ಮೊಬೈಲ್‌ಗೆ ಬಂದ ಮೆಸೇಜ್ ನಂಬಿ 96.57 ಲಕ್ಷ ರೂ. ಕಳೆದುಕೊಂಡ ಭೂಪ!
ಇತ್ತೀಚಿನ ದಿನಗಳಲ್ಲಿ ಫಾರ್ಟ್ ಟೈಂ ಜಾಬ್ ಸ್ಕ್ಯಾಮ್ ಅತಿ ಹೆಚ್ಚು ಸದ್ದು ಮಾಡ್ತಿದೆ. ವಿವಿಧ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಗಾಳ ಹಾಕುವ ವಂಚಕರು ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ಹೇಳಿ ಹಣ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಇದೇ ಮಾದರಿಯ ಪ್ರಕರಣ ಪುಣೆಯಲ್ಲಿ ನಡೆದಿದೆ.
ಹೌದು, ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೊಂದು ಆನ್‌ಲೈನ್ ಸ್ಕ್ಯಾಮ್ ಪ್ರಕರಣ ದಾಖಲಾಗಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಪರಿಚಯವಾದ ವಂಚಕರು ವ್ಯಕ್ತಿಯೊಬ್ಬರಿಂದ ಸುಮಾರು ಒಂದು ಕೋಟಿಯಷ್ಟು ಹಣವನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಪುಣೆಯಲ್ಲಿ ವಂಚಕರು ಸಂತ್ರಸ್ಥನಿಗೆ ಗಾಳ ಹಾಕಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೈಬರ್ ವಂಚಕರು ಜನರನ್ನು ಎಷ್ಟು ನಾಜೂಕಾಗಿ ಯಾಮಾರಿಸುತ್ತಾರೆ ಅನ್ನೊದಕ್ಕೆ ಇದೊಂದು ಸ್ಪಷ್ಟ ಉದಾಹರಣೆ ಎನ್ನಬಹುದು. ಮಹಾರಾಷ್ಟ್ರದ ಪುಣೆಯಲ್ಲಿ ಸೈಬರ್ ವಂಚಕರಿಂದ ಮೋಸ ಹೋಗಿರುವ ಸಂತ್ರಸ್ಥನು ಜಾಹಿರಾತು ಸಿನಿಮಾ ತಯಾರಕನಾಗಿದ್ದಾನೆ. ಈತನ ಮೊಬೈಲ್‌ಗೆ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಸಂದೇಶವನ್ನು ಕಳುಹಿಸಿದ ವಂಚಕರು ಈತನನ್ನು ತಮ್ಮ ಬಲೆಗೆ ಕೆಡವಿದ್ದೆ ರೋಚಕವಾಗಿದೆ. ಮೊದಲಿಗೆ ಸಂತ್ರಸ್ಥನಿಗೆ ವೆಲ್ಕಮ್ ಬೋನಸ್ ರೂಪದಲ್ಲಿ ಹತ್ತು ಸಾವಿರವನ್ನು ನೀಡಿದ್ದರು ಅನ್ನೊದು ಇಲ್ಲಿ ಇಂಟ್ರೆಸ್ಟಿಂಗ್ ವಿಚಾರ.
ಪುಣೆ ಟೈಮ್ಸ್ ಮಿರರ್ ವರದಿಯ ಪ್ರಕಾರ, ವಂಚಕರು ಸೆಪ್ಟೆಂಬರ್ 25 ಮತ್ತು ನವೆಂಬರ್ 5 ರ ನಡುವೆ 56 ವರ್ಷದ ಸಂತ್ರಸ್ಥನಿಗೆ 96.57 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ. ಮೊದಲಿಗೆ ಟೆಕ್ಸ್ಟ್ ಮೆಸೇಜ್ ಮಾಡಿರುವ ವಂಚಕರು ಸಂತ್ರಸ್ಥನಿಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಮಾಹಿತಿ ನೀಡಿದ್ದಾರೆ. ವಂಚಕರ ಮಾತು ನಂಬಿದ ಸಂತ್ರಸ್ಥ ಅಲ್ಲಿ ನೀಡಲಾಗಿದ್ದ ಸಂಖ್ಯೆಗೆ ಕರೆ ಮಾಡಿದ್ದಾನೆ. ನಂತರ ಅವರು ಸೂಚಿಸಿದ ಚಾಟ್ ಅಪ್ಲಿಕೇಶನ್‌ನಲ್ಲಿ ಗ್ರೂಪ್‌ಗೆ ತನ್ನ ಮೊಬೈಲ್ ನಂಬರ್ ಸೇರ್ಪಡೆ ಮಾಡಿದ್ದಾನೆ.

