ಇಂದಿನಿಂದ 'ಅಂಚೆ ಪೇಮೆಂಟ್ಸ್' ಬ್ಯಾಂಕ್ ಆರಂಭ!..ತಿಳಿಯಲೇಬೇಕಾದ 8 ಅಂಶಗಳು!!
ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿರುವ ಜನತೆ ಮತ್ತು ಅಲ್ಪ ಪ್ರಮಾಣದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಹೊಂದಿರುವ ವರ್ಗಕ್ಕೆ ಪೂರ್ಣ ಪ್ರಮಾಣದ ಸೇವೆಯನ್ನು ಒದಗಿಸಲು ಬರುತ್ತಿರುವ ಅಂಚೆ ಪಾವತಿ ಬ್ಯಾಂಕ್ ಇಂದಿನಿಂದ ಶುರುವಾಗಿದೆ. 'ಮನೆ ಮನೆಗೂ ತಮ್ಮ ಬ್ಯಾಂಕ್' ಎಂಬ ಧ್ಯೇಯದಿಂದ ಆರಂಭವಾಗುತ್ತಿರುವ ಅಂಚೆ ಪಾವತಿ ಬ್ಯಾಂಕ್ ಅನ್ನು ಪ್ರಧಾನಮಂತ್ರಿ ಮೋದಿಯವರು ಇಂದು ಉದ್ಘಾಟಿಸಲಿದ್ದಾರೆ.
ಆರ್‌ಬಿಐ ಅನುಮೋದತ ಕೆಲವೇ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ ಕೂಡ ಒಂದಾಗಿದ್ದು ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಕನಿಷ್ಠ ಒಂದೊಂದು ಅಂಚೆ ಇಲಾಖೆಯ ಪೇಮೆಂಟ್ಸ್ ಶಾಖೆ ಇರಲಿದೆ. ಉಳಿತಾಯ ಖಾತೆಯಲ್ಲಿನ ಹಣವನ್ನು ನೇರವಾಗಿ ಮನೆ ಬಾಗಿಲಿಗೆ ತಂದುಕೊಡುವ ಹಾಗೂ ಮನೆ ಬಾಗಿಲಿಗೆ ಬಂದು ಹಣ ಪಡೆದು ಅದನ್ನು ಖಾತೆಗೆ ಜಮಾ ಮಾಡುವ ಅಂಚೆ ಪಾವತಿ ಬ್ಯಾಂಕ್ ಸೇವೆ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್ ಶಾಖೆಗಳು ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಒದಗಿಸಲಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಬಾಗಲಿಗೆ ಡಿಜಿಟಲ್ ಪಾವತಿ ಸೇವೆ ಲಭ್ಯವಾಗಲಿದೆ. ಪೇಮೆಂಟ್ಸ್ ಬ್ಯಾಂಕ್‌ಗಳು ರೈತರು, ಕಾರ್ಮಿಕರು, ರಾಜ್ಯ ಸರಕಾರದ ನೇರ ಫಲಾನುಭವಿಗಳು, ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಐಪಿಪಿಬಿ ಹೆಚ್ಚು ಅನುಕೂಲ ಒದಗಿಸಲಿದೆ. ಹಾಗಾದರೆ, 'ಐಪಿಪಿಬಿ' ಪೇಮೆಂಟ್ಸ್ ಬ್ಯಾಂಕ್ ಬಳಕೆ ಹೇಗೆ? ಗ್ರಾಹಕರಿಗೆ ಏನೆಲ್ಲಾ ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.


ಐಪಿಪಿಬಿ ಪೇಮೆಂಟ್ಸ್ ಬ್ಯಾಂಕ್!
ಗ್ರಾಹಕರು ಡೆಪಾಸಿಟ್ ಮಾಡಿದ ಹಣಕ್ಕೆ ಬಡ್ಡಿಹಣವನ್ನು ನಿಡುವ ಪೇಮೆಂಟ್ ಬ್ಯಾಂಕ್ ಆನ್‌ಲೈನ್ ಸೇವೆಗಳನ್ನು ನಿಡುತ್ತದೆ. ಆರ್‌ಬಿಐ ಅನುಮೋದತ ಕೆಲವೇ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ ಕೂಡ ಒಂದಾಗಿದ್ದು, ಜನರಿಂದ ಹಣವನ್ನು ಸ್ವೀಕರಿಸಬಹುದಾದ ಮತ್ತು ಬಡ್ಡಿಯನ್ನು ನಿಡಬೇಕಾದ ವ್ಯವಹಾರ ಇದಾಗಿದೆ.

ಇದರ ವೈಶಿಷ್ಟ್ಯವೇನು?
ಪಾಸ್‌ಬುಕ್ ಬೇಕಿಲ್ಲ. ಖಾತೆಯ ಸಂಖ್ಯೆನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಗ್ರಾಹಕರಿಗೆ 'ಕ್ಯೂಆರ್ ಕಾರ್ಡ್' ನೀಡಲಾಗುತ್ತದೆ. ಇದರಲ್ಲೇ ಮಾಹಿತಿ ಇರುತ್ತದೆ. ಕ್ಯೂಆರ್ ಕಾರ್ಡ್ ಕಳೆದು ಹೋದರೂ ಆಧಾರ್ ಸಂಖ್ಯೆ, ಮೊಬೈಲ್ ನಂಬರ್‌ನಿಂದ ಖಾತೆ ಅಥವಾ ವ್ಯವಹಾರ ಮುಂದುವರೆಸಿಬಹುದು.

