'ಮೊಬೈಲ್ ವಾಲೆಟ್' ಬಳಕೆದಾರರು ತಿಳಿಯಲೇಬೇಕಾದ ಹೊಸ 6 ನಿಯಮಗಳು ಇವು!!
ಭಾರತದಲ್ಲಿ ಮೊಬೈಲ್ ವಾಲೆಟ್ ಬಳಕೆ ಹೆಚ್ಚಾದಂತೆ ಆರ್‌ಬಿಐ ಹೊಸ ನಿಯಮಗಳ ಮೂಲಕ ಗ್ರಾಹಕರ ರಕ್ಷಣೆಗೆ ಮುಂದಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ವಾಲೆಟ್ ಬಳಕೆಯ ಸುರಕ್ಷತೆಗಾಗಿನೀತಿ ನಿರೂಪಣೆಗಳನ್ನು ಆರ್‌ಬಿಐ ಜಾರಿಗೆ ತಂದಿದ್ದು, ವಾಲೆಟ್ ಸೇವೆಗಳನ್ನು ಒದಗಿಸುತ್ತಿರುವ ಕಂಪೆನಿಗಳು ಸೇರಿದಂತೆ ಬಳಕೆದಾರರು ಕೂಡ ಇವುಗಳ ಬಗ್ಗೆ ತಿಳಿಯಲೇಬೇಕಿದೆ.
ಹೌದು, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಹಣಕಾಸು ವ್ಯವಸ್ಥೆಗಳಿಗೂ ನೀಡಿರುವ ಅತ್ಯಂತ ಸುರಕ್ಷತಾ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೊಬೈಲ್ ವಾಲೆಟ್‌ಗಳಿಗೂ ಜಾರಿಗೆ ತರಲಾಗಿದೆ. ವಹಿವಾಟಿನ ಬಗ್ಗೆ ಕಡ್ಡಾಯ ಮಾಹಿತಿ, ದೂರು ಸೇರಿದಂತೆ ವಾಲೆಟ್ ಕೈಗೊಳ್ಳುಬೇಕಾದ ಕ್ರಮಗಳು ಯಾವುವು ಎಂಬುದನ್ನು ಆರ್‌ಬಿಐ ಪ್ರಕಟಿಸಿದೆ.

ಇನ್ಮುಂದೆ ಮೊಬೈಲ್ ವಾಲೆಟ್ ಕಂಪನಿಯ ನಿರ್ಲಕ್ಷ್ಯ ಅಥವಾ ಆಪ್ ನ್ಯೂನತೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ ಗ್ರಾಹಕರಿಗೆ ಶೀಘ್ರದಲ್ಲೇ ಹಣವನ್ನು ವಾಪಸ್ ಮಾಡಬೇಕಿದೆ. ಹಾಗಾದರೆ, 'ಮೊಬೈಲ್ ವಾಲೆಟ್' ಬಳಕೆದಾರರು ತಿಳಿಯಲೇಬೇಕಾದ ಹೊಸ ಆರ್‌ಬಿಐ ನಿಯಮಗಳು ಯಾವುವು? ಬಳಕೆದಾರರಿಗೆ ಸಿಹಿಸುದ್ದಿ ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕೆವೈಸಿ ಪ್ರಕ್ರಿಯೆ
ಮೊಬೈಲ್ ವಾಲೆಟ್ ಕಂಪನಿಗಳು ಫೆಬ್ರವರಿ 28ರ ಒಳಗಾಗಿ ‘ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ)' ಪ್ರಕ್ರಿಯೆ ಪೂರ್ಣಗೊಳಿಸಬೇಕು. ‘ಕೆವೈಸಿ' ಪ್ರಕ್ರಿಯೆ ಪೂರ್ಣವಾಗದೆ ಹೋದರೆ ಮಾರ್ಚ್ 1 ರಿಂದ ಮೊಬೈಲ್ ವಾಲೆಟ್‌ಗಳ ಕಾರ್ಯನಿರ್ವಹಣೆಗೆ ಧಕ್ಕೆ ಒದಗಲಿದೆ. ಮೊಬೈಲ್ ವಾಲೆಟ್ ಗ್ರಾಹಕರೂ ಸಹ ‘ಕೆವೈಸಿ' ಮಾಡಿಕೊಳ್ಳದಿದ್ದರೆ ವಾಲೆಟ್ ಬಳಕೆ ಸಾಧ್ಯವಾಗುವುದಿಲ್ಲ.

