ಭಾರತದ ಟೆಲಿಕಾಂ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ಜಿಯೋ..!
ಭಾರತದ ಟೆಲಿಕಾಂ ಪ್ರಪಂಚ ಕಳೆದ 2 ವರ್ಷಗಳಲ್ಲಿ ಅಸಾಮಾನ್ಯ ಬದಲಾವಣೆ ಕಂಡಿದ್ದು, ಎಲ್ಲವೂ ವೇಗವಾಗಿ ಬದಲಾಗುತ್ತಿದೆ. ಹೀಗಾಗಲೇ ಭಾರತವನ್ನು ಡಿಜಿಟಲ್ ಮಾಡುವ ಪ್ರಯತ್ನ ಬರದಿಂದ ಸಾಗಿದ್ದು, ಈ ಪ್ರಕ್ರಿಯೆಗೆ ಟೆಲಿಕಾಂ ಜಗತ್ತು ಸಮರ್ಪಕ ವೇದಿಕೆಯನ್ನು ನಿರ್ಮಿಸುತ್ತಿದೆ. 1GB ಇಂಟರ್‌ನೆಟ್ ಡೇಟಾಗೆ 250 ರೂ. ಕೊಡುತ್ತಿದ್ದ ಕಾಲ ಬದಲಾಗಿ 15 ರೂ.ಗಿಂತ ಕಡಿಮೆ ದರದಲ್ಲಿ 1GB ಡೇಟಾ ಸಿಗುತ್ತಿದೆ. ಮಾರುಕಟ್ಟೆಯಲ್ಲಿನ ಅನೇಖ ಟೆಲಿಕಾಂ ಕಂಪನಿಗಳು ಗ್ರಾಹಕರ ಅಗತ್ಯತೆಗೆ ತಕ್ಕಂತೆ ಸೇವೆ ಸಲ್ಲಿಸಲಾಗದೆ ಗಂಟು ಮೂಟೆ ಕಟ್ಟಿವೆ. ಈ ಬದಲಾವಣೆಗೆ ಯಾರು ಕಾರಣವೆಂದರೆ ಎರಡು ಉತ್ತರ ಸಿಗುತ್ತವೆ. ಅದರಲ್ಲಿ ಒಂದು ಟ್ರಾಯ್ ಮತ್ತು ಎರಡನೇಯದು ಜಿಯೋ.

ಹೌದು, ಭಾರತದ ಟೆಲಿಕಾಂ ಜಗತ್ತು ಇಷ್ಟರ ಮಟ್ಟಿಗೆ ಬದಲಾವಣೆ ಕಾಣಲು ಟ್ರಾಯ್‌ನ ಪಾತ್ರಕ್ಕಿಂತ ಜಿಯೋ ಪ್ರಭಾವ ಬಹಳಷ್ಟಿದೆ. ಕೇವಲ ಎರಡೇ ವರ್ಷಗಳಲ್ಲಿ ಜಿಯೋ ಭಾರತದ ಟೆಲಿಕಾಂ ಜಗತ್ತನ್ನು ತನ್ನ ಬಿಗಿ ಮುಷ್ಟಿಗೆ ತೆಗೆದುಕೊಂಡು ಬಿಟ್ಟಿದೆ. ನಾವೇ ನಂ.1 ಎನ್ನುತ್ತಿದ್ದ ಕಂಪನಿಗಳು ಜಿಯೋ ಎದುರು ಹಲ್ಲು ಕಿತ್ತ ಹಾವಿನಂತಾಗಿವೆ. ಜಿಯೋಗೆ ಪೈಪೋಟಿ ಕೊಡುವ ಸಲುವಾಗಿ ಐಡಿಯಾ ಮತ್ತು ವೊಡಾಫೋನ್ ಮಹಾ ಸಮ್ಮಿಲನ ಮಾಡಿಕೊಂಡಿವೆ. ಇಷ್ಟೇ ಅಲ್ಲದೇ ಜಿಯೋ ಇನ್ನು ಅನೇಕ ಅಂಶಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರವನ್ನು ಬದಲಾಯಿಸಿದೆ. ಅದೇನು ಅಂತ ನೀವೆ ನೋಡಿ.

1. ಇಂಟರ್‌ನೆಟ್ ಬಳಕೆಯಲ್ಲಿ ಏರಿಕೆ
ಭಾರತದಲ್ಲಿ ಡೇಟಾ ಬಳಕೆಯ ಪ್ರಮಾಣ ಈ ಮೊದಲು ತಿಂಗಳಿಗೆ 20 ಕೋಟಿ GB ತಲುಪುತ್ತಿತ್ತು. ಆದರೆ, ಈಗ ತಿಂಗಳಿಗೆ 37 ಕೋಟಿ GB ಡೇಟಾ ಬಳಕೆಯಾಗುತ್ತಿದೆ ಎಂದರೆ ಜಿಯೋ ಪ್ರಭಾವವನ್ನು ನೀವು ಅಂದಾಜಿಸಬಹುದು.

2. ಅಗ್ಗದ ದರ
ನಾವೇಲ್ಲಾ ಮೊದಲು 1GB ಡೇಟಾಗೆ 250 ರೂ.ಗಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿದ್ದೇವು. ಆದರೆ, ಈಗ ಅದೇ 1GB ಡೇಟಾವನ್ನು 15 ರೂ.ಗಿಂತ ಕಡಿಮೆ ದುಡ್ಡಿನಲ್ಲಿ ಬಳಸುತ್ತಿದ್ದೇವೆ.