ಇನ್ನು ವಂಚಕರು ಹೇಳಿದ್ದಂತೆ ಪಾರ್ಟ್ ಟೈಂ ಜಾಬ್ ಮಾಡಲು ಸಂತ್ರಸ್ಥ ಒಪ್ಪಿಕೊಂಡಾಗ ಆತನಿಗೆ ವೆಲ್ಕಮ್ ಬೋನಸ್ ರೂಪದಲ್ಲಿ 10,000ರೂ. ಹಣ ಪಾವತಿಸಿದ್ದಾರೆ. ಈ ಮೂಲಕ ಸಂತ್ರಸ್ಥನ ನಂಬಿಕೆಯನ್ನು ಗಳಿಸಿಕೊಳ್ಳುವ ಪ್ರಯತ್ನವನ್ನು ವಂಚಕರು ಮಾಡಿದ್ದಾರೆ. ಸಂತ್ರಸ್ಥ ಸಂಪೂರ್ಣವಾಗಿ ವಂಚಕರನ್ನು ನಂಬಿದ ನಂತರ ವಂಚಕರು ಹೆಚ್ಚಿನ ಆದಾಯ ಗಳಿಸುವುದಕ್ಕೆ ಕೆಲವು ಪ್ರಿಪೇಯ್ಡ್ ಕಾರ್ಯಗಳನ್ನು ಮಾಡುವುದಕ್ಕೆ ಸೂಚಿಸಿದ್ದಾರೆ. ಅಲ್ಲದೆ ಇದಕ್ಕೆ ಹೆಚ್ಚಿನ ಹಣ ಪಾವತಿ ಮಾಡುವುದಕ್ಕೆ ಸೂಚಿಸಿದ್ದಾರೆ.
ಇಲ್ಲಿ ವಂಚಕರು ಸಂತ್ರಸ್ಥನಿಗೆ ಟ್ರಾವೆಲ್ ಏಜೆನ್ಸಿಯನ್ನು ರೇಟಿಂಗ್ ಮತ್ತು ಪರಿಶೀಲಿಸುವ ಕೆಲಸವನ್ನು ಮಾಡಲು ಸೂಚಿಸಿದ್ದಾರೆ. ನಂತರ ಹೆಚ್ಚಿನ ಆದಾಯಕ್ಕಾಗಿ ಎರಡು ಕಂತುಗಳಲ್ಲಿ 21,990ರೂ. ಪಾವತಿಸುವಂತೆ ಹೇಳಿದ್ದಾರೆ. ನಂತರ ವಂಚಕರು ಸಂತ್ರಸ್ತರಿಗೆ 24,809 ರೂ. ನಂತರ ಎಂಟು ಬಾರಿ ಪರಿಶೀಲನೆ ನಡೆಸಿ 80 ಸಾವಿರ ರೂಪಾಯಿ ನೀಡುವಂತೆ ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ ಒಂದು ಲಕ್ಷ, ನಂತರ 35.25 ಲಕ್ಷ ರೂ. ಪಾವತಿಸಿದ್ದಾರೆ.

ಇದರಿಂದ ಯಾವುದೇ ಕಮಿಷನ್ ಸಿಗಲಿಲ್ಲ, ಕಮಿಷನ್ ಪಡೆದುಕೊಳ್ಳಬೇಕಾದರೆ ನೀವು 61.32 ಲಕ್ಷ ರೂ. ನೀಡುವಂತೆ ಹೇಳಿದ್ದಾರೆ. ಇದಾದ ನಂತರವು ಯಾವುದೇ ಹಣ ವಾಪಾಸ್ ಬಾರದೇ ಹೋದಾಗ ತಾನು ಮೋಸ ಹೋಗಿರುವುದು ಸಂತ್ರಸ್ಥನಿಗೆ ಅರಿವಾಗಿದೆ. ಇಲ್ಲಿ ಸಂತ್ರಸ್ಥನು ವಂಚಕರಿಗೆ ನೆಟ್ ಬ್ಯಾಂಕಿಂಗ್, ಜಿ-ಪೇ ಮತ್ತು ಪೇಟಿಎಂ ಸೇವೆಗಳ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ 58 ವಹಿವಾಟುಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಹೀಗೆ ಸಂತ್ರಸ್ಥನಿಂದ ಹಣ ಪಡೆದುಕೊಂಡ ವಂಚಕರು ತಮ್ಮ ನಂಬರ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.


Click it and Unblock the Notifications