ವಂಚನೆ ನಡೆದರೆ ಹಣ ವಾಪಸ್!
ಕಂಪನಿಯ ನಿರ್ಲಕ್ಷ್ಯ ಅಥವಾ ಆಪ್ ನ್ಯೂನತೆಯಿಂ ಮೊಬೈಲ್ ವಾಲೆಟ್ ಗ್ರಾಹಕರು ಹಣ ಕಳೆದುಕೊಂಡರೆ, ಈ ಬಗ್ಗೆ ದೂರು ದಾಖಲಾದ 3 ದಿನಗಳಲ್ಲಿ ಸಂಸ್ಥೆಯು ಹಣವನ್ನು ಮರುಪಾವತಿಸಬೇಕು. ಒಂದು ವೇಳೆ ಬಳಕೆದಾರ ಈ ಬಗ್ಗೆ ದೂರು ನೀಡದಿದ್ದರೂ ಸಹ ಕಂಪನಿಯೇ ಹಣ ಮರುಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.

4 ರಿಂದ 7 ದಿನಗಳಲ್ಲಿ ದೂರು ನೀಡಿದರೆ?
ಒಂದು ವೇಳೆ ಗ್ರಾಹಕರು ಹಣ ಕಳೆದುಕೊಂಡ ಬಗ್ಗೆ 4 ರಿಂದ 7 ದಿನಗಳಲ್ಲಿ ದೂರು ನೀಡಿದರೆ, ವಹಿವಾಟಿನ ಹಣ ಅಥವಾ ₹10,000 ಇದರಲ್ಲಿ ಯಾವುದು ಸಣ್ಣ ಮೊತ್ತವೊ ಅದನ್ನು ಕಂಪನಿ ಗ್ರಾಹಕರಿಗೆ ಮರುಪಾವತಿಸಬೇಕು. ಒಂದು ವೇಳೆ ವಂಚನೆ ನಡೆದು 7 ದಿನಗಳ ನಂತರ ದೂರು ನೀಡಿದರೆ ಕಂಪನಿಯ ನಿಯಮದ ಪ್ರಕಾರ ಹಣ ಮರುಪಾವತಿ ಮಾಡಲಾಗುತ್ತದೆ.

ಗ್ರಾಹಕರಿಗೆ ತಕ್ಷಣ ಸಂದೇಶ
ಇನ್ಮುಂದೆ ಮೊಬೈಲ್ ಮೂಲಕ ನಡೆಸಿದ ವಹಿವಾಟಿನ ಬಗ್ಗೆ ಗ್ರಾಹಕರಿಗೆ ತಕ್ಷಣ ಸಂದೇಶ ಬರುತ್ತದೆ. ಹೀಗೆ ಬರುವ ಸಂದೇಶದಲ್ಲಿ ವಾಲೆಟ್ ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಇ-ಮೇಲ್ ಮಾಹಿತಿ ನೀಡುವುದು ಕಡ್ಡಾಯ. ಒಂದು ವೇಳೆ ವಂಚನೆ ನಡೆದರೆ ಗ್ರಾಹಕರು ಸುಲಭವಾಗಿ ಸಂಸ್ಥೆಯನ್ನು ಸಂಪರ್ಕಿಸಲು ಮತ್ತು ದೂರು ದಾಖಲಿಸಲು ಇದು ನೆರವಾಗಲಿದೆ.

ವಾಲೆಟ್ ಸಂಸ್ಥೆಯಿಂದ ಖಾತರಿ!
ಬಳಕೆದಾರರು ವಹಿವಾಟಿನ ಬಗ್ಗೆ ಎಸ್‌ಎಂಎಸ್, ಇ-ಮೇಲ್ ಹೀಗೆ ಯಾವುದಾದರೂ ರೂಪದಲ್ಲಿ ಸೂಚನೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ವಾಲೆಟ್ ಸಂಸ್ಥೆಯು ಖಾತರಿ ಪಡಿಸಿಕೊಳ್ಳಬೇಕು. ದೂರುಗಳನ್ನು ದಾಖಲಿಸಲು ನೆರವಾಗಲು ಎಲ್ಲಾ ವಾಲೆಟ್ ಸಂಸ್ಥೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವ ಗ್ರಾಹಕ ಸೇವಾ ಸಹಾಯವಾಣಿ ಹೊಂದಿರಬೇಕು.

ಗರಿಷ್ಠ 90 ದಿನಗಳಲ್ಲಿ ಪರಿಹಾರ!
ದೂರು ನೀಡಿದ 3 ದಿನಗಳಲ್ಲಿ ಹಣ ವಾಪಸ್ ಮಾಡಬೇಕು ಮತ್ತು 10 ದಿನಗಳಲ್ಲಿ ಕಂಪನಿಯು ಹಣ ಮರುಪಾವತಿ ಬಗ್ಗೆ ಕ್ರಮಕೈಗೊಳ್ಳಬೇಕು. ಗ್ರಾಹಕರಿಂದ ದಾಖಲಾದ ದೂರನ್ನು ಗರಿಷ್ಠ 90 ದಿನಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ ನಿಯಮದ ಪ್ರಕಾರ ವಂಚನೆಯಾದ ಪೂರ್ತಿ ಹಣವನ್ನು ಸಂಸ್ಥೆ ಮರುಪಾವತಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.


Click it and Unblock the Notifications








