ಮುಂದುವರೆದ ಜಿಯೋ ಆರ್ಭಟ..! 100 ಕೋಟಿ ಟೆಲಿಕಾಂ ಗ್ರಾಹಕರನ್ನು ಹೊಂದಿದ ಭಾರತ..!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಆರ್ಭಟ ಮುಂದುವರೆದಿದೆ. ಇದರಿಂದ ಏರ್‌ಟೆಲ್, ಐಡಿಯಾ, ವೊಡಾಫೋನ್‌ಗಳು ಭಾರೀ ಬೆಲೆ ತೆರುತ್ತಿವೆ. ಹೌದು ಸೆಪ್ಟಂಬರ್ ತಿಂಗಳು ಒಂದರಲ್ಲೇ ಮೂರು ಕಂಪನಿಗಳು ಸೇರಿ 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದ್ದು, ಜಿಯೋ ಮುಂದೆ ಮಂಕಾಗುತ್ತಿವೆ.

ಹೌದು, ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಸೆಪ್ಟಂಬರ್‌ನಲ್ಲಿ 1.3 ಕೋಟಿ ಗ್ರಾಹಕರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ. ಆಗಸ್ಟ್ ತಿಂಗಳ ಟೆಲಿಕಾಂ ವರದಿಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ವರದಿ ಬಿಡುಗಡೆ ಮಾಡಿತ್ತು. ಅದಲ್ಲದೇ, ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೆಪ್ಟೆಂಬರ್ ವರದಿಯನ್ನು ಬಿಡುಗಡೆ ಮಾಡಿದ್ದು, ಜಿಯೋ ಮಾತ್ರ ತನ್ನ ಬಳಕೆದಾರರ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಳ್ಳುತ್ತಿದೆ. ಹಾಗಾದ್ರೆ ಬೇರೆ ಟೆಲಿಕಾಂ ಆಪರೇಟರ್‌ಗಳ ಕಥೆಯೇನು ಎಂಬುದನ್ನು ಮುಂದೆ ಓದಿ.

1 ಕೋಟಿ ಗ್ರಾಹಕರು ಕಡಿಮೆ
COAI ವರದಿಯಂತೆ ಸೆಪ್ಟೆಂಬರ್‌ನಲ್ಲಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಭಾರೀ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡಿವೆ. ಮೂರು ಟೆಲಿಕಾಂ ಆಪರೇಟರ್‌ಗಳಿಂದ ಸುಮಾರು 1 ಕೋಟಿಗೂ ಹೆಚ್ಚು ಗ್ರಾಹಕರು ಕಡಿಮೆಯಾಗಿದ್ದಾರೆ. ಅಂದಾಜಿನ ಪ್ರಕಾರ ಈ ಗ್ರಾಹಕರು ಜಿಯೋ ಕಡೆ ಮುಖ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಏರ್‌ಟೆಲ್‌ಗೆ ಭಾರೀ ನಷ್ಟ
ಜಿಯೋ ಎಫೆಕ್ಟ್‌ಗೆ ಭಾರ್ತಿ ಏರ್‌ಟೆಲ್ ಅಕ್ಷರಶಃ ನಡುಗಿರುವುದಂತೂ ಸತ್ಯ. ಹೌದು, ಸೆಪ್ಟೆಂಬರ್‌ನಲ್ಲಿ ಭಾರ್ತಿ ಏರ್‌ಟೆಲ್ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದ್ದು, 23.58 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಏರ್‌ಟೆಲ್‌ನ ಬಳಕೆದಾರರ ಸಂಖ್ಯೆ ಆಗಸ್ಟ್‌ನಲ್ಲಿ 34.58 ಕೋಟಿ ಇತ್ತು, ಆದರೆ, ಸೆಪ್ಟೆಂಬರ್‌ನಲ್ಲಿ ಈ ಸಂಖ್ಯೆ 34.35ಗೆ ಇಳಿಕೆಯಾಗಿದೆ.

ಐಡಿಯಾ ಕಥೆಯೂ ಅದೇ
ಜಿಯೋ ಎಫೆಕ್ಟ್‌ನಿಂದ ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಐಡಿಯಾ ಸೆಲ್ಯುಲರ್ ಕಂಪನಿ 40.61 ಲಕ್ಷ ಗ್ರಾಹಕರನ್ನು ಸೆಪ್ಟೆಂಬರ್‌ನಲ್ಲಿ ಕಳೆದುಕೊಂಡಿದೆ. ಇದರೊಂದಿಗೆ ಆಗಸ್ಟ್‌ನಲ್ಲಿದ್ದ 21.71 ಕೋಟಿ ಗ್ರಾಹಕರ ಸಂಖ್ಯೆ 21.31 ಕೋಟಿಗೆ ಇಳಿದಿದೆ.

