ಬ್ಯಾಂಕ್‌ನಿಂದ 6,000ರೂ. ಬಹುಮಾನ! ಈ ಸಂದೇಶ ನಿಮಗೂ ಬಂದಿದೆಯಾ? ಇದರ ಅಸಲಿಯತ್ತೇನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಲ್ಲದೆ ಬ್ಯಾಂಕ್ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಿ ಗ್ರಾಹಕರಿಗೆ ವಂಚಿಸಲಾಗ್ತಿದೆ. ಇಂತಹ ಪ್ರಕರಣಗಳು ಸಾಕಷ್ಟು ಕೇಳಿಬರುತ್ತಿವೆ. ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಸರಿನಲ್ಲಿ ಕೂಡ ಹೊಸ ಸಂದೇಶವೊಂದು ಭಾರಿ ಸಂಚಲನ ಸೃಷ್ಟಿಸಿದೆ.
ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಸರಿನಲ್ಲಿ ಹೊಸ ಸಂದೇಶವೊಂದು ಹರಿದಾಡ್ತಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 130 ನೇ ಸರ್ಕಾರದ ಹಣಕಾಸು ಯೋಜನೆಯಡಿಯಲ್ಲಿ 6,000ರೂ. ಬಹುಮಾನ ನೀಡ್ತಾಇದೆ, ಇದನ್ನು ಪಡೆದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಲಾಗ್ತಿದೆ. ಹಾಗಾದ್ರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಜವಾಗಿಯೂ 6,000ರೂ. ನಿಡ್ತಾ ಇದೆಯಾ? ಇದರ ಬಗ್ಗೆ ಸರ್ಕಾರ ಹೇಳಿದ್ದೇನು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಳೆದ ಕೆಲವು ದಿನಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಹೊಸ ಸಂದೇಶವೊಂದು ಬರುತ್ತಿದೆ. ಹಣಕಾಸಿನ ಯೋಜನೆಗೆ ಸಂಬಂಧಿಸಿ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಲಾಗಿದೆ. ಈ ಸಂದೇಶದಲ್ಲಿ ಸರ್ಕಾರದ ಹಣಕಾಸು ಯೋಜನೆಯಲ್ಲಿ 6,000ರೂ. ಗಳ ಬಹುಮಾನ ಸಿಗಲಿದೆ ಎಂದು ಹೇಳಲಾಗಿದೆ. ಆದರೆ ಸಂದೇಶ ನಕಲಿ ಎಂದು ಸರ್ಕಾರವು ಸ್ಪಷ್ಟಪಡಿಸಿದೆ. ಇದೊಂದು ನಕಲಿ ಸಂದೇಶವಾಗಿದ್ದು, ಜನರನ್ನು ವಂಚಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.
ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರಿಗೆ SMS ಅಥವಾ ವಾಟ್ಸಾಪ್ ಮೂಲಕ ಸಂದೇಶ ಬಂದರೆ ಅದನ್ನು ಕೂಡಲೇ ಡಿಲೀಟ್ ಮಾಡುವುಸು ಸೂಕ್ತ. ಸಂದೇಶದ ಮೂಲಕ ಜನರನ್ನು ದಾರಿ ತಪ್ಪಿಸಿ ಬಳಕೆದಾರರ ಡೇಟಾ ಕದಿಯುವುದಕ್ಕೆ ವಂಚಕರು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. "ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 6,000 ರೂಪಾಯಿ ಮೌಲ್ಯದ ಹಣಕಾಸು ಸಬ್ಸಿಡಿ ಗೆಲ್ಲುವ ಅವಕಾಶ" ಎಂದು ಹೇಳುವ ಈ ಸಂದೇಶ ಶುದ್ಧ ಸುಳ್ಳು ಇದು ಒಂದು ಸ್ಕ್ಯಾಮ್ ಆಗಿದ್ದು, ಇದಕ್ಕೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಎಚ್ಚರಿಕೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಯಾವುದೇ ರೀತಿಯ ಸಬ್ಸಿಡಿ ಬಹುಮಾನ ಗೆಲ್ಲುವ ಅವಕಾಶ ನೀಡಿಲ್ಲ. ಈ ರೀತಿಯ ಸಂದೇಶಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಿ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೇಳಿಕೆಯಲ್ಲಿ PNB ಬ್ರ್ಯಾಂಡ್ ಹೆಸರನ್ನು ವಿವಿಧ ರೀತಿಯ ವಂಚನೆಗಳಲ್ಲಿ ಬಳಸಿಕೊಳ್ಳಲಾಗ್ತಿದೆ. ಈ ವಂಚನೆಗಳ ಮುಖ್ಯ ಉದ್ದೇಶ ಗ್ರಾಹಕರ ಗುರುತಿನ ಕಳ್ಳತನ ಮತ್ತು ಹಣಕಾಸಿನ ವಂಚನೆಯ ಪ್ರಯತ್ನಗಳಾಗಿವೆ ಎಂದು ಹೇಳಿದೆ.
ಅದರಂತೆ ಗ್ರಾಹಕರು ಬ್ಯಾಂಕ್ ಹೆಸರಿನಲ್ಲಿ ಬರುವ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಮುನ್ನೆಚ್ಚರಿಕೆಯ ಹಂತವಾಗಿ, ಫೋನ್ ಕರೆಗಳು ಅಥವಾ ಇಮೇಲ್‌ಗಳ ಮೂಲಕ ಯಾವುದೇ ಗೌಪ್ಯ/ವೈಯಕ್ತಿಕ/ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸದಂತೆ ಸೂಚಿಸಿದೆ. ಹಾಗೆಯೇ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಡೌನ್‌ಲೋಡ್ ಮಾಡದಂತೆ ನಾವು ನಮ್ಮ ಗ್ರಾಹಕರನ್ನು ಒತ್ತಾಯಿಸುತ್ತೇವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ.

ಬ್ಯಾಂಕ್ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಿ ಹಣಕಾಸು ವಂಚಿಸುವ ಪ್ರಕರಣಗಳು ದೇಶದಲ್ಲಿ ಇದೇ ಮೊದಲೇನಲ್ಲ. ಈಗಾಗಲೇ ಎಸ್‌ಬಿಐ, ಹೆಚ್‌ಡಿಎಫ್‌ಸಿ, ಕೆನರಾ ಬ್ಯಾಂಕ್ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಸೃಷ್ಟಿಸಿ ಗ್ರಾಹಕರಿಗೆ ಲಕ್ಷ ಲಕ್ಷ ಹಣ ವಂಚಿಸಿರುವ ಪ್ರಕರಣಗಳು ನಡೆದಿವೆ. ಆದರಿಂದ ಗ್ರಾಹಕರು ಯಾವುದೇ ಬ್ಯಾಂಕ್ ಸಂದೇಶ ಬಂದರೂ ಕೂಡ ಅದರ ಅಸಲಿಯತ್ತನ್ನು ಪರಿಶೀಲಿಸುವುದು ಸೂಕ್ತವಾಗಿದೆ.


Click it and Unblock the Notifications