3. ಭಾರತ ನಂ.1
ಇಂಟರ್‌ನೆಟ್ ಡೇಟಾ ಬಳಕೆಯಲ್ಲಿ ಭಾರತ ಜಿಯೋ ಲಾಂಚ್ ಆಗುವುದಕ್ಕಿಂತ ಮುಂಚೆ 155ನೇ ಸ್ಥಾನವನ್ನು ಹೊಂದಿತ್ತು. ಆದರೆ, ಈಗ ಭಾರತ ಡೇಟಾ ಬಳಕೆಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದೆ. ಇದಕ್ಕೆಲ್ಲ ಕಾರಣ ಜಿಯೋ ಅಲ್ಲದೇ ಮತ್ತೇನು ಯೋಚಿಸಿ.

4. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳ
ಜಿಯೋ ಬರುವುದಕ್ಕಿಂತಲೂ ಮುಂಚೆ ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಇದ್ದರೂ ಸಹ ಹೆಚ್ಚಿನ ಡೇಟಾ ದರದಿಂದ ಅಷ್ಟೊಂದು ಪ್ರಭಾವ ಬೀರಿದ್ದಿಲ್ಲ. ಆದರೆ, 2016ರಲ್ಲಿ ಜಿಯೋ ಲಾಂಚ್ ಆದ ಮೊದಲ ವರ್ಷದಲ್ಲಿ 70 ಮಿಲಿಯನ್ ಬಳಕೆದಾರರು ಸಾಮಾಜಿಕ ಜಾಲತಾಣಕ್ಕೆ ಸೇರಿದ್ದಾರೆ.

5. ಮೂರಕ್ಕಿಳಿದ ಸ್ಪರ್ಧೆ
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಲೆಕ್ಕವಿರದಷ್ಟು ಟೆಲಿಕಾಂ ಆಪರೇಟರ್‌ಗಳು ಇದ್ದರು. ಯುನಿನಾರ್, ವರ್ಜಿನ್‌ನಂತಹ ಕಂಪನಿಗಳು ಸಹ ಭಾರತದಲ್ಲಿ ನೆಲೆ ಕಂಡಿದ್ದವು. ಆದರೆ, ಜಿಯೋ ಲಾಂಚ್ ಆದ ನಂತರ ಈ ಸ್ಪರ್ಧೆ ಏರ್‌ಟೆಲ್, ವೊಡಾಫೋನ್-ಐಡಿಯಾ, ಜಿಯೋಗೆ ಮಾತ್ರ ಸೀಮಿತವಾಯಿತು. ಬಿಎಸ್‌ಎನ್‌ಎಲ್ ಮತ್ತು ಟಾಟಾ ಸಹ ಸ್ಪರ್ಧೆಯಿಂದ ಹಿಂದುಳಿಯುವಂತೆ ಜಿಯೋ ಮಾಡಿತು.

6. ಡೇಟಾ ಮತ್ತು ಕರೆ ಬಳಕೆಯಲ್ಲಿ ಹೆಚ್ಚಳ
ಜಿಯೋ ಬಂದ ನಂತರ ಒಬ್ಬ ಬಳಕೆದಾರ ತಿಂಗಳಿಗೆ ಸಾಮಾನ್ಯವಾಗಿ 10.6 GB ಡೇಟಾವನ್ನು ಬಳಸುತ್ತಿದ್ದಾರೆ. ಈ ಪ್ರಮಾಣ ಮೊದಲು ಗಣನೀಯ ಪ್ರಮಾಣದಲ್ಲಿ ಕಡಿಮೆಯಿತ್ತು. ಗ್ರಾಹಕ ತಿಂಗಳಿಗೆ 744 ನಿಮಿಷಗಳನ್ನು ಕರೆಗಳಿಗಾಗಿ ಬಳಸುತ್ತಿದ್ದಾನೆ.

7. 4G-VoLTE ಬೆಂಬಲಿತ ಸ್ಮಾರ್ಟ್‌ಫೋನ್‌ಗಳು
ಜಿಯೋ ಬರುವುದಕ್ಕಿಂತ ಮುಂಚೆ ಭಾರತದಲ್ಲಿ 4G-VoLTE ಅಷ್ಟೇನು ಹೆಚ್ಚು ಬಳಕೆಯಲ್ಲಿದ್ದಿಲ್ಲ. 2016ರಲ್ಲಿ ಜಿಯೋ ಲಾಂಚ್ ಆದ ನಂತರ ಭಾರತದಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳೆಲ್ಲ 4G-VoLTE ಬೆಂಬಲಿಸುವ ಫೀಚರ್‌ಗಳನ್ನು ಹೊಂದಿ ಬಿಡುಗಡೆಯಾಗಿವೆ.

8. 215 ಮಿಲಿಯನ್ ಬಳಕೆದಾರರು
ಕೇವಲ 2 ವರ್ಷದಲ್ಲಿ ಜಿಯೋ ದೊಡ್ಡ ಸಾಧನೆಯನ್ನೇ ಮಾಡಿದೆ. ಈ ವರ್ಷದ ಜೂನ್ ಅಂತ್ಯಕ್ಕೆ ಜಿಯೋ 215 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಗ್ರಾಹಕರ ಪ್ರಮಾಣದಲ್ಲಿ ಭಾರತದಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.


Click it and Unblock the Notifications