ವೊಡಾಫೋನ್‌ನಲ್ಲೂ ಪ್ರಗತಿಯಿಲ್ಲ
ಭಾರತದಲ್ಲಿ ಜಿಯೋ ಎಫೆಕ್ಟ್ ತಡೆಯಲು ಐಡಿಯಾ ಸೆಲ್ಯುಲರ್‌ನೊಂದಿಗೆ ಮಹಾ ಸಮ್ಮಿಲನಗೊಂಡು ಕಾರ್ಯನಿರ್ವಹಿಸುತ್ತಿರುವ ವೊಡಾಫೋನ್ ಸಹ ಏರಿಕೆಯನ್ನು ಕಂಡಿಲ್ಲ. ಸೆಪ್ಟೆಂಬರ್‌ನಲ್ಲಿ 37.67 ಲಕ್ಷ ಗ್ರಾಹಕರನ್ನು ವೊಡಾಫೋನ್ ಕಳೆದುಕೊಳ್ಳುವುದರೊಂದಿಗೆ ಆಗಸ್ಟ್‌ನಲ್ಲಿದ್ದ 22.44 ಕೋಟಿ ಗ್ರಾಹಕರ ಸಂಖ್ಯೆ 22.18 ಕೋಟಿಗೆ ಇಳಿದಿದೆ.

100 ಕೋಟಿ ಗ್ರಾಹಕರು
ಟೆಲಿಕಾಂ ಸಬ್‌ಸ್ಕ್ರೈಬರ್ ಸಂಖ್ಯೆ ಭಾರತದಲ್ಲಿ 100 ಕೋಟಿ ದಾಟಿದ್ದು, ಶತಕದ ಸಾಧನೆಯನ್ನು ಮಾಡಿದೆ. ಆಗಸ್ಟ್ ತಿಂಗಳ ಜಿಯೋ ಗ್ರಾಹಕರ ಸಂಖ್ಯೆಯನ್ನು ಸೇರಿಸಿಕೊಂಡು, ಇತರೆ ಟೆಲಿಕಾಂ ಆಪರೇಟರ್‌ಗಳ ಸೆಪ್ಟೆಂಬರ್ ಮಾಹಿತಿಯನ್ನು ಸೇರಿಸಿರುವ COAI ಭಾರತ ಅಧಿಕೃತವಾಗಿ 101.77 ಕೋಟಿ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದೆ.

ಗ್ರಾಹಕರಿಗೆ ಉತ್ತಮ ಸೇವೆ
ಎಲ್ಲಾ ಆಪರೇಟರ್‌ಗಳೂ ಭಾರತದಾದ್ಯಂತ ಸೇವೆಯನ್ನು ವಿಸ್ತರಿದ್ದು, ಗ್ರಾಹಕರಿಗೆ ಕರೆ ಮತ್ತು ಡೇಟಾದಲ್ಲಿ ಅನೇಕ ವೈವಿಧ್ಯಮಯ ಸೇವೆಗಳನ್ನು ಭಾರೀ ಕಡಿಮೆ ದರದಲ್ಲಿ ನೀಡುತ್ತಿವೆ. ಇದರಿಂದ ಭಾರತೀಯ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು COAIನ ಡೈರೆಕ್ಟರ್ ಜನರಲ್ ರಾಜನ್ ಎಸ್ ಮ್ಯಾಥ್ಯೂ ಹೇಳಿದ್ದಾರೆ.

ಜಿಯೋ ಬಳಕೆದಾರರ ಸಂಖ್ಯೆ ಬಹಿರಂಗವಿಲ್ಲ
ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೆಪ್ಟೆಂಬರ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಿಲಾಯನ್ಸ್ ಜಿಯೋ ಸೇರಿದಂತೆ ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಮತ್ತಿತರ ಆಪರೇಟರ್‌ಗಳ ಬಳಕೆದಾರರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಯಾಕೆಂದರೆ ಇವುಗಳು COAIನ ಸದಸ್ಯರಾಗಿಲ್ಲದಿರುವುದಕ್ಕೆ ಇವುಗಳ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