ಖಾತೆ ತೆರೆಯುವುದು ಹೇಗೆ?
ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಸಾಕು, ಯಾವುದೇ ಅರ್ಜಿ ಫಾರಂಗಳ ಅಗತ್ಯವಿಲ್ಲ. ಕಾಗದ ರಹಿತ ಖಾತೆ ತೆರೆಯುವ ಮತ್ತು ವ್ಯವಹಾರ ಮಾಡುವ ಬ್ಯಾಂಕ್ ಇದಾಗಿದ್ದು, ಆಗಿದೆ. ಕನಿಷ್ಠ ಠೇವಣಿ ಅಗತ್ಯವಿಲ್ಲ. ನಮ್ಮ ಪ್ರತಿ ವ್ಯವಹಾರಕ್ಕೂ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಇರಲಿದೆ.

ಮನೆಮನೆಗೆ ಡಿಜಿಟಲ್ ಪಾವತಿ!
ದೇಶದ ಎಲ್ಲಾ 1.55 ಲಕ್ಷ ಅಂಚೆ ಕಚೇರಿಗಳು, 650 ಪೇಮೆಂಟ್ಸ್ ಬ್ಯಾಂಕ್ ಶಾಖೆಗಳು ತೆರೆಯುತ್ತವೆ. ಸುಮಾರು 3 ಲಕ್ಷ ಪೋಸ್ಟ್ ಮ್ಯಾನ್‌ಗಳು ಮನೆ ಬಾಗಿಲಿಗೇ ಬಂದು ಖಾತೆ ತೆರೆಯಲು ಸಹರಿಸಲಿದ್ದಾರೆ. ಪೋಸ್ಟ್‌ಮನ್ ಮತ್ತು ಗ್ರಾಮೀಣ ಅಂಚೆ ಸೇವಕರಿಗೆ ಪೇಮೆಂಟ್ಸ್ ಸೇವೆ ಒದಗಿಸುವ ಸಾಧನ ನೀಡಲಿದ್ದು, ಮನೆಬಾಗಲಿಗೆ ಡಿಜಿಟಲ್ ಪಾವತಿ ಸೇವೆ ಲಭ್ಯವಾಗಲಿದೆ.

1 ಲಕ್ಷ ರೂ.ವರೆಗೂ ಡೆಪಾಸಿಟ್!
ಯಾವುದೇ ಪೇಮೆಂಟ್ ಬ್ಯಾಂಕ್‌ಗಳಲ್ಲಿ 1 ಲಕ್ಷ ರೂಪಾಯಿಗಳ ವರೆಗೂ ಗ್ರಾಹಕರು ಹಣವನ್ನು ಡೆಪಾಸಿಟ್ ಮಾಡಿಡಬಹುದಾಗಿದೆ. ಗ್ರಾಹಕರು ಡೆಪಾಸಿಟ್ ಮಾಡಿದ ಹಣವನ್ನು ಯಾವುದೇ ಸಮಯವಾದರೂ ವಾಪಸ್ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಆದರೆ, ಠೇವಣಿ ಹಣದ ಆಧಾರದ ಮೇಲೆ ಸಾಲ ಪಡೆಯಲು ಇಲ್ಲಿ ಸಾಧ್ಯವಾಗುವುದಿಲ್ಲ.

17 ಕೋಟಿ ಉಳಿತಾಯ ಖಾತೆಗಳಿಗೆ ಲಾಭ!
ಈಗಾಗಲೇ ಅಂಚೆ ಕಚೇರಿಯಲ್ಲಿ ಇರುವ 17 ಕೋಟಿ ಉಳಿತಾಯ ಖಾತೆಗಳಿಗೆ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಯ ಲಾಭ ಸಿಗಲಿದೆ. ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಯುಪಿಐ ಮತ್ತು ಬಿಲ್ ಪಾವತಿ ಸೇವೆಗಳು ಈ ಎಲ್ಲಾ ಖಾತೆ ಬಳಕೆದಾರರಿಗೆ ಲಭ್ಯವಾಗಲಿದ್ದು, ಎಲ್ಲರೂ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲಿದ್ದಾರೆ.

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?
ಗ್ರಾಹಕರು ಉಳಿತಾಯ ಮಾಡುವ ಹಣಕ್ಕೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಶೇ. 7.3 ರಷ್ಟು ಬಡ್ಡಿಯನ್ನು ನೀಡುತ್ತಿದ್ದರೆ, ಪೇಟಿಎಂ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ. ಆದರೆ, ಸರ್ಕಾರಿ ಅಂಚೆ ಪೇಮೆಂಟ್ ಬ್ಯಾಂಕ್ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿದೆ.

ಅಂತರ್ಜಾಲ ಬ್ಯಾಂಕಿಂಗ್
ಬಸ್, ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್ ಸೇವೆಗಳು ಹಾಗೂ ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಐಎಂಪಿಎಸ್ ಆನ್‌ಲೈನ್ ಸೇವೆಗಳು ಸಹ ಇಲ್ಲಿ ಲಭ್ಯಯಿವೆ. ಜತೆಗೆ ಇತರೆ ಆರ್ಥಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾಲ, ಹೂಡಿಕೆ, ವಿಮಾ ಸೌಲಭ್ಯಗಳನ್ನು ಸಹ ಒದಗಿಸಲಾಗುವುದು ಎಂದು ಅಂಚೆ ಪೇಮೆಂಟ್ಸ್ ಬ್ಯಾಂಕ್ ತಿಳಿಸಿದೆ.


Click it and Unblock the Notifications