ಅನಿಲ್ ಅಂಬಾನಿಗೆ ಸಂಕಷ್ಟದ ಮೇಲೆ ಸಂಕಷ್ಟ!..ಆರ್‌ಕಾಂ ಈಗ ಎಷ್ಟು ದಿವಾಳಿ ಗೊತ್ತಾ?
ಭಾರತದ ಟೆಲಿಕಾಂನಲ್ಲಿ ಮುಕೇಶ್ ಅಂಬಾನಿ ದಿನದಿಂದ ದಿನಕ್ಕೆ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಲೇ ಇದ್ದರೆ, ಇತ್ತ ಅವರ ತಮ್ಮ ಅನಿಲ್ ಅಂಬಾನಿ ಮಾತ್ರ ದಿವಾಳಿಯಾಗುತ್ತಿದ್ದಾರೆ. ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಮ್ಯುನಿಕೇಷನ್ಸ್ ವಾಪಸ್ ಮಾಡಬೇಕಿರುವ ಸಾಲದ ಮರುಪಾವತಿ ವಿಷಯದಲ್ಲಿ ಕಂಪೆನಿಯಿಂದ ಮತ್ತೊಂದು ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.
ಅಮೆರಿಕನ್ ಟವರ್ ಕಾರ್ಪೊರೇಷನ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಹಾಗೂ ಅದರ ಘಟಕ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್ ಎರಡೂ ಸೇರಿ 144 ಬ್ಯಾಂಕ್ ಖಾತೆಗಳಲ್ಲಿ ಒಟ್ಟಾರೆ ಕೇವಲ 19.34 ಕೋಟಿ ರೂಪಾಯಿಗಳಿವೆ ಎಂದು ಕಂಪೆನಿ ಕೋರ್ಟ್‌ಗೆ ಹೇಳಿಕೊಂಡಿದೆ.

ರಿಲಾಯನ್ಸ್ ಕಮ್ಯುನಿಕೇಷನ್ಸ್ ನಿಂದ 230 ಕೋಟಿ ರೂಪಾಯಿ ಬಾಕಿ ಪಾವತಿ ಆಗಬೇಕಿದೆ. ಇದು ದಿವಾಳಿಯಾದ ಕಂಪನಿ ಎಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರ್ಟ್‌ಗೆ ಅಮೆರಿಕನ್ ಟವರ್ ಕಾರ್ಪೊರೇಷನ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂತಹದೊಂದು ಸುದ್ದಿ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆರ್‌ಕಾಮ್ ನೀಡಿದೆ.
ಇನ್ನು ಇತ್ತೀಚಿಗಷ್ಟೇ ಅನಿಲ್ ಅಂಬಾನಿ ಸೇರಿದಂತೆ ರಿಲಯನ್ಸ್ ಗ್ರೂಪ್ನಬ್ಬರು ಹಿರಿಯ ಅಧಿಕಾರಿಗಳು ಭಾರತ ತೊರೆಯದಂತೆ ತಡೆಗಟ್ಟುವಂತೆ ಕೋರಿ ಸ್ವೀಡನ್ ಮೂಲದ ಎರಿಕ್ಸನ್ ಕಂಪನಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಒಪ್ಪಂದದಂತೆ ರಿಲಾಯನ್ಸ್ ಕಂಪೆನಿ 1,600 ಕೋಟಿ ರೂ. ಹಣ ಪಾವತಿಸಿಲ್ಲದಿರುವುದರಿಂದ ಎರಿಕ್ಸನ್ ಕಂಪನಿ ಸಹ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಆರ್‌ಕಾಂ ಕಂಪೆನಿ ಟೆಲಿಕಾಂ ಉಪಕರಣಗಳ ಪೂರೈಕೆದಾರ ಎರಿಕ್ಸನ್ ಕಂಪನಿಯಿಂದ ಹಲವು ವರ್ಷಗಳ ಕಾಲ ಸಾಕಷ್ಟು ಸರಕನ್ನು ಖರೀದಿಸಿದೆ. ಆದರೆ, ಪೂರ್ತಿ ಹಣವನ್ನು ಪಾವತಿಸದೆ 1150 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಹಣಕ್ಕಾಗಿ ಎರಿಕ್ಸನ್ ರಾಷ್ಟ್ರೀಯ ಕಂಪನಿ ಕಾಯ್ದೆಗಳ ನ್ಯಾಯಾಧಿಕರಣದಲ್ಲಿ ರಿಲಯನ್ಸ್ ವಿರುದ್ಧ ದಿವಾಳಿ ಅರ್ಜಿಗಳನ್ನು ಸಲ್ಲಿಸಿದೆ.
46 ಸಾವಿರ ಕೋಟಿ ರುಪಾಯಿ ಸಾಲದ ಬಾಬ್ತು, ಆದಾಯ ಕುಸಿತ ಹಾಗೂ ಹೆಚ್ಚುತ್ತಿದ್ದ ನಷ್ಟದಿಂದ ಕಳೆದ ವರ್ಷ ಅನಿಲ್ ಅಂಬಾನಿ ಒಡೆತನದ ಕಂಪನಿ, ನಿಸ್ತಂತು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಇದಾದ ನಂತರ ಈಗ ಮತ್ತೆ ಸಾಲ ಮರುಪಾವತಿ ಸುಳಿಯಲ್ಲಿ ಅನಿಲ್ ಅಂಬಾನಿ ಸಿಲುಕಿದ್ದು, ಇದರಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications