ ಪ್ರಿಯರಾಗಿದ್ದರೆ ಗೇಮ್‌ಗೆ ಸೇರಲು ರಿಜಿಸ್ಟರ್ ಮಾಡಿಕೊಳ್ಳಬಹುದು.

ಏನಿದು ಪಬ್‌ಜಿ ಗೇಮ್?
ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಹೆಸರು ಈ 'ಪಬ್‌ಜಿ'. ಶಸ್ತ್ರಾಸ್ತ್ರಗಳನ್ನು ಬಳಸಿ ಲೈವ್‌ನಲ್ಲಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚಕಾರಿ ಗೇಮ್ ಇದಾಗಿದೆ. ಅದ್ಭುತ ಗ್ರಾಫಿಕ್ಸ್, ಫೀಚರ್ಸ್ ಮತ್ತು ಸೌಂಡ್ ಎಫೆಕ್ಟ್ನಿಂದ ಅತಿ ಕಡಿಮೆ ಸಮಯದಲ್ಲಿ ವಿಶ್ವದ ಗೇಮ್ ಪ್ರಿಯರನ್ನು ಸೆಳೆದುಕೊಳ್ಳಲು ಯಶಸ್ವಿಯಾದ ಗೇಮ್ ಇದಾಗಿದೆ.


Click it and Unblock the Notifications